ಸ್ಥಳ ಶುದ್ಧೀಕರಣ ಪ್ರಶ್ನಿಸಿದ ರಾಹುಲ್ ಗಾಂಧಿ ವಿರುದ್ಧ ದಾಖಲಿಸಿರುವ ಪ್ರಕರಣ ಕೈಬಿಡುವಂತೆ ಒತ್ತಾಯಿಸಿ ಕಾಂಗ್ರೆಸ್ ಪ್ರಮುಖರು ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಿದರು. ಆರ್.ಪ್ರಸನ್ನಕುಮಾರ್, ಶ್ವೇತಾ ಬಂಡಿ, ಎನ್.ರಮೇಶ್, ವಿಜಯ ಕುಮಾರ್, ಚೇತನ್ ಕೆ.ಗೌಡ, ವೇದಾ ವಿಜಯಕುಮಾರ್ ಇದ್ದರು. 
ಶಿವಮೊಗ್ಗ

ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಿದ್ದಕ್ಕೆ ಖಂಡನೆ I complain againest rahul

ಪ್ರಮುಖ ಮುಖ್ಯಾಂಶಗಳು

  • ಕಾಂಗ್ರೆಸ್ ಪ್ರಮುಖರಿಂದ ಪ್ರತಿಭಟನೆ
  • ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ
.
ಶಿವಮೊಗ್ಗ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (kharge) ಸಾರ್ವಜನಿಕ ಸಭೆ ನಡೆಸಿದ ಜಾಗವನ್ನು ಶುದ್ಧೀಕರಣಗೊಳಿಸುವ ಮೂಲಕ ಜಾತಿ ತಾರತಮ್ಯ ಮಾಡಿದ್ದನ್ನು ಪ್ರಶ್ನಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (rahul gandhi) ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ (congress) ಮುಖಂಡರು ಮಂಗಳವಾರ ನಗರದ ಮಹಾವೀರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಜಾಗವನ್ನು ಶುದ್ಧೀಕರಣ ಮಾಡಿರುವುದು ದಲಿತ ವಿರೋಧಿ ಮನಸ್ಥಿತಿ, ಅಸ್ಪಶ್ಯತೆಗೆ ನಿದರ್ಶನ ಎಂದು ರಾಹುಲ್ ಗಾಂಧಿ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ಪೊಲೀಸರು ರಾಹುಲ್ ವಿರುದ್ಧವೇ ಪ್ರಕರಣ ದಾಖಲಿಸಿರುವುದು ಆಶ್ಚರ್ಯ ಮೂಡಿಸಿದೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಂಡು ದಲಿತ ದೌರ್ಜನ್ಯದ ವಿರುದ್ಧ ಮಾತನಾಡುವವರನ್ನು ಗುರಿಯಾಗಿಸುತ್ತಿದೆ. ಸ್ಥಳ ಶುದ್ಧೀಕರಣವು ಜಾತಿ ತಾರತಮ್ಯದ ಸಂಕೇತ. ಅದನ್ನು ಪ್ರಶ್ನಿಸುವವರ ಮೇಲೆ ಪ್ರಕರಣ ದಾಖಲಿಸುವುದು ಸಂವಿಧಾನ ವಿರೋಧಿ ನಡೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಮಲ್ಲಿಕಾರ್ಜುನ ಖರ್ಗೆ ಸಭೆ ನಡೆಸಿದ ಜಾಗದ ಶುದ್ಧೀಕರಣವು ಇಡೀ ದಲಿತ ಸಮುದಾಯಕ್ಕೆ ಮಾಡಿದ ಅವಮಾನ. ಶುದ್ಧೀಕರಣ ನಡೆಸಿದವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕೆಂದು ರಾಜ್ಯಪಾಲರಿಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಬದಲಿಗೆ ರಾಹುಲ್ ವಿರುದ್ಧ ಕೇಸು ಬಿದ್ದಿದೆ. ಕೂಡಲೇ ಎಫ್‌ಐಆರ್ ರದ್ದುಪಡಿಸಿಬೇಕೆಂದು ಆಗ್ರಹಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್, ಜವಳಿ ನಿಗಮದ ಅಧ್ಯಕ್ಷ ಚೇತನ್ ಕೆ.ಗೌಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್.ರಮೇಶ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಸ್.ಟಿ.ಚಂದ್ರಶೇಖರ್, ಹಾಪ್‌ಕಾಮ್ಸ್ ಅಧ್ಯಕ್ಷ ವಿಜಯಕುಮಾರ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ವೇತಾ ಬಂಡಿ, ಜಿಪಂ ಮಾಜು ಉಪಾಧ್ಯಕ್ಷೆ ವೇದಾ ವಿಜಯಕುಮಾರ್ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.