ಕುವೆಂಪು ವಿವಿಯಲ್ಲಿನ ಅವ್ಯವಸ್ಥೆ ಸರಿಪಡಿಸುವಂತೆ ಒತ್ತಾಯಿಸಿ ಶಿವಮೊಗ್ಗ ಜಿಲ್ಲಾ ಎನ್‌ಎಸ್‌ಯುಐ ಕಾರ್ಯಕರ್ತರು ಕುಲಸಚಿವರಿಗೆ ಮನವಿ ಸಲ್ಲಿಸಿದರು. ವಿಜಯಕುಮಾರ್, ರವಿ, ರವಿಕುಮಾರ್, ವರುಣ್ ಪಂಡಿತ್, ಆದಿತ್ಯ, ಸುಬಾನ್, ಪರಾಜ್, ಶ್ರೀಕಾಂತ್ ಇತರರಿದ್ದರು. 
ಶಿವಮೊಗ್ಗ

ಕುವೆಂಪು ವಿವಿ ಆಡಳಿತದಲ್ಲಿ ಗೊಂದಲ | NSUI protest

ಪ್ರಮುಖ ಮುಖ್ಯಾಂಶಗಳು

  • ಕುವೆಂಪು ವಿವಿ ನಿರಂತರವಾಗಿ ವಿದ್ಯಾರ್ಥಿ ವಿರೋಧಿ ನಡೆ
  • ವಿವಿಯಲ್ಲಿ ಅಧಿಕಾರಿ ವರ್ಗದವರು ಆಂತರಿಕ ಕಚ್ಚಾಟ
  • ಜಿಲ್ಲಾ ಎನ್‌ಎಸ್‌ಯುಐ ಕಾರ್ಯಕರ್ತರಿಂದ ಪ್ರತಿಭಟನೆ
ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯ(Kuvempu University) ನಿರಂತರವಾಗಿ ವಿದ್ಯಾರ್ಥಿ ವಿರೋಧಿ ನಡೆ ಅನುಸರಿಸಿ ವಿದ್ಯಾರ್ಥಿಗಳ ಭವಿಷ್ಯದ ಜತೆಗೆ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿ ಶಿವಮೊಗ್ಗ ಜಿಲ್ಲಾ ಎನ್‌ಎಸ್‌ಯುಐ ಕಾರ್ಯಕರ್ತರು ವಿವಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಅವರು ಅಧಿಕಾರ ವಹಿಸಿಕೊಂಡಾಗಿನಿಂದಲೂ ವಿವಿಯಲ್ಲಿ ಅಧಿಕಾರಿ ವರ್ಗದವರು ಆಂತರಿಕ ಕಚ್ಚಾಟ(internal dispute)ದಲ್ಲೇ ತೊಡಗಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಕಳೆದ 5 ತಿಂಗಳ ಹಿಂದೆ ಪರೀಕ್ಷೆ ಬರೆದಿದ್ದ ಮೊದಲ, ಮೂರನೇ ಮತ್ತು 5ನೇ ಸೆಮಿಸ್ಟರ್‌ಗಳ ಫಲಿತಾಂಶ ಇನ್ನೂ ಪ್ರಕಟವಾಗಿಲ್ಲ. ಪರೀಕ್ಷೆಗಳ ಮೌಲ್ಯಮಾಪನದ ಗೌರವಧನ ನೀಡದ ಕಾರಣ ಉಪನ್ಯಾಸಕರು ಮೌಲ್ಯಮಾಪನ ಬಹಿಷ್ಕರಿಸಿದ್ದಾರೆ ಎಂದು ದೂರಿದರು.
ಕಳೆದ ಬಾರಿ ವಿವಿಯ ವೆಬ್ಸೈಟ್‌(University website)ನಲ್ಲಿ ಪ್ರಕಟಿಸಿದ್ದ ಫಲಿತಾಂಶ ಸಾಕಷ್ಟು ಗೊಂದಲ ಸೃಷ್ಟಿಸಿತ್ತು. ನೂರಾರು ವಿದ್ಯಾರ್ಥಿಗಳ ಫಲಿತಾಂಶ ಒಂದು ಬಾರಿ ಪಾಸ್ ಎಂದು ತೋರಿಸಿದ್ದರೆ ಮತ್ತೊಂದು ಬಾರಿ ಫೇಲ್ ಎಂದು ತೋರಿಸುತ್ತಿತ್ತು. ಇದರಿಂದ ವಿದ್ಯಾರ್ಥಿಗಳು ಗೊಂದಲಕ್ಕೀಡಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕುಲಪತಿಗಳು ಕೂಡಲೇ ಮೌಲ್ಯಮಾಪನ(Evaluation) ಬಹಿಷ್ಕರಿಸಿರುವ ಉಪನ್ಯಾಸಕರಿಗೆ ಗೌರವಧನ ಪಾವತಿಸಬೇಕು. 5 ತಿಂಗಳ ಹಿಂದೆ ನಡೆದ ಸೆಮಿಸ್ಟರ್ ಪರೀಕ್ಷೆಗಳ ಫಲಿತಾಂಶ ಪ್ರಕಟಿಸಬೇಕು. ಪದವಿ ಪ್ರಮಾಣ ಪತ್ರ, ಅಂಕಪಟ್ಟಿ ವಿತರಿಸಬೇಕು. ಆಂತರಿಕ ಕಚ್ಚಾಟದಲ್ಲಿ ತೊಡಗಿರುವ ಕುಲಪತಿಗಳು ಇನ್ನೆರಡು ದಿನಗಳಲ್ಲಿ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡಬೇಕು. ಇಲ್ಲದಿದ್ದರೆ ಎನ್‌ಎಸ್‌ಯುಐನಿಂದ ತೀವ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿ ಕುವೆಂಪು ವಿವಿಯ ಕುಲಸಚಿವ(ಮೌಲ್ಯಮಾಪನ)ರಿಗೆ ಮನವಿ ಸಲ್ಲಿಸಿದರು.
ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ವಿಜಯಕುಮಾರ್, ಕಾರ್ಯಾಧ್ಯಕ್ಷ ರವಿ, ಪ್ರಮುಖರಾದ ರವಿಕುಮಾರ್, ವರುಣ್ ವಿ. ಪಂಡಿತ್, ಆದಿತ್ಯ, ಸುಬಾನ್, ಪರಾಜ್, ಶ್ರೀಕಾಂತ್, ಕುಮಾರಸ್ವಾಮಿ, ಲೋಹಿತ್, ಆಕಾಶ್, ದರ್ಶನ್, ರಿಜಿತ್, ಪ್ರಭು, ಪವನ್, ಪ್ರಮೋದ್ ಮತ್ತಿತರರಿದ್ದರು.