ಮುಂಗಾರು ಚುರುಕುಗೊಳ್ಳುವ ನಿರೀಕ್ಷೆಯಲ್ಲಿ ಮಂಗಳವಾರ ಶಿವಮೊಗ್ಗ ತಾಲೂಕು ಆಯನೂರು ಸಮೀಪದ ದ್ಯಾವನಕೆರೆಯ ಕೃಷಿ ಭೂಮಿಯಲ್ಲಿ ಮೆಕ್ಕೆಜೋಳ ಬಿತ್ತನೆಯಲ್ಲಿ ನಿರತರಾಗಿದ್ದ ಮಹಿಳೆಯರು. 
ಶಿವಮೊಗ್ಗ

ದುರ್ಬಲ ಮುಂಗಾರಿನಿಂದ ಹೆಚ್ಚಿದ ಆತಂಕ I mansoon weak

ಅರವಿಂದ ಅಕ್ಲಾಪುರ

ಪ್ರಮುಖ ಮುಖ್ಯಾಂಶಗಳು

  • ಕೃಷಿ ಚಟುವಟಿಕೆಗೆ ತೀವ್ರ ಹಿನ್ನಡೆ
  • ಮೆಕ್ಕೆಜೋಳ ಬಿತ್ತನೆ ಮಾಡಿದವರಿಗೆ ನಷ್ಟ ಭೀತಿ
  • ಶುಂಠಿ ನಾಟಿ ಮಾಡಿದವರಿಗೂ ಆತಂಕ
  • ಜೂನ್‌ನಲ್ಲಿ ವಾಡಿಕೆಗಿಂತ ಕಡಿಮೆ ಮಳೆ ದಾಖಲು
ಶಿವಮೊಗ್ಗ: ರಾಜ್ಯಕ್ಕೆ ಮುಂಗಾರು (mansoon) ಪ್ರವೇಶಿಸಿ ಎರಡು ವಾರ ಸಮೀಪಿಸುತ್ತಿದೆ. ಆದರೆ ಜಿಲ್ಲೆಯಲ್ಲಿ ಮಳೆ (rain) ಯ ವಾತಾವರಣವೇ ಇಲ್ಲ. ಒಂದೆಡೆ ಬಿಸಿಲಿನ ತಾಪ ಹೆಚ್ಚುತ್ತಿದ್ದರೆ, ಇನ್ನೊಂದೆಡೆ ಕೆರೆಗಳಲ್ಲಿ ನೀರಿನ ಸಂಗ್ರಹ ಕುಸಿಯುತ್ತಿದೆ. ನದಿಗಳಲ್ಲಿ ನೀರಿನ ಹರಿವು ನಿಂತಿದೆ. ಜಲಾಶಯಗಳು (dams) ಬರಿದಾಗುತ್ತಿವೆ. ಜೂನ್ ತಿಂಗಳ ವಾಡಿಕೆ ಮಳೆಯ ಪ್ರಮಾಣ 2,356.80 ಮಿಲಿ ಮೀಟರ್. ಆದರೆ ಇದುವರೆಗೆ ಬಿದ್ದಿರುವ ಮಳೆ ಕೇವಲ 491.20 ಮಿಲಿ ಮೀಟರ್.
ಮುಂಗಾರಿನ ಮೊದಲ ಚರಣದಲ್ಲಿ ಅಬ್ಬರಿಸಬೇಕಿದ್ದ ವರುಣ ಮುನಿಸಿಕೊಂಡಂತಿದೆ. ಕಳೆದ ವರ್ಷ ಮೇ ಮಧ್ಯದಲ್ಲೇ ಅವತರಿಸಿದ್ದ ಮಳೆರಾಯ ಈ ವರ್ಷ ಜೂನ್ ತಿಂಗಳು ಅರ್ಧ ಕಳೆದರೂ ಕೃಪೆ ತೋರುತ್ತಿಲ್ಲ. ಮಳೆ ಬರುತ್ತದೆಂಬ ಭರವಸೆ ಮೇಲೆ ಮೆಕ್ಕೆಜೋಳ ಬಿತ್ತನೆ ಮಾಡಿದ ರೈತರು ಈಗ ಆಕಾಶ ನೋಡುವಂತಾಗಿದೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಶೇ.41ರಷ್ಟು ಮಳೆಯ ಕೊರತೆಯಾಗಿದೆ.
ಜಿಲ್ಲೆಯಲ್ಲಿ ವ್ಯಾಪಕವಾಗಿರುವ ಅಡಕೆ. ಮೆಕ್ಕೆಜೋಳ, ಭತ್ತದ ಬೆಳೆ ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ. ಭತ್ತ ಹಾಗೂ ಮೆಕ್ಕೆಜೋಳವನ್ನು ಅರೆ ನೀರಾವರಿ, ಮಳೆಯಾಶ್ರಿತ ಭೂಮಿಯಲ್ಲಿ ಬೆಳೆಯಲಾಗುತ್ತಿದೆ. ಮುಂಗಾರು ಪೂರ್ವ ಮಳೆಯಾದ್ದರಿಂದ ಅನೇಕ ರೈತರು ಮೆಕ್ಕೆಜೋಳ ಬಿತ್ತನೆ ಮಾಡಿದ್ದಾರೆ. ಹೊಸನಗರ, ಸೊರಬ, ತೀರ್ಥಹಳ್ಳಿ, ಶಿಕಾರಿಪುರ, ಭದ್ರಾವತಿ ತಾಲೂಕಿನಲ್ಲಿ ಮಳೆ ಕೊರತೆ ಪ್ರಮಾಣ ಹೆಚ್ಚಾಗಿದೆ. ಮೊಳಕೆಯೊಡೆದು ಹುಲುಸಾಗಿ ಬೆಳೆಯಬೇಕಿದ್ದ ಮೆಕ್ಕೆಜೋಳ ಈಗ ಒಣಗುತ್ತಿದೆ.
ಮೆಕ್ಕೆಜೋಳ ಬೆಳೆಗಾರರಿಗೆ ಹೆಚ್ಚಿದ ಆತಂಕ
ಈ ವರ್ಷ ಮುಂಗಾರಿಗೆ ಜಿಲ್ಲೆಯಲ್ಲಿ 45,807 ಹೆಕ್ಟೇರ್ ಮೆಕ್ಕೆಜೋಳ ಬಿತ್ತನೆ ಗುರಿಯನ್ನು ಕೃಷಿ ಇಲಾಖೆ ಹೊಂದಿದೆ. ಇದುವರೆಗೆ 5,485 ಹೆಕ್ಟೇರ್‌ನಲ್ಲಿ ಮಾತ್ರ ಮೆಕ್ಕೆಜೋಳ ಬಿತ್ತನೆಯಾಗಿದೆ. ಭತ್ತ 66,200 ಹೆಕ್ಟೇರ್ ಪೈಕಿ 2,415 ಹೆಕ್ಟೇರ್ ಬಿತ್ತನೆ ಮಾಡಲಾಗಿದೆ. ಶಿವಮೊಗ್ಗ ತಾಲೂಕಿನಲ್ಲಿ 105, ಭದ್ರಾವತಿಯಲ್ಲಿ 60, ಸಾಗರದಲ್ಲಿ 50, ಹೊಸನಗರ 20, ಶಿಕಾರಿಪುರದಲ್ಲಿ 3,500, ಸೊರಬದಲ್ಲಿ 1,750 ಹೆಕ್ಟೇರ್ ಮೆಕ್ಕೆಜೋಳ ಬಿತ್ತನೆಯಾಗಿದೆ. ಈಗ ಮೆಕ್ಕೆಜೋಳಕ್ಕೆ ಮಳೆ ಬಾರದಿದ್ದರೆ ಬಿತ್ತನೆಯಾಗಿರುವ ಮೆಕ್ಕೆಜೋಳ ಮಣ್ಣುಪಾಲಾಗಲಿದೆ. ಮತ್ತೊಮ್ಮೆ ಬಿತ್ತನೆ ಮಾಡಬೇಕಾದ ಅನಿವಾರ್ಯತೆ ಎದುರಾಗಲಿದೆ. ಈಗ ಅನುಭವಿಸುವ ನಷ್ಟಕ್ಕೆ ವಿಮೆ ಪರಿಹಾರವೂ ಸಿಗುವುದಿಲ್ಲ. ಮೆಕ್ಕೆಜೋಳ ಬೆಳೆಗಾರರಿಗೆ ಹೆಚ್ಚು ನಷ್ಟದ ಆಂತಕ ಶುರುವಾಗಿದೆ.

ಶುಂಠಿಗೂ ನೀರಿಲ್ಲದ ಸ್ಥಿತಿ

ಮಳೆಯಾಶ್ರಿತ ಭೂಮಿಯಲ್ಲಿ ಅನೇಕ ಕಡೆಗಳಲ್ಲಿ ಈಗಾಗಲೇ ಶುಂಠಿ ನಾಟಿ ಮಾಡಲಾಗಿದೆ. ಕೆಲವರು ತುಂತುರು ಹನಿ ನೀರಾವರಿ ವ್ಯವಸ್ಥೆ ಮಾಡಿಕೊಂಡು ಕಾಪಾಡಿಕೊಳ್ಳುತ್ತಿದ್ದಾರೆ. ಈಗ ಜಲಮೂಲಗಳು ಬರಿದಾಗುತ್ತಿರುವುದರಿಂದ ಶುಂಠಿ ಬೆಳೆಗೆ ನೀರೊದಗಿಸಲು ಬೆಳೆಗಾರರು ಹರಸಾಹಸ ಪಡುವಂತಾಗಿದೆ. ಮುಂಗಾರಿನ ಆರಂಭದಲ್ಲೇ ವರುಣ ನಿರಾಸೆ ಮೂಡಿಸುವ ಜತೆಗೆ ಕೃಷಿಕ ಸಮುದಾಯಕ್ಕೆ ಸವಾಲೊಡ್ಡಿದ್ದಾನೆ.

ಕುಸಿಯುತ್ತಿದೆ ನೀರಿನ ಸಂಗ್ರಹ

ಕೃಷಿ ಚಟುವಟಿಕೆಗೆ ಆಧಾರವಾಗಿರುವ ಭದ್ರಾ ಜಲಾಶಯದ ಗರಿಷ್ಠ ನೀರಿನ ಸಂಗ್ರಹ ಪ್ರಮಾಣ 186 ಅಡಿ. ಪ್ರಸ್ತುತ ಜಲಾಶಯದಲ್ಲಿರುವು 136.7ಅಡಿ (24.67 ಟಿಎಂಸಿ) ಮಾತ್ರ. ಕಳೆದ ವರ್ಷ ಇದೇ ಅವಧಿಗೆ ಜಲಾಶಯದಲ್ಲಿ 144 ಅಡಿ ನೀರು ಸಂಗ್ರಹವಿತ್ತು. ಭದ್ರಾವತಿ ತಾಲೂಕಿನ ಕೆಲ ಭಾಗ ಸೇರಿ ಬಯಲುಸೀಮೆ ರೈತರ ಜೀವನಾಡಿ ಭದ್ರಾ ಜಲಾಶಯದಲ್ಲಿ ಹೆಚ್ಚಿನ ನೀರು ಸಂಗ್ರಹವಾಗದೇ ಇದ್ದರೆ ಬೇಸಿಗೆ ಬೆಳೆಯ ಮಾತಿರಲಿ ಮುಂಗಾರು ಹಂಗಾಮಿಗೂ ಭತ್ತ ನಾಟಿ ಕಷ್ಟವಾಗಲಿದೆ. 3.24 ಟಿಎಂಸಿ ಸಾಮರ್ಥ್ಯದ ತುಂಗಾ ಜಲಾಶಯದಲ್ಲಿ ಈಗ 2.41 ಟಿಎಂಸಿ ನೀರಿದೆ. ಕಳೆದ ವರ್ಷ ಇದೇ ಹೊತ್ತಿಗೆ 5 ಸಾವಿರ ಕ್ಯೂಸೆಕ್ ನೀರನ್ನು ಜಲಾಶಯದಿಂದ ಹೊರಬಿಡಲಾಗುತ್ತಿತ್ತು. ಆದರೆ ಈಗ ಜಲಾಶಯದಿಂದ ಹೊರಬರುತ್ತಿರುವುದು ಕೇವಲ 123 ಕ್ಯೂಸೆಕ್. ತುಂಗಾ ಜಲಾಶಯ ಭರ್ತಿಯಾಗಲು, ಶೃಂಗೇರಿ, ಕೊಪ್ಪ, ತೀರ್ಥಹಳ್ಳಿ ತಾಲೂಕುಗಳಲ್ಲಿ ವ್ಯಾಪಕ ಮಳೆಯಾಗಬೇಕು. ಆದರೆ ಈ ಬಾರಿ ವರುಣ ಮುನಿಸಿಕೊಂಡ ಕಾರಣ ತುಂಗಾ ಜಲಾಶಯ ಇನ್ನೂ ಭರ್ತಿಯಾಗಿಲ್ಲ. ಈ ಜಲಾಶಯ ಭರ್ತಿಯಾಗಿ ಹೆಚ್ಚಿನ ಪ್ರಮಾಣದ ನೀರು ಜಲಾಶಯದಿಂದ ಹೊರಬಿದ್ದರೆ ಅದು ಹೊಸಪೇಟೆಯ ತುಂಗಭದ್ರಾ ಜಲಾಶಯಕ್ಕೂ ಅನುಕೂಲ. ಮಳೆಗಾಲ ಆರಂಭದಲ್ಲಿ ಜಿಲ್ಲೆಯ ಜಲಾಶಯಗಳ ನೀರಿನ ಸಂಗ್ರಹ ಏರಿಕೆಯಾಗಬೇಕಿತ್ತು. ಆದರೆ ದಿನೇದಿನೆ ನೀರಿನ ಸಂಗ್ರಹ ಕುಸಿಯುತ್ತಿರುವುದು ಕಳವಳಕಾರಿಯಾಗಿದೆ.