ರಾಜ್ಯದಲ್ಲಿ ಹಿಂದೂ ಪರ ಕಾರ್ಯಕರ್ತರ ಮೇಲಿನ ದೌರ್ಜನ್ಯವನ್ನು ಖಂಡಿಸಿ ವಿವಿಧ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು. ಪರಶುರಾಮ, ಈರೇಶ್, ಬಿ.ವಿ.ಮಂಜುನಾಥ್, ರಾಜು ಇತರರಿದ್ದರು.  
ಶಿವಮೊಗ್ಗ

ಹಿಂದೂ ಕಾರ್ಯಕರ್ತರ ವಿರುದ್ಧ ದೂರು ಸುಳ್ಳು

ಶಿಕಾರಿಪುರ: ಹಿಂದೂ ಪರ ಕಾರ್ಯಕರ್ತರ ಮೇಲೆ ಹಾಕಿರುವ ಸುಳ್ಳು ದೂರುಗಳನ್ನು ಹಾಕಲಾಗಿದೆ. ಕಾರ್ಯಕರ್ತರಿಗೆ ನೀಡಲಾಗಿರುವ ಗಡಿಪಾರು, ಗೂಂಡಾ ಕಾಯ್ದೆ ಮತ್ತಿತರ ನಿರ್ಬಂಧಾತ್ಮಕ ನೋಟಿಸ್‌ಗಳ ಕುರಿತು ಉನ್ನತ ಮಟ್ಟದ ಪರಿಶೀಲನಾ ಸಮಿತಿ ರಚಿಸಬೇಕು ಎಂದು ಒತ್ತಾಯಿಸಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಪದಾಧಿಕಾರಿಗಳು ಬುಧವಾರ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು.

ಪ್ರಕರಣಗಳ ತನಿಖೆ ಮತ್ತು ನಿರ್ಬಂಧಾತ್ಮಕ ಕ್ರಮಗಳಿಗೆ ಸಂಬಂಧಿಸಿದ ದಾಖಲೆಗಳನ್ನು ರಾಜ್ಯ ಮಾನವ ಹಕ್ಕುಗಳ ಆಯೋಗ, ಕಾನೂನು ತಜ್ಞರು ಮತ್ತು ಅಗತ್ಯವಿದ್ದಲ್ಲಿ ನಿವೃತ್ತ ನ್ಯಾಯಾಂಗ ಅಧಿಕಾರಿಗಳನ್ನೊಳಗೊಂಡ ಸ್ವತಂತ್ರ ಸಮಿತಿಯಿಂದ ಪರಿಶೀಲಿಸಬೇಕು. ಎಂದು ಆಗ್ರಹಿಸಿದರು

ಪುನೀತ್ ಕೆರೆಹಳ್ಳಿ ಕಳೆದ 30 ದಿನಗಳಿಂದ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿ ಬಂಧನದಲ್ಲಿದ್ದಾರೆ. ಆ.26ರಂದು ನಡೆದ ಘಟನೆಗೆ ಸಂಬಂಧಿಸಿ ರಾಷ್ಟ್ರ ರಕ್ಷಣಾ ಪಡೆಯ ಅಧ್ಯಕ್ಷರಾಗಿರುವ ಇವರ ಮೇಲೆ ಕೆಲ ದುಷ್ಕರ್ಮಿಗಳು ಮತ್ತು ಸ್ಥಳೀಯ ಮುಸ್ಲಿಂ ಮುಖಂಡರು ಹಲ್ಲೆ ನಡೆಸಿ, ಇವರ ಮೇಲೆಯೇ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ದೂರಿದರು.

ಬಸವನಗುಡಿಯ ಠಾಣೆಯ ವ್ಯಾಪ್ತಿಯಲ್ಲಿರುವ ಪುನೀತ್ ಕೆರೆಹಳ್ಳಿ ಕಚೇರಿ ಬಳಿ ಕೆಲವು ಮುಸ್ಲಿಂ ವ್ಯಕ್ತಿಗಳು ಬಂದು ಗಲಾಟೆ ಮಾಡಿ ಹಲ್ಲೆಗೆ ಯತ್ನಿಸಿದ್ದಾರೆ. ಈ ಕುರಿತು 112ಕ್ಕೆ ಕರೆ ಮಾಡಿದರೂ ಪೊಲೀಸರು ಸ್ಥಳಕ್ಕೆ ತಡವಾಗಿ ಆಗಮಿಸಿದ್ದಾರೆ. ಪೊಲೀಸರು ಹಾಗೂ ಹಲ್ಲೆ ಮಾಡಿದ ಕಿಡಿಗೇಡಿಗಳು ಸೇರಿ ಪುನೀತ್ ಕೆರೆಹಳ್ಳಿ ಹಾಗೂ ಅವರ ಸಹಚರರ ಮೇಲೆ ಏಕಪಕ್ಷೀಯವಾಗಿ ಸುಳ್ಳು ದೂರು ದಾಖಲಿಸಿದ್ದಾರೆ. ಹಾಗಾಗಿ ಈ ಪ್ರಕರಣದ ಹಿಂದೆ ಇರುವವರ ವಿರುದ್ಧ ಸಮಗ್ರ ತನಿಖೆ ನಡೆಸುವುದು ಅತ್ಯವಶ್ಯ ಎಂದು ಆಗ್ರಹಿಸಿದರು.

ಹಿಂದೂ ಜನಜಾಗೃತಿ ಸಮಿತಿಯ ಪರಶುರಾಮ, ಈರೇಶ್, ಆರ್‌ಎಸ್‌ಎಸ್‌ನ ಬಿ.ವಿ.ಮಂಜುನಾಥ್, ವಿಎಚ್‌ಪಿ ರಾಜು, ಶರತ್, ಕುಮಾರಸ್ವಾಮಿ, ರವಿ, ಪ್ರಕಾಶ್, ಅವಿನಾಶ್ ಇತರರಿದ್ದರು.