ಶಾಸಕ ಎಸ್.ಎನ್.ಚನ್ನಬಸಪ್ಪ 
ಶಿವಮೊಗ್ಗ

ಭಯೋತ್ಪಾದಕನನ್ನು ಗೌರವಿಸಿದ ಪಕ್ಷಕ್ಕೆ ಕಾಂಗ್ರೆಸ್ ಬೆಂಬಲ | S.N.Channabasappa

ಪ್ರಮುಖ ಮುಖ್ಯಾಂಶಗಳು

  • ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಗೆ ಸ್ಪಷ್ಟತೆಯೇ ಇಲ್ಲ
  • ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿರುವ ಪಕ್ಷಗಳಿಗೆ ಕಾಂಗ್ರೆಸ್ ಸಹಕಾರ
  • ಶಿವಮೊಗ್ಗದಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ ಟೀಕೆ
ಶಿವಮೊಗ್ಗ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆಗೆ ಕಾರಣವಾದ ಎಲ್‌ಟಿಟಿಇ(LTTE) ನಾಯಕ ಪ್ರಭಾಕರನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದ ತಮಿಳುನಾಡಿನ ಟಿವಿಕೆ ಪಕ್ಷಕ್ಕೆ ಕಾಂಗ್ರೆಸ್ ಬೆಂಬಲ ನೀಡಿ ಸರ್ಕಾರ ರಚನೆಗೆ ಕಾರಣವಾಗಿರುವುದು ವಿಪರ್ಯಾಸ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ(S.N.Channabasappa) ಟೀಕಿಸಿದರು.
ಭಾರತದ ವಿಭಜನೆಯಾದ ನಂತರ ಭಯೋತ್ಪಾದನೆ ನಡೆಯುತ್ತಲೇ ಇದೆ. ವಿ.ಪಿ.ಸಿಂಗ್(V.P.Singh) ಪ್ರಧಾನಿ ಆಗಿದ್ದಾಗ ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ದಿನಾಚರಣೆ ಜಾರಿಗೆ ತಂದಿದ್ದರು. ತದನಂತರ ಕೇಂದ್ರದಲ್ಲಿ ಅನೇಕ ವರ್ಷ ಆಡಳಿತ ನಡೆಸಿದ ಕಾಂಗ್ರೆಸ್(Congress) ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿರುವ ಪಕ್ಷಗಳಿಗೆ ಸಹಕಾರ ನೀಡಿತು. ಹಾಗಾಗಿ ಕಾಂಗ್ರೆಸ್ ಇಡೀ ದೇಶದ ಜನತೆಯ ಕ್ಷಮೆ ಕೇಳಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ದೇಶದಲ್ಲಿ 1970ರಿಂದ 2004ರವರೆಗೆ 12 ಸಾವಿರ ಜನರು ಭಯೋತ್ಪಾದನೆ(Terrorist)ಯಿಂದ ಮೃತಪಟ್ಟಿದ್ದಾರೆ. 2004ರಿಂದ 2014ರ ಅವಧಿಯಲ್ಲಿ 1,850 ಭದ್ರತಾ ಸಿಬ್ಬಂದಿ(Security guard) ಭಯೋತ್ಪಾದಕ ದಾಳಿಗೆ ತುತ್ತಾಗಿದ್ದಾರೆ. ಇದು ಕಾಂಗ್ರೆಸ್ ಪಕ್ಷಕ್ಕೆ ಭಯೋತ್ಪಾದಕರ ಬಗ್ಗೆ ಮೃದು ಧೋರಣೆಯನ್ನು ಎತ್ತಿ ತೋರಿಸುತ್ತದೆ. ಒಂದೆಡೆ ಭಯೋತ್ಪಾದನಾ ವಿರೋಧಿ ನೀತಿ, ಇನ್ನೊಂದೆಡೆ ಭಯೋತ್ಪಾದಕರನ್ನು ಗೌರವಿಸುವ ಪಕ್ಷಕ್ಕೆ ಸಹಕಾರ ನೀಡುವ ಕಾಂಗ್ರೆಸ್ ವರ್ತನೆ ಸರಿಯೇ ಎಂದು ಪ್ರಶ್ನಿಸಿದರು.
ಭಯೋತ್ಪಾದಕರ ದಾಳಿಯಲ್ಲಿ ತಂದೆಯನ್ನು ಕಳೆದುಕೊಂಡ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ(Rahul Gandhi) ಯಾರಿಗೆ ಬೆಂಬಲ ನೀಡುತ್ತಿದ್ದಾರೆ ಎಂಬುದನ್ನು ಕಾಂಗ್ರೆಸ್ ಸ್ಪಷ್ಟಪಡಿಸಬೇಕಿದೆ. ತಮಿಳುನಾಡಿನಲ್ಲಿ ಟಿವಿಕೆ ಪಕ್ಷಕ್ಕೆ ಸಹಕಾರ ನೀಡುವ ಮೂಲಕ ರಾಹುಲ್ ಗಾಂಧಿ ಅಕ್ಷಮ್ಯ ಅಪರಾಧ ಎಸಗಿದ್ದಾರೆ ಎಂದು ಕಿಡಿಕಾರಿದರು. ಬಿಜೆಪಿ ನಗರಾಧ್ಯಕ್ಷ ಮೋಹನ್ ರೆಡ್ಡಿ, ಪ್ರಮುಖರಾದ ಮಂಜುನಾಥ್ ನವಿಲೆ, ದೀನದಯಾಳ್, ಶ್ರೀನಾಗ್ ಸುದ್ದಿಗೋಷ್ಠಿಯಲ್ಲಿದ್ದರು.
"

ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ನಕ್ಸಲ್‌ಬಾಧಿತ ಜಿಲ್ಲೆಗಳಲ್ಲಿ ನಿರಂತರ ಕಾರ್ಯಾಚರಣೆ ಕೈಗೊಂಡು ನಕ್ಸಲ್‌ಮುಕ್ತ ದೇಶವನ್ನಾಗಿಸಲು ಶ್ರಮಿಸುತ್ತಿದೆ. ಇದರ ಪರಿಣಾಮ ಈಗ ದೇಶದಲ್ಲಿ ನಕ್ಸಲ್‌ಬಾಧಿತ ಜಿಲ್ಲೆಗಳ ಸಂಖ್ಯೆ ಎರಡಕ್ಕೆ ಇಳಿದಿದೆ.

— ಎಸ್.ಎನ್.ಚನ್ನಬಸಪ್ಪ, ಶಾಸಕ