ಭದ್ರಾವತಿ ಸಿಎನ್ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿ ಫುಟ್‌ಪಾತ್ ಅಂಗಡಿಗಳನ್ನು ನಗರಸಭೆ ಅಧಿಕಾರಿಗಳ ತಂಡ ತೆರವು ಮಾಡುತ್ತಿರುವುದು.
ಭದ್ರಾವತಿ: ಬಹುದಿನದಿಂದ ನನೆಗುದಿಗೆ ಬಿದ್ದಿದ್ದ ನಗರದ ಸಿಎನ್ ರಸ್ತೆ ಅಗಲೀಕರಣಕ್ಕೆ ನಗರಸಭೆ ಅಧಿಕಾರಿಗಳು ಚಾಲನೆ ನೀಡಿದರು. ಸಿಎನ್ ರಸ್ತೆಯಲ್ಲಿ ನಗರಸಭೆ ಅಧೀನದಲ್ಲಿರುವ ಕಟ್ಟಡಗಳನ್ನು ತೆರವು ಮಾಡುತ್ತಿರುವ ಅಧಿಕಾರಿಗಳು, ಮನೆ ಹಾಗೂ ಅಂಗಡಿ ಕಟ್ಟಡಗಳ ಮಾಲೀಕರು ತಮ್ಮ ಕಟ್ಟಡಗಳನ್ನು ರಸ್ತೆ ಮಧ್ಯಭಾಗದಿಂದ 40 ಅಡಿಗಳಷ್ಟು ತಾವೇ ತೆರವುಗೊಳಿಸುವಂತೆ ಸೂಚಿಸಿದರು.
ಕಟ್ಟಡಗಳ ತೆರವು ಕಾರ್ಯಾಚರಣೆ ಕೈಗೊಳ್ಳಲು ಸರ್ಕಾರ ಒಂದು ವರ್ಷದ ಹಿಂದೆ ನಗರಸಭೆ ಹಾಗೂ ಪಿಡಬ್ಲುೃಡಿ ಇಲಾಖೆಗೆ 100 ಅಡಿ ರಸ್ತೆ ವಿಸ್ತೀರ್ಣಕ್ಕೆ ಆದೇಶಿಸಿತ್ತು. ಮನೆ ಕಟ್ಟಡ ಮಾಲೀಕರಿಗೆ 8 ತಿಂಗಳ ಹಿಂದೆ ನೋಟಿಸ್ ನೀಡಲಾಗಿತ್ತು. ನೋಟಿಸ್ ಪಡೆದ ಕಟ್ಟಡ ಮಾಲೀಕರು 100 ಅಡಿ ವಿಸ್ತೀರ್ಣಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
ಕಟ್ಟಡಗಳ ಮಾಲೀಕರ ಒತ್ತಾಯದ ಮೇರೆಗೆ ಶಾಸಕ ಬಿ.ಕೆ.ಸಂಗಮೇಶ್ವರ್, ನಗರಸಭೆ ಹಾಗೂ ಪಿಡಬ್ಲುೃಡಿ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಿ ಎರಡೂ ಬದಿ ಸೇರಿ 80 ಅಡಿಗೆ ನಿಗದಿಗೊಳಿಸಿದ್ದರು. ರಸ್ತೆ ಮಧ್ಯದಿಂದ ಎರಡೂ ಕಡೆ ತಲಾ 40 ಅಡಿ ವಿಸ್ತರಣೆ ಮಾಡಲು ತೀರ್ಮಾನಿಸಲಾಗಿತ್ತು.
8 ತಿಂಗಳ ಹಿಂದೆ ಕಟ್ಟಡಗಳ ಮಾಲೀಕರಿಗೆ ನೋಟಿಸ್ ನೀಡಲಾಗಿದ್ದು, ಕಟ್ಟಡಗಳ ಗೋಡೆಗಳ ಮೇಲೆ ಕೆಂಪು ಬಣ್ಣದಿಂದ ಗುರುತು ಸಹ ಮಾಡಲಾಗಿತ್ತು. ಬುಧವಾರ ಮತ್ತೊಮ್ಮೆ ಅಧಿಕಾರಿಗಳು ಹೊಸದಾಗಿ ಅಳತೆ ಮಾಡಿದರು.ನಗರಸಭೆ ಅಧಿಕೃತವಾಗಿ ಕಟ್ಟಡಗಳನ್ನು ಕೆಡವಿ ರಸ್ತೆ ಅಗಲೀಕರಣ ಕಾರ್ಯ ಆರಂಭಿಸಿದೆ. ಪೌರಾಯುಕ್ತ ಕೆ.ಎನ್.ಹೇಮಂತ್, ಇಂಜಿನಿಯರ್ ಶಿವಪ್ರಸಾದ್ ಮತ್ತಿತರರು ಇದ್ದರು.