ಶಿವಮೊಗ್ಗದ ಶಿವಪ್ಪನಾಯಕ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಟಿ.ಡಿ.ಮೇಘರಾಜ್ ಮಾತನಾಡಿದರು. ಆರ್.ಕೆ.ಸಿದ್ದರಾಮಣ್ಣ, ಎನ್.ಕೆ.ಜಗದೀಶ್, ಸುರೇಖಾ ಮುರಳೀಧರ್, ಡಿ.ಮೋಹನ್ ರೆಡ್ಡಿ, ಕೆ.ಬಿ.ಅಶೋಕ ನಾಯ್ಕ, ಕೆ.ಜಿ.ಕುಮಾರಸ್ವಾಮಿ, ಚಂದ್ರಶೇಖರ್ ಇತರರಿದ್ದರು. 
ಶಿವಮೊಗ್ಗ

ಕಾಂಗ್ರೆಸ್ ಪಕ್ಷದಿಂದ ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಪ್ರಯತ್ನ I congress party

ಪ್ರಮುಖ ಮುಖ್ಯಾಂಶಗಳು

  • ಕೈ ಕಾರ್ಯಕರ್ತರ ಗೂಂಡಾ ವರ್ತನೆ ಸಹಿಸುವ ಮಾತೇ ಇಲ್ಲ
  • ಶಿವಮೊಗ್ಗದಲ್ಲಿ ಬಿಜೆಪಿ ಮುಖಂಡರಿಂದ ಪ್ರತಿಭಟನೆ
ಶಿವಮೊಗ್ಗ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಮುಂದಿಟ್ಟುಕೊಂಡು ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ. ದೆಹಲಿಯಲ್ಲಿ ನಡೆದ ಘಟನಾವಳಿಗಳ ಹಿಂದೆ ವಿದೇಶಿ ಶಕ್ತಿಗಳ ಕೈವಾಡವಿದೆ. ಕಾಂಗ್ರೆಸ್ (congress) ಮತ್ತಿತರ ಪಕ್ಷಗಳು ಪರಿಸ್ಥಿತಿಯ ಪ್ರಯೋಜನ ಪಡೆಯಲು ಯತ್ನಿಸುತ್ತಿವೆ ಎಂದು ಆರೋಪಿಸಿ ಜಿಲ್ಲಾ ಬಿಜೆಪಿ (bjp)ಮುಖಂಡರು ಶಿವಪ್ಪನಾಯಕ ವೃತ್ತದಲ್ಲಿ ಗುರುವಾರ ಪ್ರತಿಭಟನೆ (protest) ನಡೆಸಿದರು.
ದೇಶದೊಳಗೆ ಆಡಳಿತದಲ್ಲಿ ಅಸ್ಥಿರತೆ ಸೃಷ್ಟಿಸಲು ವಿದೇಶದಿಂದ ಹಣಕಾಸಿನ ನೆರವು ದೊರೆಯುತ್ತಿದೆ. ನೀಟ್ ಹೆಸರಿನಲ್ಲಿ ದೇಶದೊಳಗೆ ಆಕ್ರೋಶ ಹೆಚ್ಚಿಸುವ ಕೆಲಸ ನಡೆಯುತ್ತಿದೆ. ವಿದ್ಯಾರ್ಥಿಗಳ ಹಿತಕ್ಕಿಂತ ಇವರಿಗೆಲ್ಲ ರಾಜಕೀಯ ಲಾಭವೇ ಮುಖ್ಯವಾಗಿದೆ ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಆಕ್ರೋಶ ವ್ಯಕ್ತಪಡಿಸಿದರು.
ಪ್ರಶ್ನೆಪತ್ರಿಕೆ ಸೋರಿಕೆಯಾದ ಬಳಿಕ ಆ ಪರೀಕ್ಷೆಯ ಫಲಿತಾಂಶ ರದ್ದುಪಡಿಸಿ ಪುನಃ ಪರೀಕ್ಷೆ ನಡೆಸಿದ್ದು, ಅದರ ಫಲಿತಾಂಶವೂ ಪ್ರಕಟವಾಗಿದೆ. ಸೋರಿಕೆಗೆ ಕಾರಣರಾದವರ ಬಂಧನವಾಗಿದೆ. ವಿಚಾರಣೆಯೂ ನಡೆಯುತ್ತಿದೆ. ಹೀಗಿರುವಾಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಾಲಿಶವಾಗಿ ಪ್ರಧಾನಿ ಮನೆ ಎದುರು ಪ್ರತಿಭಟನೆ ನಡೆಸುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದರು.
ಕರ್ನಾಟಕದಲ್ಲಿ ಬಿಜೆಪಿ ನಾಯಕರ ಮೇಲೆ ಕಾಂಗ್ರೆಸಿಗರು ಮೊಟ್ಟೆ ಎಸೆದಿರುವುದು ಅಕ್ಷಮ್ಯ. ಇಂತಹ ಗೂಂಡಾ ವರ್ತನೆ ಸಹಿಸುವ ಮಾತೇ ಇಲ್ಲ. ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಕೊಡಬೇಕಾಗುತ್ತದೆ. ಕಾಂಗ್ರೆಸ್ ಕಾರ್ಯಕರ್ತರು ಹದ್ದುಮೀರಿದ ವರ್ತನೆ ತೋರುವುದು ಸರಿಯಲ್ಲ ಎಂದು ಎಚ್ಚರಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ನಗರಾಧ್ಯಕ್ಷ ಡಿ.ಮೋಹನ್ ರೆಡ್ಡಿ, ಮಾಜಿ ಎಂಎಲ್‌ಸಿ ಆರ್.ಕೆ.ಸಿದ್ದರಾಮಣ್ಣ, ಮಾಜಿ ಶಾಸಕರಾದ ಕೆ.ಬಿ.ಅಶೋಕ ನಾಯ್ಕ, ಕೆ.ಜಿ.ಕುಮಾರಸ್ವಾಮಿ, ಪ್ರಮುಖರಾದ ಸುರೇಖಾ ಮುರಳೀಧರ್, ಮಧುರಾ ಶಿವಾನಂದ್, ಪದ್ಮಿನಿ, ಧರ್ಮಪ್ರಸಾದ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಕಚೇರಿ ನುಗ್ಗಲು ಯತ್ನ

ಗುರುವಾರ ಬೆಳಗ್ಗೆ ಕಾಂಗ್ರೆಸ್ ಪ್ರತಿಭಟನೆ ವೇಳೆ ಕೆಲವರು ಬಿಜೆಪಿ ಕಚೇರಿಗೆ ನುಗ್ಗಲು ಯತ್ನಿಸಿದರೆ, ಬಿಜೆಪಿಯ ಕೆಲ ಕಾರ್ಯಕರ್ತರು ಮಧ್ಯಾಹ್ನ ಕಾಂಗ್ರೆಸ್ ಕಚೇರಿಗೆ ನುಗ್ಗುವ ಪ್ರಯತ್ನ ಮಾಡಿದರು. ಕಚೇರಿ ಎದುರು ಅಳವಡಿಸಿದ್ದ ಕಾಂಗ್ರೆಸ್ ನಾಯಕರ ಭಾವಚಿತ್ರವಿದ್ದ ಫ್ಲೆಕ್ಸ್ ಹರಿದುಹಾಕಿದರು. ಕಚೇರಿ ಮೇಲೆ ಮೊಟ್ಟೆ ತೂರಿದರು. ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಉಂಟಾದ ತಳ್ಳಾಟದಲ್ಲಿ ಗಾಯಗೊಂಡ ಬಿಜೆಪಿ ಕಾರ್ಯಕರ್ತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಕೆಲ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ವಿರುದ್ಧ ಪ್ರತಿಭಟನೆಗೆ ಮುಂದಾದರು. ಅಂತಿಮವಾಗಿ ಎರಡೂ ಪಕ್ಷಗಳ ಕಾರ್ಯಕರ್ತರನ್ನು ಪೊಲೀಸರು ವಾಹನದಲ್ಲಿ ಕರೆದೊಯ್ದರು.
ಎಸ್ಪಿಗೆ ದೂರು
ಕಾಂಗ್ರೆಸ್ ಕಾರ್ಯಕರ್ತರು ಪೊಲೀಸರ ಪೂರ್ವಾನುಮತಿ ಪಡೆಯದೆ ನಮ್ಮ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಕಚೇರಿಗೆ ನುಗ್ಗುವ ಯತ್ನ ಮಾಡಿದ್ದಾರೆ. ಪೀಠೋಪಕರಣ ಧ್ವಂಸಗೊಳಿಸಿದ್ದಾರೆ. ಕಚೇರಿ ಮೇಲೆ ಚಪ್ಪಲಿ ತೂರಿದ್ದಾರೆ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೇರಿ ಮೂರ‌್ನಾಲ್ಕು ಮಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಪೊಲೀಸ್ ವಾಹನವೇರಿ ಘೋಷಣೆ ಕೂಗುವ ಮೂಲಕ ಪರೋಕ್ಷವಾಗಿ ಬಿಜೆಪಿ ಕಾರ್ಯಕರ್ತರನ್ನು ಬೆದರಿಸುವ ಯತ್ನ ನಡೆದಿದೆ. ಗೂಂಡಾ ವರ್ತನೆ ತೋರಿದವರು ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಬಿಜೆಪಿ ಮುಖಂಡರು ಎಸ್ಪಿ ಬಿ.ನಿಖಿಲ್ ಅವರಿಗೆ ದೂರು ಸಲ್ಲಿಸಿದರು.