ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ
- ಡಿ.ಕೆ.ಶಿವಕುಮಾರ್-ಸಿದ್ದರಾಮಯ್ಯ ಬಣಗಳ ನಡುವೆ ಪೈಪೋಟಿ
- ನನೆಗುದಿಗೆ ಬಿದ್ದ ಸಚಿವ ಸಂಪುಟ ವಿಸ್ತರಣೆ
- ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಆರೋಪ
ಶಿವಮೊಗ್ಗ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಬಣಗಳ ನಡುವಿನ ತೀವ್ರ ಪೈಪೋಟಿಯಿಂದ ಸಚಿವ ಸಂಪುಟ ವಿಸ್ತರಣೆ(Cabinet expansion) ನನೆಗುದಿಗೆ ಬಿದ್ದಿದೆ. ಅದರ ಪರಿಣಾಮ ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಆರೋಪಿಸಿದರು.
ಸಿದ್ದರಾಮಯ್ಯ(Siddaramaiah) ಅವರದ್ದೇ ಒಂದು ಪಟ್ಟಿ ಇದ್ದರೆ, ಡಿ.ಕೆ.ಶಿವಕುಮಾರ್(D.K.Sivakumar) ಅವರದ್ದು ಮತ್ತೊಂದು ಪಟ್ಟಿ ಇದೆ. ಇಬ್ಬರೂ ತಮ್ಮ ಆಪ್ತರಿಗೆ ಸಚಿವ ಸ್ಥಾನ ಕೊಡಿಸಲು ಪಟ್ಟು ಹಿಡಿದಿರುವುದರಿಂದ ಸಂಪುಟ ವಿಸ್ತರಣೆ ಸಾಧ್ಯವಾಗುತ್ತಿಲ್ಲ. ಕಳೆದ ಹಲವು ತಿಂಗಳಿಂದ ಇದೇ ಗೊಂದಲ ಮುಂದುವರಿದಿದೆ. ಈ ಆಂತರಿಕ ರಾಜಕೀಯ ಪೈಪೋಟಿಯಿಂದ ಜನಸಾಮಾನ್ಯರು ಮತ್ತು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್(Deputy Chief Minister Dr.G.Parameshwar) ಅವರು ಕೇಂದ್ರ ಸರ್ಕಾರ ಎನ್‌ಡಿಆರ್‌ಎಫ್ ಹೆಚ್ಚಳ ಮಾಡಬೇಕೆಂದು ಒತ್ತಾಯ ಮಾಡಿದ್ದಾರೆ. ಅದಕ್ಕೆ ನನ್ನ ಸಹಮತವೂ ಇದೆ. ಆದರೆ ರಾಜ್ಯದಲ್ಲಿ ಮಳೆ ಕೊರತೆ, ಅತಿವೃಷ್ಟಿ ಹಾಗೂ ರೈತರ ಬೆಳೆ ಹಾನಿ ಕುರಿತು ಸರ್ಕಾರ ಇದುವರೆಗೂ ಸಮರ್ಪಕ ಸಮೀಕ್ಷೆಯನ್ನೇ ನಡೆಸಿಲ್ಲ. ಕೇಂದ್ರ ಸರ್ಕಾರದಿಂದ ಎನ್‌ಡಿಆರ್‌ಎಫ್ ನೆರವು(NDRF assistance) ಕೋರುವ ಮುನ್ನ ಬೆಳೆ ನಷ್ಟದ ನಿಖರ ವರದಿ ಸಿದ್ಧಪಡಿಸಬೇಕಿತ್ತು. ಪ್ರಸ್ತುತ ಇರುವ ಎನ್‌ಡಿಆರ್‌ಎಫ್‌ನ ಬೆಳೆ ಹಾನಿ ಪರಿಹಾರ ಮಾನದಂಡಗಳು ಹಳೆಯದಾಗಿದ್ದು ಇಂದಿನ ಪರಿಸ್ಥಿತಿಗೆ ತಕ್ಕಂತೆ ರೈತರಿಗೆ ನೀಡುವ ಪರಿಹಾರ ಮೊತ್ತವನ್ನು ಕನಿಷ್ಠ ಹತ್ತು ಪಟ್ಟು ಹೆಚ್ಚಿಸುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಬಲವಾದ ಶಿಫಾರಸು ಮಾಡಬೇಕು ಎಂದು ಆಗ್ರಹಿಸಿದರು.
100 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಭೀಕರ ಬರಗಾಲ ಮತ್ತು ಅನಾವೃಷ್ಟಿ(Drought and famine)ಎದುರಾಗಿದೆ. 157 ತಾಲೂಕುಗಳಲ್ಲಿ ಅನಾವೃಷ್ಟಿ ಘೋಷಿಸಿದ್ದರೆ 14 ತಾಲೂಕುಗಳನ್ನು ಸಂಪೂರ್ಣ ಬರಪೀಡಿತ ಎಂದು ಘೋಷಿಸಲಾಗಿದೆ. ಕಳೆದ ಮೂರು ತಿಂಗಳಲ್ಲಿ 31 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಲವೆಡೆ ಬೆಳೆ ಸಂಪೂರ್ಣ ನಾಶವಾಗಿದೆ. ಅಧಿಕಾರಿಗಳು ಹಾಗೂ ಉಸ್ತುವಾರಿ ಸಚಿವರು ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಸಬೇಕಾಗಿತ್ತು. ಆದರೆ ಸರ್ಕಾರದ ಇಡೀ ಗಮನ ಕೇವಲ ಸಂಪುಟ ವಿಸ್ತರಣೆ ಮತ್ತು ಆಂತರಿಕ ಅಧಿಕಾರ(Internal authority) ರಾಜಕೀಯಕ್ಕಾಗಿಯೇ ಸೀಮಿತವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಿಎಂ ಬಿಡದಿ ಟು ಬೆಂಗಳೂರಿಗೆ ಸೀಮಿತ
ಸಿಎಂ ಡಿ.ಕೆ.ಶಿವಕುಮಾರ್ ಅವರು ಬಿಡದಿ ಮತ್ತು ಬೆಂಗಳೂರಿಗೆ ಸೀಮಿತವಾಗಿದ್ದಾರೆ. ರಾಜ್ಯ ನಾಯಕರನ್ನು ವರಿಷ್ಠರು ಲೆಕ್ಕಕ್ಕೇ ತೆಗೆದುಕೊಂಡಿಲ್ಲ. ಈ ನಡುವೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(AICC President Mallikarjun Kharge) ಅವರೇ ಸಚಿವ ಸಂಪುಟ ವಿಸ್ತರಣೆ ಕುರಿತು ನನಗೆ ಮಾಹಿತಿ ಇಲ್ಲ ಎಂದಿದ್ದಾರೆ. ಕಾಂಗ್ರೆಸ್‌ನಲ್ಲಿ ನಾಯಕತ್ವದ ಗೊಂದಲ ತಾರಕಕ್ಕೇರಿರುವುದು ಇದರಿಂದ ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಈಶ್ವರಪ್ಪ ವ್ಯಂಗ್ಯವಾಡಿದರು.