ಭದ್ರಾವತಿ ರಂಗಪ್ಪ ವೃತ್ತದ ಬಳಿ ರಸ್ತೆ ಮಧ್ಯಭಾಗದಲ್ಲಿ ಗುರುತು ಮಾಡಿ ಬಣ್ಣ ಹಚ್ಚುತ್ತಿರುವ ಪಿಡಬ್ಲುೃಡಿ ಸಿಬ್ಬಂದಿ. 
ಶಿವಮೊಗ್ಗ

ಸಿಎನ್ ರಸ್ತೆ ವಿಸ್ತರಣೆ ತಲಾ 40 ಅಡಿ | road widning

ಶಿವಕುಮಾರ ಎಸ್.ಪಿ.
ಭದ್ರಾವತಿ: ನಗರದ ಚನ್ನಗಿರಿ ರಸ್ತೆ ಅಗಲೀಕರಣಕ್ಕಾಗಿ ಪಿಡಬ್ಲುೃಡಿ ಇಲಾಖೆ ಅಧಿಕಾರಿಗಳು ರಸ್ತೆ ಮಧ್ಯಭಾಗದಿಂದ ಎರಡೂ ಬದಿ ತಲಾ 40 ಅಡಿ ಅಳತೆ ಮಾಡಿ ಗುರುತು ಮಾಡಿದರು. ಈ ಮೂಲಕ ರಸ್ತೆಯ ಬಲ ಹಾಗೂ ಎಡ ಭಾಗದ ಕಟ್ಟಡಗಳ ಮಾಲೀಕರು ನಿರಾಳರಾದರು.
ನಾಲ್ಕೈದು ತಿಂಗಳ ಹಿಂದೆ ರಸ್ತೆ ಮಧ್ಯದಿಂದ ಎರಡೂ ಕಡೆ ತಲಾ 50 ಅಡಿ ಅಗಲಕ್ಕೆ ತೀರ್ಮಾನಿಸಲಾಗಿತ್ತು. ಆಗ ಎಲ್ಲ ಅಂಗಡಿ ಮಾಲೀಕರು ತಮ್ಮ ಜಾಗವನ್ನು ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದರು. ಕೊನೆಯದಾಗಿ 40 ಅಡಿಗೆ ಕಟ್ಟಡವನ್ನು ತೆರವುಗೊಳಿಸಲು ನಿರ್ದೇಶಿಸಲಾಗಿದ್ದು. ಅದರಂತೆ ಕಟ್ಟಡ ತೆರವು ಆರಂಭವಾಗಲಿದೆ.
 ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಸಮ್ಮುಖದಲ್ಲಿ ಪಿಡಬ್ಲುೃಡಿ ಇಲಾಖೆ ಅಧಿಕಾರಿಗಳು ರಂಗಪ್ಪ ವೃತ್ತದಿಂದ ಮಾಧವಾಚಾರ್ ವೃತ್ತದವರೆಗೆ ಅಳತೆ ಮಾಡಲು ಮುಂದಾಗಿದ್ದರು. ರಸ್ತೆ ಮಧ್ಯ ಗುರುತು ಮಾಡುವಾಗ ಕಟ್ಟಡಗಳ ಮಾಲೀಕರು ವಾಗ್ವಾದ ನಡೆಸಿದರು. ರಸ್ತೆ ಅಳತೆಯನ್ನು ಮಾಧವಾಚಾರ್ ವೃತ್ತದಿಂದ ಮಾಡಬೇಕು. ಆದರೆ ರಂಗಪ್ಪ ವೃತ್ತದಿಂದ ಮಾಡುತ್ತಿರುವುದು ಸರಿಯಲ್ಲ. ಕೆಳಗಿನ ಮಾಧವಾಚಾರ್ ವೃತ್ತದಿಂದ ಮೇಲಿನ ರಂಗಪ್ಪವೃತ್ತದವರೆಗೂ ಅಳತೆ ಮಾಡಿ ಎಂದು ಕೆಲವರು ಮಾತಿನ ಚಕಮಕಿ ನಡೆಸಿದರು. ಅದಕ್ಕೆ ಅಧಿಕಾರಿಗಳು ಬಗ್ಗದೆ ಎಲ್ಲ ಕಡೆಗಳಲ್ಲೂ ಅಳತೆ ಮಾಡುತ್ತೇವೆ. ನಮಗೆ ಕೆಲಸ ಮಾಡಲು ಬಿಡಿ ಎಂದು ಕಟ್ಟಡ ಮಾಲೀಕರಿಗೆ ತಿಳಿ ಹೇಳಿದರು. ನಂತರ  ಗುರುತಿಸುವ ಕಾರ್ಯ ಸರಾಗವಾಗಿ ನಡೆಯಿತು.