ಸಾಗರ: ನಗರಸಭೆಯಲ್ಲಿ ಚುನಾಯಿತ ಪ್ರತಿನಿಧಿಗಳ ಆಡಳಿತ ಅವಧಿ ಮುಗಿದು ಆರು ತಿಂಗಳಾಗಿವೆ. ಇದರಿಂದ ಸ್ವಚ್ಛತೆ, ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ನಗರಸಭೆ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಈವರೆಗೆ ಒಂದೇ ಒಂದು ಸಭೆ ನಡೆಸಿಲ್ಲ ಎಂದು ಪುರಸಭೆ ಮಾಜಿ ಅಧ್ಯಕ್ಷ ತೀ.ನ.ಶ್ರೀನಿವಾಸ್ ದೂರಿದ್ದಾರೆ.
ಹೇಳಿಕೆ ನೀಡಿರುವ ಅವರು, ಪಟ್ಟಣಕ್ಕೆ ದಿನದ 24 ತಾಸು ನೀರು ಕೊಡುತ್ತೇವೆ ಎಂದು ಜನಪ್ರತಿನಿಧಿಗಳು ನೀಡಿದ್ದ ಭರವಸೆ ಹುಸಿಯಾಗಿದೆ. ಜನರು ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದಾರೆ. ವಾರ್ಡ್‌ಗಳಲ್ಲಿ ಸ್ವಚ್ಛತೆ ಮಾಯವಾಗಿದೆ. ಪರಿಸರ ಇಂಜಿನಿಯರ್‌ಗಳು, ಆರೋಗ್ಯ ನಿರೀಕ್ಷಕರು ಸಂಪೂರ್ಣ ವಿಫಲವಾಗಿದ್ದಾರೆ. ಮಾರ್ಕೇಟ್ ರಸ್ತೆ ಅಗಲೀಕರಣ ನನೆಗುದಿಗೆ ಬಿದ್ದಿದೆ. ಹೈಕೋರ್ಟ್ 2014ರ ಭೂಸ್ವಾಧೀನ ಆದೇಶ ಪಾಲನೆ ಮಾಡಲು ಆದೇಶಿಸಿದರೂ ಉಪವಿಭಾಗಾಧಿಕಾರಿ ಸುಮ್ಮನಿದ್ದಾರೆ ಎಂದು ಆರೋಪಿಸಿದ್ದಾರೆ.
ಬಿ.ಎಚ್.ರಸ್ತೆಯನ್ನು 100 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸುತ್ತಿದ್ದು, ಅಗಲೀಕರಣ ಕಾಮಗಾರಿ ಅವೈಜ್ಞಾನಿಕವಾಗಿದೆ. ಒಂದು ವರ್ಷದಲ್ಲಿ ಮುಗಿಯಬೇಕಿದ್ದ ಕಾಮಗಾರಿ ಐದು ವರ್ಷವಾದರೂ ಮುಗಿದಿಲ್ಲ. ಶಾಸಕರು, ಸಂಸದರ ವೈಫಲ್ಯವೇ ಇದಕ್ಕೆ ಕಾರಣ. ನಗರ ವ್ಯಾಪ್ತಿಯಲ್ಲಿ ಒಳಚರಂಡಿ ಕಾಮಗಾರಿ ಆರಂಭವಾಗಿ 15 ವರ್ಷಗಳಾಗಿವೆ. ಸೀಪೇಜ್ ಟ್ರಿಟ್‌ಮೆಂಟ್ ಪ್ಲಾಂಟ್‌ಗೆ ಭೂಸ್ವಾಧೀನ ಮಾಡಿಕೊಳ್ಳುತ್ತಿಲ್ಲ ಎಂಬ ಕಾರಣಕ್ಕೆ ಕಾಮಗಾರಿ ವಿಳಂಬವಾಗಿದೆ. ಒಳಚರಂಡಿ ಯೋಜನೆಗೆ 20 ಕೋಟಿ ರೂ. ಮಂಜೂರು ಮಾಡಿಸಿದ್ದೇನೆ ಎಂದು ಶಾಸಕರು ಹೇಳುತ್ತಿದ್ದಾರೆ. ಹಾಗಾದರೆ ಹಣದ ಲೆಕ್ಕ ಕೊಡಿ. ಸುಮಾರು 100 ಕೋಟಿ ರೂ. ಒಳಚರಂಡಿ ಕಾಮಗಾರಿಗೆ ಮಂಜೂರಾಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ನಗರ ವ್ಯಾಪ್ತಿಯಲ್ಲಿ ಸೇಲ್ ಸರ್ಟಿಫಿಕೇಟ್ ಹಗರಣ ನಡೆದಿದ್ದು ತನಿಖೆಗೆ ಸೂಚನೆ ನೀಡಲಾಗಿತ್ತು. ಸುಮಾರು 3 ಎಕರೆ ಭೂಮಿಯನ್ನು ಹಿಂದಿನ ಅಪರ ಜಿಲ್ಲಾಧಿಕಾರಿಯೊಬ್ಬರು ಅಕ್ರಮ ಖಾತೆ ಮಾಡಿದ್ದರ ಬಗ್ಗೆ ತನಿಖೆಗೆ ಆದೇಶ ನೀಡಿದ್ದರು. ತನಿಖೆಯ ಪ್ರಗತಿಯನ್ನು ಬಹಿರಂಗಪಡಿಸಬೇಕು. ಈ ಎಲ್ಲ ಕಾರಣಕ್ಕೆ ನಗರ ಅಭಿವೃದ್ಧಿ ಹಿನ್ನಡೆ ಅನುಭವಿಸಿದೆ. ತಕ್ಷಣ ಜಿಲ್ಲಾಧಿಕಾರಿ ಸಭೆ ಕರೆದು ಕುಡಿಯುವ ನೀರು, ಸ್ವಚ್ಛತೆ, ನಗರೋತ್ಥಾನ ಕಾಮಗಾರಿ ಬಗ್ಗೆ ಗಮನ ಹರಿಸಬೇಕು ಎಂದು ಆಗ್ರಹಿಸಿದ್ದಾರೆ.