ಶಿವಮೊಗ್ಗ ವಿನೋಬನಗರ 100 ಅಡಿ ರಸ್ತೆಯಲ್ಲಿ ಅತಿಕ್ರಮಣಗೊಂಡಿದ್ದ ಹಣ್ಣಿನ ಅಂಗಡಿಗಳನ್ನು ಪೊಲೀಸರು ಮತ್ತು ಪಾಲಿಕೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಫುಟ್‌ಪಾತ್ ತೆರವುಗೊಳಿಸಿದರು.
ಶಿವಮೊಗ್ಗ: ನಗರದ ಪ್ರಮುಖ ರಸ್ತೆಗಳಲ್ಲಿ ಪಾದಚಾರಿ ಮಾರ್ಗ(Footpath)ಗಳನ್ನು ಅತಿಕ್ರಮಿಸಿಕೊಂಡಿದ್ದ ಅಂಗಡಿ ಮುಂಗಟ್ಟು ಹಾಗೂ ಫಾಸ್ಟ್‌ಫುಡ್(Fast food) ಗಾಡಿಗಳ ಮೇಲೆ ಶನಿವಾರ ಬೆಳಗ್ಗೆಯೇ ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ಸಂಚಾರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಒತ್ತುವರಿ ತೆರವುಗೊಳಿಸಿದರು.
ವಿನೋಬನಗರ 100 ಅಡಿ ರಸ್ತೆ, ಲಕ್ಷ್ಮೀ ಟಾಕೀಸ್ ವೃತ್ತದಿಂದ ರಾಜಕುಮಾರ ವೃತ್ತ, ಮೇದಾರ ಕೇರಿ ರಸ್ತೆ ಹಾಗೂ ಫ್ರೀಡಂಪಾರ್ಕ್(Freedom Park) ಎದುರು ಭಾಗದಲ್ಲಿ ಕಾರ್ಯಾಚರಣೆ ನಡೆಸಿ ಅತಿಕ್ರಮಣಗೊಂಡಿದ್ದ ಫುಟ್‌ಪಾತ್ ಅನ್ನು ತೆರವುಗೊಳಿಸಿದರು.
ಫುಟ್‌ಪಾತ್‌ಗಳ ಮೇಲೆ ಅನಧಿಕೃತವಾಗಿ ದೊಡ್ಡ ದೊಡ್ಡ ನಾಮಫಲಕಗಳು, ತಳ್ಳುಗಾಡಿಗಳು, ಫಾಸ್ಟ್‌ಫುಡ್ ತಯಾರಿಕಾ ಉಪಕರಣಗಳನ್ನು ಇರಿಸಲಾಗಿತ್ತು. ಫುಟ್‌ಪಾತ್‌ಗಳು ಅತಿಕ್ರಮಣಗೊಂಡಿದ್ದರಿಂದ ಸಾರ್ವಜನಿಕರ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿತ್ತು. ಪಾದಚಾರಿಗಳಿಗೆ ತೊಂದರೆ ನೀಡುತ್ತಿದ್ದ ಇತರೆ ವಸ್ತುಗಳನ್ನು ಸ್ಥಳದಲ್ಲೇ ತೆರವುಗೊಳಿಸಿದರು. ನಂತರ ಸಂಚಾರ ಠಾಣೆ ಇನ್‌ಸ್ಪೆಕ್ಟರ್ ದೇವರಾಜ್ ನೇತೃತ್ವದಲ್ಲಿ ಪಾಲಿಕೆ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.