ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶಿವಪ್ಪನಾಯಕ ಕೃಷಿ ಹಾಗೂ ತೋಟಗಾರಿಕೆ ವಿವಿ ವಿದ್ಯಾರ್ಥಿಗಳು ವಿವಿಯ ಶಿವಮೊಗ್ಗ ಕಚೇರಿ ಪ್ರವೇಶ ದ್ವಾರದಲ್ಲಿ ಪ್ರತಿಭಟಿಸಿದರು. ಮಲ್ಲಿಕಾರ್ಜುನ, ಪವನ, ಕೃಷ್ಣ, ಶೇಷಾದ್ರಿ, ಅಭಿನವ ಪ್ರತಿಭಟನೆಯಲ್ಲಿದ್ದರು. 
ಶಿವಮೊಗ್ಗ

ಕೃಷಿ ಇಲಾಖೆ ಅವೈಜ್ಞಾನಿಕ ನೇಮಕಾತಿಗೆ ಖಂಡನೆ I agriculture department

ಪ್ರಮುಖ ಮುಖ್ಯಾಂಶಗಳು

  • ವಿದ್ಯಾರ್ಥಿಗಳಿಂದ ಪ್ರತಿಭಟನೆ
  • ದೇಸಿ ಕೋರ್ಸ್‌ಗೆ ತೀವ್ರ ಆಕ್ಷೇಪ
ಶಿವಮೊಗ್ಗ: ಕೃಷಿ (agirculture) ಇಲಾಖೆಯಲ್ಲಿ (department) ಅವೈಜ್ಞಾನಿಕ ನೇಮಕಾತಿ ಮತ್ತು ಕೃಷಿ ಶಿಕ್ಷಣದ ಖಾಸಗೀಕರಣ ಖಂಡಿಸಿ ಶಿವಪ್ಪನಾಯಕ ಕೃಷಿ ಹಾಗೂ ತೋಟಗಾರಿಕೆ ವಿಜ್ಞಾನಗಳ ವಿವಿಯ ವಿದ್ಯಾರ್ಥಿಗಳು ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಂಡಿದ್ದು, ಸೋಮವಾರ ವಿವಿಯ ಶಿವಮೊಗ್ಗ ಕಚೇರಿ ಮುಖ್ಯ ದ್ವಾರದ ಎದುರು ಪ್ರತಿಭಟನೆ (protest) ನಡೆಸಿದರು.
ಕೃಷಿ ವಿದ್ಯಾರ್ಥಿಗಳ ಭವಿಷ್ಯವನ್ನು ಕಸಿದುಕೊಳ್ಳುವ ಮತ್ತು ಕೃಷಿ ಕ್ಷೇತ್ರವನ್ನು ಸರ್ವನಾಶ ಮಾಡುವ ಸರ್ಕಾರದ ಹಾಗೂ ಕೃಷಿ ಇಲಾಖೆಯ ರೈತ ವಿರೋಧಿ, ವಿದ್ಯಾರ್ಥಿ ವಿರೋಧಿ ನೀತಿಗಳು ಖಂಡನೀಯ. ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ನಡೆದಿರುವ ಸಾಂವಿಧಾನಿಕ ಉಲ್ಲಂಘನೆ ಹಾಗೂ ಕೃಷಿ ಶಿಕ್ಷಣದ ವ್ಯಾಪಾರೀಕರಣವನ್ನು ತಡೆಯಬೇಕೆಂದು ಆಗ್ರಹಿಸಿದರು.
ಸಿ ಅಂಡ್ ಆರ್ ನಿಯಮಗಳ ಉಲ್ಲಂಘನೆ ಮತ್ತು ಐಸಿಎಆರ್‌ಮಾನ್ಯತೆ ಇಲ್ಲದ ರೈಟೆಕ್ ವಿವಿಯ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಇದು ಸಂವಿಧಾನದ 309ನೇ ವಿಧಿಯಡಿ ರಚನೆಯಾದ ಮೂಲ ಸಿ ಅಂಡ್ ಆರ್ ನಿಯಮಗಳ ಸಂಪೂರ್ಣ ಉಲ್ಲಂಘನೆ. ಸರ್ಕಾರದ ಯಾವುದೇ ಸಾಮಾನ್ಯ ಆದೇಶಗಳು ಅಥವಾ ಸುತ್ತೋಲೆಗಳು ಮೂಲ ಸಿ ಅಂಡ್ ಆರ್ ನಿಯಮಗಳನ್ನು ಮೀರುವಂತಿಲ್ಲ. ರೈಟೆಕ್ ವಿವಿಯನ್ನು ಈ ನೇಮಕಾತಿಯಿಂದ ಸಂಪೂರ್ಣವಾಗಿ ಕೈಬಿಡಲೇಬೇಕೆಂದು ಒತ್ತಾಯಿಸಿದರು.
ಖಾಸಗಿ ಕೃಷಿ ಕಾಲೇಜುಗಳ ಸಂಯೋಜನೆ ರದ್ದಾಗಬೇಕು. 12ಕ್ಕೂ ಹೆಚ್ಚು ಖಾಸಗಿ ಕೃಷಿ ಕಾಲೇಜುಗಳಿಗೆ ಸಂಯೋಜನೆ ನೀಡಲಾಗಿದೆ. ಇದು ಕೃಷಿ ಶಿಕ್ಷಣವನ್ನು ದುಬಾರಿಯಾಗಿಸುವುದರ ಜತೆಗೆ ಕೃಷಿ ಪದವಿಯ ಮೌಲ್ಯ ಕುಗ್ಗಿಸುತ್ತದೆ. ಈ ವರ್ಷದ ಶೈಕ್ಷಣಿಕ ದಾಖಲಾತಿ ಆರಂಭವಾಗುವ ಮುನ್ನವೇ ಈ ಎಲ್ಲ ಖಾಸಗಿ ಕಾಲೇಜುಗಳ ಪ್ರವೇಶಾತಿಯನ್ನು ಕಡ್ಡಾಯವಾಗಿ ನಿಲ್ಲಿಸಲೇಬೇಕೆಂದರು.
ಕೃಷಿ ಹುದ್ದೆಗಳಿಗೆ ಬಿಇ ಬಯೋಟೆಕ್ ಪದವೀಧರರನ್ನು ಪರಿಗಣಿಸಿರುವುದು ಹಾಸ್ಯಾಸ್ಪದ. ಕನಿಷ್ಠ ವಿದ್ಯಾರ್ಹತೆಯೇ ಇಲ್ಲದವರು ಕೇವಲ ಹಣ ಕೊಟ್ಟು ಪ್ರಮಾಣಪತ್ರ ಖರೀದಿಸುವಂತೆ ದೇಸಿ ಕೋರ್ಸ್ ಮುಗಿಸಿ, ರಸಗೊಬ್ಬರ ಮತ್ತು ಕೀಟನಾಶಕಗಳ ಮಾರಾಟದ ಪರವಾನಗಿ ಪಡೆಯುತ್ತಿದ್ದಾರೆ. ಕೃಷಿಯ ಅರಿವಿಲ್ಲದ ಇವರು ಅಮಾಯಕ ರೈತರಿಗೆ ಅವೈಜ್ಞಾನಿಕವಾಗಿ ಕೀಟನಾಶಕ, ರಸಗೊಬ್ಬರಗಳನ್ನು ಶಿಫಾರಸು ಮಾಡುತ್ತಿದ್ದಾರೆ. ಇದರಿಂದ ರೈತರ ಭೂಮಿ ಮತ್ತು ಬೆಳೆ ಸರ್ವನಾಶವಾಗುತ್ತಿದೆ. ಕೂಡಲೇ ದೇಸಿ ಕೋರ್ಸ್ ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿದರು.
ವಿವಿಯ ಬಿಎಸ್ಸಿ ಕೃಷಿ ವಿದ್ಯಾರ್ಥಿಗಳಾದ ಮಲ್ಲಿಕಾರ್ಜುನ, ಕಲ್ಯಾಣಕುಮಾರ, ಪವನ, ಶೇಷಾದ್ರಿ, ಕೃಷ್ಣ, ಅಭಿನವ ಮುಂತಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.