ಇಲ್ಲದಿರುವ ದೇವಸ್ಥಾನದ ಹೆಸರ್ಹೇಳಿಕೊಂಡು ಹಣ ವಸೂಲಿ ಮಾಡಿರುವ ನಕಲಿ ರಸೀದಿ.
- ವ್ಯಾನ್, ಟಾಟಾ ಏಸ್ ವಾಹನಗಳಲ್ಲಿ ಭೇಟಿ
- ವಂಚಕರಿಂದ ಲಕ್ಷಾಂತರ ವಸೂಲಿ
- ದೇವರ ಹೆಸರಲ್ಲಿ ಹಣ ವಸೂಲಿ
ಹೊಳೆಹೊನ್ನೂರು: ಗ್ರಾಮಾಂತರ ಪ್ರದೇಶಗಳಲ್ಲಿ ದೇವಸ್ಥಾನ ನಿರ್ಮಾಣ, ಆಶ್ರಮಗಳ ಹೆಸರಿನಲ್ಲಿ ದೇಣಿಗೆ ಸಂಗ್ರಹಕ್ಕೆ ಬರುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹಳ್ಳಿಗಳ ಬೀದಿ ಬೀದಿಗಳಲ್ಲಿ ದೇಣಿಗೆ ಸಂಗ್ರಹಿಸುವ ತಂಡಗಳ ಸಂಖ್ಯೆ ದಿನೇದಿನೆ ಹೆಚ್ಚುತ್ತಿದೆ. ಭಿುಕರನ್ನೂ ಸಹ ಅನುಮಾನದಿಂದ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮೊದಲಿನಂತೆ ಹಳ್ಳಿಗಳಲ್ಲಿ ಮನೆ ಬಾಗಿಲಿಗೆ ಭಿಾಟನೆಗೆಂದು ಬರುವವರ ಸಂಖ್ಯೆ ಇತ್ತೀಚೆಗೆ ವಿರಳವಾಗಿದೆ. ಆದರೆ ಇದೀಗ ದೇವಸ್ಥಾನ ಹಾಗೂ ಆಶ್ರಮಗಳ ಹೆಸರು ಬಳಸಿಕೊಂಡು ಹಣ ವಸೂಲಿ ಮಾಡುತ್ತಿರುವುದು ಹೆಚ್ಚಾಗುತ್ತಿದೆ. ಕೆಲ ತಂಡಗಳು ಬೆಂಗಳೂರು, ತುಮಕೂರು ಭಾಗದ ಪ್ರತಿಷ್ಠಿತ ಆಶ್ರಮಗಳ ಹೆಸರು ಹೇಳಿಕೊಂಡು ಗ್ರಾಮೀಣ ಪ್ರದೇಶದ ಹೊಳೆಹೊನ್ನೂರು, ಹೊಳಲೂರು ಭಾಗದಲ್ಲಿ ಲಾಂತರ ರೂಪಾಯಿ ಹಣ ಸಂಗ್ರಹ ಮಾಡಿದ್ದಾರೆ. ನಕಲಿ ರಸೀದಿ ಪ್ರಕರಣಗಳು ವ್ಯಾಪಕವಾಗಿದೆ.
ಹಳ್ಳಿಗಳಿಗೆ ವ್ಯಾನ್ ಹಾಗೂ ಟಾಟಾ ಏಸ್ ವಾಹನಗಳಲ್ಲಿ ಹಳ್ಳಿಗಳ ಬೀದಿಗಳಿಗೆ ಭೇಟಿ ನೀಡುವ ದೇಣಿಗೆ ಸಂಗ್ರಾಹಕರು ಹಳೆಯ ಬಟ್ಟೆ, ತೆಂಗಿನಕಾಯಿ, ಅಕ್ಕಿ ಪಡೆಯುತ್ತಿದ್ದಾರೆ. ಮೊದಲು ಹಣಕ್ಕೆ ಡಿಮಾಂಡ್ ಮಾಡುತ್ತಾರೆ. ನಂತರ ಅಕ್ಕಿ ಕೊಡಲಿಲ್ಲವಾದರೆ ತೆಂಗಿನಕಾಯಿಯನ್ನಾದರೂ ಕೊಡಿ ಎನ್ನುತ್ತಾರೆ. ಇಲ್ಲವಾದರೆ ಹಳೆಯ ಬಟ್ಟೆಗಳನ್ನು ನೀಡಿ ಎಂದು ಕೇಳಿ ಪಡೆಯುತ್ತಿದ್ದಾರೆ.
ಸಂಗ್ರಹಣೆ ನಂತರ ಅಕ್ಕಿ ಹಾಗೂ ತೆಂಗಿನಕಾಯಿಗಳನ್ನು ಇಟ್ಟುಕೊಂಡು ಹಳೆಯ ಬಟ್ಟೆಗಳನ್ನು ರಸ್ತೆ ಬದಿ ಎಸೆದು ಹೋಗುತ್ತಿದ್ದಾರೆ. ದಿನಸಿ ಸಂಗ್ರಹಕ್ಕೆ ಬರುವ ವಾಹನಗಳ ಮೇಲೆ ಅಳವಡಿಸಿರುವ ಪ್ಲೆಕ್ಸ್ಗಳಲ್ಲಿ ಆಶ್ರಮದ ವಿವರ, ಮೊಬೈಲ್ ನಂಬರ್ಗಳನ್ನು ಹಾಕಿರುತ್ತಾರೆ. ಅನುಮಾನಗೊಂಡು ಕೆಲ ಸಾರ್ವಜನಿಕರು ಗೋಗಲ್ ನೆಯಲ್ಲಿ ಜಾಗದ ವಿವರ ಪತ್ತೆಮಾಡಲು ಪ್ರಯತ್ನಿಸಿದ್ದಾರೆ. ಪ್ಲೆಕ್ಸ್ಗಳಲ್ಲಿರುವ ನಂಬರಿಗೆ ಕರೆ ಮಾಡಿದರೆ ಫೋನ್ಗಳು ರಿಂಗಣಿಸುತ್ತವೆ. ಆದರೆ ಯಾರೊಬ್ಬರೂ ಕರೆ ಸ್ವೀಕರಿಸುವುದಿಲ್ಲ.
ತಾಲೂಕಿನ ಹಂಚಿನ ಸಿದ್ದಾಪುರದ ದೇವಸ್ಥಾನದ ಹೆಸರು ಹೇಳಿಕೊಂಡು ಅಕ್ಕಪಕ್ಕದ ಹಳ್ಳಿಗಳಲ್ಲಿ ಹಣ ಸಂಗ್ರಹಿಸಲಾಗಿದೆ. ದೇಣಿಗೆ ಸಂಗ್ರಹದ ರಸೀದಿ ಪುಸ್ತಕ ಗ್ರಾಮಸ್ಥರಿಗೆ ಸಿಕ್ಕಿದೆ. ಉಡುಪಿ ಭಾಗದಲ್ಲೂ ಇದೇ ದೇಗುಲದ ಹೆಸರು ಹೇಳಿಕೊಂಡು ಹಣ ವಸೂಲಿ ಮಾಡಿ ಸ್ಥಳಿಯರು ಕೆಲವರನ್ನು ಥಳಿಸಿದ್ದಾರೆ ಎನ್ನಲಾಗಿದೆ. ಒಂದೆರಡು ಗುಂಪುಗಳು ಸ್ಥಳಿಯವಾಗಿ ನಕಲಿ ರಸೀದಿ ಪುಸ್ತಕ ತಯಾರಿಸಿಕೊಂಡು ಹಣ ವಸೂಲಿಯನ್ನೇ ಕಾಯಕವನ್ನಾಗಿ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ನೂತನ ದೇವಸ್ಥಾನ ನಿರ್ಮಾಣವಾಗುವ ಗ್ರಾಮಗಳ ಹೆಸರನ್ನು ದುರ್ಬಳಕೆ ಪಡಿಸಿಕೊಂಡು ಹಣ ವಸೂಲಿ ಮಾಡುವ ತಂಡಗಳು ಸ್ಥಳಿಯವಾಗಿ ಮುಂಚೂಣಿಯಲ್ಲಿವೆ. ನಕಲಿ ರಸೀದಿ ಪುಸ್ತಕಗಳನ್ನು ಬಳಸಿಕೊಂಡು ಅಸಲಿ ದೇವಸ್ಥಾನ ಸಮಿತಿಗಳಿಗೂ ಗಮನಕ್ಕೆ ಬಾರದಂತೆ ಹಣ ವಸೂಲಿ ಮಾಡುತ್ತಿದ್ದಾರೆ. ಭರ್ತಿಯಾದ ರಸೀದಿ ಪುಸ್ತಕಗಳನ್ನು ರಸ್ತೆ ಬದಿ ಎಸೆದು ಹೋಗಿರುವುದರಿಂದ ಇದೀಗ ದೇಣಿಗೆ ಸಂಗ್ರಹದ ಸತ್ಯ ಬೆಳಕಿಗೆ ಬಂದಿದೆ. ರಸೀದಿಯಲ್ಲಿರುವ ಹೆಸರಿನ ಗ್ರಾಮಗಳನ್ನು ಸಂಪರ್ಕಿಸಿ ಈ ಬಗ್ಗೆ ವಿಚಾರಿಸಿದಾಗ ಮಾತ್ರ ಗ್ರಾಮಸ್ಥರಿಗೆ ತಮ್ಮೂರಿನ ಹೆಸರು ಬಳಸಿಕೊಂಡು ಹಣ ವಸೂಲಿ ಮಾಡಿರುವುದು ಬೆಳಕಿಗೆ ಬರುತ್ತಿದೆ.
ಧಾರ್ಮಿಕ ಕಾರ್ಯಗಳಿಗೆ ಕೈಜೋಡಿಸುವುದು ತಪ್ಪಲ್ಲ. ಪೂರ್ವಪರ ವಿಚಾರಿಸಿ ದೇಣಿಗೆ ನೀಡಲು ಮುಂದಾಗಬೇಕು. ವ್ಯಕ್ತಿಗಳ ಮೇಲೆ ಒತ್ತಡ ಹಾಕಿ ಹಣ ವಸೂಲಿ ಮಾಡುವುದು, ವಸೂಲಿಗೆ ಬಂದವರ ವರ್ತನೆಯಲ್ಲಿ ಅನುಮಾನ ಬಂದಾಗ ಪೊಲೀಸ್ ಠಾಣೆಗೆ ತಕ್ಷಣ ಮಾಹಿತಿ ನೀಡಿದರೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬಹುದು.
ಪೊಲೀಸ್ ಇನ್ಸ್ಪೆಕ್ಟರ್, ಹೊಳೆಹೊನ್ನೂರು
ಕೆಲವರು ಮಾಡುತ್ತಿರುವ ಅನಾಚಾರಗಳಿಂದ ನಿಜವಾಗಿಯೂ ದೇಣಿಗೆ ಸಂಗ್ರಹಕ್ಕೆಂದು ಬರುವವರನ್ನು ಅನುಮಾನದಿಂದ ನೋಡುವಂತಾಗಿದೆ. ಹಳ್ಳಿಗಳಲ್ಲಿ ದೇಣಿಗೆ ಸಂಗ್ರಹಕ್ಕೆಂದು ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅಕ್ಕಪಕ್ಕದ ಗ್ರಾಮಗಳ ಪರಿಚಯಸ್ಥರು ಬಂದಾಗ ಮಾತ್ರ ದೇಣಿಗೆ ನೀಡಬೇಕು. ಸಾಧ್ಯವಾದಷ್ಟು ಕಾರ್ಯಕ್ರಮಗಳ ಅಸಲಿಯತ್ತು ಪರೀಸಿದ ನಂತರ ಸಹಾಯ ಮಾಡಬೇಕು.
ಹಂಚಿನಸಿದ್ದಾಪುರದಲ್ಲಿ ಯಾವುದೇ ಅಯ್ಯಪ್ಪ ಸ್ವಾಮಿ ದೇವಸ್ಥಾನ ನಿರ್ಮಾಣ ಮಾಡುತ್ತಿಲ್ಲ. ನಮ್ಮೂರಿನ ಹೆಸರಿರುವ ರಸೀದಿ ನೋಡಿ ಗ್ರಾಮಸ್ಥರಿಗೆ ಆಶ್ಚರ್ಯವಾಗಿದೆ. ಹಂಚಿನಸಿದ್ದಾಪುರದ ಹೆಸರನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಸಾರ್ವಜನಿಕರು ವಂಚಕರಿಗೆ ಹಣ ನೀಡಿ ಮೋಸ ಹೋಗಬಾರದು. ಸದ್ಯಕ್ಕೆ ನಮ್ಮೂರಿನಲ್ಲಿ ಸಿದ್ದೇಶ್ವರಸ್ವಾಮಿ ದೇವಸ್ಥಾನ ನಿರ್ಮಾಣವಾಗುತ್ತಿದೆ. ಗ್ರಾಮದಲ್ಲಿರುವ ಜಮೀನುಗಳ ಆಧಾರದಲ್ಲಿ ಸಿದ್ದೇಶ್ವರ ದೇವಸ್ಥಾನ ನಿರ್ಮಾಣಕ್ಕೆ ಗ್ರಾಮಸ್ಥರಿಂದ ವಂತಿಕೆ ಸಂಗ್ರಹಿಸಲಾಗಿದೆ.
ಪ್ರಧಾನ ಕಾರ್ಯದರ್ಶಿ, ಸಿದ್ದೇಶ್ವರ ಸೇವಾ ಸಮಿತಿ ಹಂಚಿನ ಸಿದ್ದಾಪುರ