ನೀಟ್ ಅಕ್ರಮ ಖಂಡಿಸಿ ಶಿವಮೊಗ್ಗದ ಮಹಾವೀರ ವೃತ್ತದಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಆರ್.ಪ್ರಸನ್ನಕುಮಾರ್ ಮಾತನಾಡಿದರು. ಕಲಗೋಡು ರತ್ನಾಕರ್, ಎಚ್.ಎಸ್.ಸುಂದರೇಶ್, ಎಸ್.ಕೆ.ಮರಿಯಪ್ಪ, ಗಿರೀಶ್, ರಂಗನಾಥ್, ನಾಗರಾಜ ಕಂಕಾರಿ, ವಿಜಯಲಕ್ಷ್ಮೀ ಪಾಟೀಲ್ ಇದ್ದರು.
- ನೀಟ್ ಅಕ್ರಮ ಖಂಡಿಸಿ ಜಿಲ್ಲಾದ್ಯಂತ ಪ್ರತಿಭಟನೆ
- ಜಂತರ್ ಮಂತರ್ ಬಳಿ ಲಾಠಿಚಾರ್ಜ್ ಮಾಡಿದ್ದಕ್ಕೆ ಖಂಡನೆ
ಶಿವಮೊಗ್ಗ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳ (students) ಪ್ರತಿಭಟನೆ ನಡೆಯುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ (modi) ಮೌನವಾಗಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ (congress) ಮುಖಂಡರು, ಕಾರ್ಯಕರ್ತರು ನಗರದ ಮಹಾವೀರ ವೃತ್ತದಲ್ಲಿ ಗುರುವಾರ ರಸ್ತೆತಡೆ ನಡೆಸಿದರು.
ವಿದ್ಯಾರ್ಥಿಗಳ ಪರವಾಗಿ ಪ್ರತಿಭಟನೆ ನಡೆಸುತ್ತಿರುವವರ ಮಾತು ಕೇಳುವ ಸೌಜನ್ಯವೂ ಕೇಂದ್ರ ಸರ್ಕಾರಕ್ಕಿಲ್ಲ. ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದವರನ್ನೂ ಸರ್ಕಾರ ಹೈಜಾಕ್ ಮಾಡಿದೆ. ನೀಟ್ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸುವಲ್ಲಿ ವಿಫಲವಾಗಿರುವ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಕೇಂದ್ರ ಸರ್ಕಾರ ರಕ್ಷಣೆ ಮಾಡುತ್ತಿದೆ. ವಿದ್ಯಾರ್ಥಿಗಳ ಬೇಡಿಕೆಯನ್ನು ಕಡೆಗಣಿಸಲಾಗುತ್ತಿದೆ. ಆದರೆ ವಿದ್ಯಾರ್ಥಿಗಳ ಪರ ಪ್ರತಿಭಟಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಬಂಧಿಸಿದ್ದು ಸರಿಯಲ್ಲ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ಕಚೇರಿಗೆ ಮುತ್ತಿಗೆ ಯತ್ನ
ಮಹಾವೀರ ವೃತ್ತದಲ್ಲಿ ಪ್ರತಿಭಟನೆ ಮುಗಿಸಿದ ಬಳಿಕ ಕಾಂಗ್ರೆಸ್‌ನ ಯುವ ಮುಖಂಡರು ಬಿಜೆಪಿ ಜಿಲ್ಲಾ ಕಚೇರಿಗೆ ಮುತ್ತಿಗೆ ಹಾಕಲು ಮುಂದಾಯಿತು. ಬೆರಳೆಣಿಕೆಯಷ್ಟು ಪೊಲೀಸರು ಈ ಗುಂಪನ್ನು ನಿಯಂತ್ರಿಸಲಾಗದೆ ಅಸಹಾಯಕರಾಗಿದ್ದರು.
ಬಿಜೆಪಿ ಕಚೇರಿ ಆವರಣದಲ್ಲಿ ತಳ್ಳಾಟ, ನೂಕಾಟವೂ ನಡೆಯಿತು. ಅಲ್ಲಿದ್ದ ಕೆಲ ದ್ವಿಚಕ್ರ ವಾಹನಗಳಿಗೆ ಸಣ್ಣ ಪುಟ್ಟ ಹಾನಿಯೂ ಆಯಿತು. ಪೊಲೀಸರು ಹರಸಾಹಸ ಮಾಡಿ ಕೆಲ ಕಾಂಗ್ರೆಸಿಗರನ್ನು ಬಂಧಿಸಿ ಕರೆದೊಯ್ದರು.
ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಮಾಜಿ ಮೇಯರ್ ಎಸ್.ಕೆ.ಮರಿಯಪ್ಪ, ಪ್ರಮುಖರಾದ ನಾಗರಾಜ ಕಂಕಾರಿ, ರಂಗನಾಥ್, ಗಿರೀಶ್, ವಿಜಯಲಕ್ಷ್ಮೀ ಪಾಟೀಲ್ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಬಿಜೆಪಿ ಕಚೇರಿ ಎದುರು ಭದ್ರತೆಗೆಂದು ಪೊಲೀಸರನ್ನು ಕರೆತಂದಿದ್ದ ವಾಹನವೊಂದರ ಮೇಲೇರಿದ ಕಾಂಗ್ರೆಸ್ ಯುವ ಮುಖಂಡನೋರ್ವ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ಘೋಷಣೆ ಕೂಗಿದರು. ಈ ಕೃತ್ಯ ನಡೆಯುತ್ತಿದ್ದರೂ ಪೊಲೀಸರು ಮೂಕಪ್ರೇಕ್ಷಕರಂತೆ ನಿಂತಿದ್ದರು. ಇದು ಬಿಜೆಪಿ ಮುಖಂಡರ ಆಕ್ರೋಶಕ್ಕೆ ಕಾರಣವಾಯಿತು. ಇನ್ನೊಂದೆಡೆ ಬ್ಯಾರಿಕೇಡ್ ಹಾರಿಕೊಂಡು ಕೆಲವರು ಬಿಜೆಪಿ ಕಚೇರಿಯತ್ತ ನುಗ್ಗುವ ಪ್ರಯತ್ನ ಮಾಡಿದರು.
ನಮ್ಮ ಕಚೇರಿಯನ್ನು ನಾವೇ ರಕ್ಷಿಸಿಕೊಳ್ಳುತ್ತೇವೆ. ಪೊಲೀಸರು ಕಾಂಗ್ರೆಸಿಗರ ರಕ್ಷಣೆಗೆ ನಿಂತಿದ್ದಾರೆ. ಅವರು ನಮಗೆ ರಕ್ಷಣೆ ನೀಡುವುದಿಲ್ಲ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ.ಹರಿಕೃಷ್ಣ ಮುಂತಾದವರು ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ಪ್ರತಿಭಟನಾಕಾರರನ್ನು ತಡೆಯುವುದು ಬಿಟ್ಟು ಬಿಜೆಪಿ ಕಚೇರಿಯ ಬಾಗಿಲೆಳೆಯಲು ಪೊಲೀಸರು ಮುಂದಾಗಿದ್ದು ಅಕ್ಷಮ್ಯ. ನಮ್ಮ ಕಚೇರಿಯ ಪೀಠೋಪಕರಣ ಹಾನಿ ಮಾಡಲು ಕಾಂಗ್ರೆಸಿಗರು ಯತ್ನಿಸಿದ್ದಾರೆ. ಪೊಲೀಸರನ್ನು ಬಳಸಿಕೊಂಡು ನಮ್ಮನ್ನು ಹೆದರಿಸಬಹುದೆಂದು ಸಿಎಂ ಡಿ.ಕೆ.ಶಿವಕುಮಾರ್ ಭಾವಿಸಿದ್ದರೆ ಅದೆಂದಿಗೂ ಕೈಗೂಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.