ಶಿಕಾರಿಪುರ ತಾಲೂಕಿನ ಹೊಸೂರಿನ ರಾಮರತಿ ಕೆರೆಗೆ ಶಾಸಕ ಬಿ.ವೈ.ವಿಜಯೇಂದ್ರ ಬಾಗಿನ ಅರ್ಪಿಸಿದರು. ಹನುಮಂತಪ್ಪ, ಅಶೋಕ್, ಕೆ.ಎಸ್.ಗುರುಮೂರ್ತಿ, ರೇಖಾ ರಾಜಶೇಖರ್ ಇತರರಿದ್ದರು.
ಶಿಕಾರಿಪುರ: ಈ ವರ್ಷ ಸಕಾಲಕ್ಕೆ ಮಳೆ ಬಾರದೆ ರೈತರಿಗೆ ಮೆಕ್ಕೆಜೋಳ ಬಿತ್ತನೆ, ಭತ್ತ ನಾಟಿ ಕಾರ್ಯದಲ್ಲಿ ವ್ಯತ್ಯವಾಗಿದೆ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.
ತಾಲೂಕಿನ ಹೊಸೂರಿನ ರಾಮರತಿ ಕೆರೆಗೆ ಬಿಜೆಪಿ ರೈತಮೋರ್ಚಾ, ಮಹಿಳಾ ಮೋರ್ಚಾ, ಗ್ರಾಮಸ್ಥರ ಸಹಕಾರದಿಂದ ಆಯೋಜಿಸಿದ್ದ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಪೂಜೆ ಸಲ್ಲಿಸಿ ಮಾತನಾಡಿದರು.
ತಾಲೂಕಿನಲ್ಲಿ ಮುಂಗಡವಾಗಿ ಬಿತ್ತನೆ ಮಾಡಿದ ಮೆಕ್ಕೆಜೋಳ ಬೆಳೆ ಚೆನ್ನಾಗಿದೆ. ನಂತರ ಬಿತ್ತನೆಯಾಗಿದ್ದು ಕೊಂಚ ಹಾಳಾಗಿದೆ. ತಾಲೂಕಿನಲ್ಲಿ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಗೊಳಿಸಿ ಆ ಮೂಲಕ ತಾಲೂಕಿನ ಕೆರೆಗಳನ್ನು ತುಂಬಿಸಲಾಗುತ್ತಿದೆ. ಇದರಿಂದ ಕೃಷಿಕರು, ಜಾನುವಾರುಗಳಿಗೆ ಅನುಕೂಲವಾಗಿದೆ. ಈ ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ರೈತರು ಯಾವ ಕಾರಣಕ್ಕೂ ಅನಧಿಕೃತವಾಗಿ ನೀರನ್ನು ಉಪಯೋಗಿಸಬಾರದು. ಮಳೆಯಿಂದ ಶೇ.60ರಷ್ಟು ನೀರು ತುಂಬಬೇಕು. ಇನ್ನುಳಿದ ನೀರನ್ನು ತುಂಗಭದ್ರಾ ಏತ ನೀರಾವರಿಯಿಂದ ತುಂಬಿಸಲಾಗುತ್ತಿದೆ. ಶಾಶ್ವತ ನೀರಾವರಿ ನಮ್ಮ ಗುರಿ ಎಂದು ತಿಳಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿಯಿಲ್ಲ ಎಂಬುದು ಬಿಡದಿ ಟೌನ್‌ಶಿಪ್ ಯೋಜನೆಯಲ್ಲಿ ಸಾಬೀತಾಗಿದೆ. ಸ್ಥಳೀಯ ಪ್ರಮುಖರು ಅನಗತ್ಯ ಮಾತನಾಡುವುದು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮಾಡಿ ಹರಿಬಿಡುತ್ತಾರೆ. ಅವರಿಗೆ ವಾಸ್ತವ ಸ್ಥಿತಿ ಗೊತ್ತಿಲ್ಲ. ಅಭಿವೃದ್ಧಿಗೆ ಹಣ ನೀಡುತ್ತಿಲ್ಲ. ಮಂಜೂರಾದ ಹಣವನ್ನೇ ಸರ್ಕಾರ ವಾಪಸ್ ಪಡೆದುಕೊಂಡಿದೆ. ಶೇ.60ರಷ್ಟು ಸರ್ಕಾರಿ ಬಸ್‌ಗಳು ಗ್ರಾಮಾಂತರ ಪ್ರದೇಶಗಳಲ್ಲಿ ಓಡಾಡುತ್ತಿಲ್ಲ. ಸರ್ಕಾರ 85 ಸಾವಿರ ಕೋಟಿ ರೂ.ಗಳನ್ನು ಕೆಎಸ್‌ಆರ್‌ಟಿಸಿಗೆ ನೀಡಬೇಕಿದೆ. ಗ್ಯಾರಂಟಿಗಳಿಂದಾಗಿ ಬೊಕ್ಕಸ ಖಾಲಿಯಾಗಿದೆ ಎಂದು ಟೀಕಿಸಿದರು.
ಅತಿವೃಷ್ಟಿ, ಅನಾವೃಷ್ಟಿ ಸಂದರ್ಭಗಳಲ್ಲಿ ಸರ್ಕಾರವು ರೈತರ ಜತೆಗೆ ನಿಲ್ಲಬೇಕು. ಸೂಕ್ತ ಪರಿಹಾರ ನೀಡಬೇಕು. ಕೇವಲ ಅಧಿಕಾರಕ್ಕಾಗಿ ರೈತರ ಹೆಸರನ್ನು ಬಳಸಿಕೊಳ್ಳುವುದು ಸರಿಯಲ್ಲ. ಹಿರಿಯರು ಕೆರೆ ಕಟ್ಟೆಗಳನ್ನು ನಿರ್ಮಿಸಿ ನೀರು ಸಂಗ್ರಹಿಸುತ್ತಿದ್ದರು. ಕೃಷಿ, ಕುಡಿಯುವ ನೀರಿಗೆ ಅನುಕೂಲವಾಗುತ್ತಿತ್ತು. ತಾಲೂಕಿನಲ್ಲಿ ಸಾಕಷ್ಟು ಕೆರೆಗಳಿವೆ. ಐತಿಹಾಸಿಕ ರಾಮರತಿ ಕೆರೆ ನೂರಾರು ಎಕರೆಗೆ ನೀರುಣಿಸುವ ಜತೆಗೆ ಜಾನುವಾರುಗಳಿಗೆ ಕುಡಿಯುವ ನೀರಿನ ಮೂಲವಾಗಿದೆ ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ಹನುಮಂತಪ್ಪ, ಪ್ರಧಾನ ಕಾರ್ಯದರ್ಶಿ ಅಶೋಕ್, ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಮಹಿಳಾ ಮೋರ್ಚಾ ತಾಲೂಕು ಅಧ್ಯಕ್ಷೆ ರೇಖಾ ರಾಜಶೇಖರ್, ರೈತ ಮೋರ್ಚಾ ಕಾರ್ಯದರ್ಶಿ ಗುರುರಾಜ ಮಹದೇವ್ ಪಾಟೀಲ್, ಕುಮಾರ ಗೌಡ ಇತರರಿದ್ದರು.