ಬರೂರು ಗ್ರಾಪಂ ವ್ಯಾಪ್ತಿಯಲ್ಲಿ ಆನೆ ದಾಳಿಯಿಂದ ಬೆಳೆ ಕಳೆದುಕೊಂಡ ರೈತರ ಜಮೀನುಗಳನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಪರಿಶೀಲಿಸಿದರು. ಮೋಹನ್‌ಕುಮಾರ್, ರವಿ, ರಶ್ಮಿ ಇತರರಿದ್ದರು.
ತ್ಯಾಗರ್ತಿ: ಕಾಡಾನೆಗಳ ದಾಳಿಗೆ ಬೆಳೆ ನಷ್ಟ ಆಗಿರುವ ರೈತರಿಗೆ ಸರ್ಕಾರದಿಂದ ಪರಿಹಾರ ನೀಡಲಾಗುವುದು ಹಾಗೂ ವೈಯಕ್ತಿಕವಾಗಿಯೂ ಸಹಾಯ ಮಾಡುತ್ತೇನೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಸಮೀಪದ ಬರೂರು ಗ್ರಾಪಂ ವ್ಯಾಪ್ತಿಯ ಗುತ್ತನಹಳ್ಳಿ, ಮುತ್ತಲಬೈಲು ಸೇರಿ ವಿವಿಧ ಗ್ರಾಮದಲ್ಲಿ ಸೋಮವಾರ ಆನೆ ದಾಳಿಗೆ ತುತ್ತಾಗಿರುವ ರೈತರ ತೋಟಗಳಿಗೆ ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ಭಾಗದಲ್ಲಿ ಇದುವರೆಗೆ ಯಾವುದೇ ಕಾಡಾನೆಗಳ ಉಪಟಳ ಇರಲಿಲ್ಲ. ಇತ್ತೀಚೆಗೆ ಆಕಸ್ಮಿಕವಾಗಿ ಆಹಾರ ಹುಡುಕಿಕೊಂಡು ಬಂದಿವೆ. ಕಾಡಾನೆಗಳು ಇಲ್ಲಿನ ಬಿದಿರುಮಟ್ಟಿ ಹಾಗೂ ಕಾಡಿನ ವಾತಾವರಣಕ್ಕೆ ಬೀಡುಬಿಟ್ಟಿರುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಆನೆಗಳ ದಾಳಿಯಿಂದ ಬೆಳೆ ನಷ್ಟ ಅನುಭವಿಸಿದ ರೈತರು ಅರ್ಜಿ ಸಲ್ಲಿಸಬೇಕು. ಈ ಹಿಂದೆ ಆನೆ ದಾಳಿಗೆ ತುತ್ತಾಗಿ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ನೀಡಲಾಗಿದೆ. ಇಲ್ಲಿನ ಕಾಡಿನಲ್ಲಿ ಬೀಡುಬಿಟ್ಟಿರುವ ಆನೆಗಳನ್ನು ಸ್ಥಳಾಂತರ ಮಾಡಲು ಅರಣ್ಯ ಇಲಾಖೆ ಜತೆಗೆ ರೈತರು ಕೈಜೋಡಿಸಬೇಕು. ನಾಳೆಯಿಂದಲೇ ಸಾಗರ ಡಿಎಫ್‌ಒ ಮಾರ್ಗದರ್ಶನದಲ್ಲಿ ಆನೆ ಓಡಿಸಲು ಕಾರ್ಯಾಚರಣೆ ಮಾಡಲಾಗುತ್ತದೆ ಎಂದು ಹೇಳಿದರು
ಡಿಎಫ್‌ಒ ಮೋಹನ್‌ಕುಮಾರ್, ಎಸಿಎ್ ರವಿ, ತಹಸೀಲ್ದಾರ್ ರಶ್ಮಿ, ಆರ್‌ಎ್ಒ ಅಣ್ಣಪ್ಪ, ಶಾಂತಪ್ಪ ಪೂಜಾರಿ, ಮುಖಂಡರಾದ ಕಲ್ಸೆ ಚಂದ್ರಪ್ಪ, ಸೋಮಶೇಖರ್ ಲಾವಿಗ್ಗೆರೆ, ಚೇತನ್‌ರಾಜ್ ಕಣ್ಣೂರು, ವೀರೇಶ್, ಶಿವು ಗುತ್ತನಹಳ್ಳಿ ಇತರರಿದ್ದರು.