ಸ್ಮಾರ್ಟ್‌ಸಿಟಿಯಲ್ಲಿನ ಲೋಷದೋಷ ಸರಿಪಡಿಸುವಂತೆ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪದಾಧಿಕಾರಿಗಳು ಶಾಸಕ ಎಸ್.ಎನ್.ಚನ್ನಬಸಪ್ಪ ಅವರ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಕೆ.ವಿ.ವಸಂತ್‌ಕುಮಾರ್, ಡಾ. ಎ.ಸತೀಶ್‌ಕುಮಾರ್ ಶೆಟ್ಟಿ, ಎಸ್.ಬಿ. ಅಶೋಕ್‌ಕುಮಾರ್, ಬಿ.ಗೋಪಿನಾಥ್, ಜಿ.ವಿಜಯಕುಮಾರ್ ಇದ್ದರು.
- ಸ್ಮಾರ್ಟ್‌ಸಿಟಿ ಕಾಮಗಾರಿಗಳಲ್ಲಿನ ಲೋಪದೋಷ ಸರಿಪಡಿಸುವಂತೆ ಆಗ್ರಹ
- ಸರ್ಕಾರದ ನಿಯಮಾವಳಿಗೆ ವಿರುದ್ಧವಾಗಿ ಹೆಚ್ಚುವರಿ ಶುಲ್ಕ ವಸೂಲಿ
- ಸಮಸ್ಯೆಗಳು ಬಗೆಹರಿಯದಿದ್ದರೆ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ
ಶಿವಮೊಗ್ಗ: ನಗರದ ವಿವಿಧ ಮೂಲಸೌಕರ್ಯ ಸಮಸ್ಯೆ(Infrastructure problem)ಗಳನ್ನು ತಕ್ಷಣ ಬಗೆಹರಿಸುವಂತೆ ಆಗ್ರಹಿಸಿ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪದಾಧಿಕಾರಿಗಳು ಸೋಮವಾರ ಶಾಸಕ ಎಸ್.ಎನ್.ಚನ್ನಬಸಪ್ಪ ಅವರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಹೆಚ್ಚಿನ ಸಾಮರ್ಥ್ಯದ ಶುದ್ಧೀಕರಣ ಘಟಕ(purification plant) ನಿರ್ಮಾಣ, ಸ್ಮಾರ್ಟ್‌ಸಿಟಿ ಯೋಜನೆ(SmartCity Project)ಯಡಿ ಅಳವಡಿಸಿರುವ ಭೂಗತ ವಿದ್ಯುತ್ ಕೇಬಲ್ ಕಾಮಗಾರಿ ಪೂರ್ಣಗೊಂಡಿದ್ದರೂ ಹಳೆಯ ವಿದ್ಯುತ್ ಕಂಬ ತೆರವುಗೊಳಿಸದಿರುವುದು, ಬಳಕೆಗೆ ಯೋಗ್ಯವಲ್ಲದ ಇ-ಟಾಯ್ಲೆಟ್‌ಗಳು, ಖಾತೆ ಬದಲಾವಣೆ ಶುಲ್ಕದ ಹೆಸರಿನಲ್ಲಿ ಅತಿಯಾದ ಶುಲ್ಕ ವಸೂಲಿ ಹಾಗೂ ಸ್ಮಾರ್ಟ್‌ಸಿಟಿ ಕಾಮಗಾರಿಗಳಲ್ಲಿನ ಲೋಪದೋಷಗಳನ್ನು ಸರಿಪಡಿಸುವಂತೆ ಆಗ್ರಹಿಸಿದರು.
ನಗರದ ವಿವಿಧ ಭಾಗಗಳಲ್ಲಿ ನಡೆದಿರುವ ಸ್ಮಾರ್ಟ್‌ಸಿಟಿ ಕಾಮಗಾರಿ(Smart City work)ಗಳಲ್ಲಿ ಹಲವು ಲೋಪದೋಷಗಳಿವೆ. ಕಾಮಗಾರಿಗಳಲ್ಲಿನ ಸಮಸ್ಯೆಗಳನ್ನು ಪಟ್ಟಿ ಮಾಡಿ ಸ್ಥಳಗಳ ಛಾಯಾಚಿತ್ರಗಳ ಸಹಿತ ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಲಾಗಿದೆ. ಆದರೆ ಇದುವರೆಗೆ ಸಮಸ್ಯೆಗಳ ಪರಿಹಾರಕ್ಕೆ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಮಗಾರಿಗಳ ಗುಣಮಟ್ಟ ಪರಿಶೀಲಿಸಿ, ಕಂಡುಬರುವ ಲೋಪದೋಷಗಳನ್ನು ಸರಿಪಡಿಸುವುದರ ಜತೆಗೆ ಕಾಮಗಾರಿಗಳ ನಿರ್ವಹಣೆಯ ಜವಾಬ್ದಾರಿ ಸಮರ್ಪಕವಾಗಿ ನಿರ್ವಹಿಸಬೇಕು. ಶಿವಮೊಗ್ಗ ನಗರದಲ್ಲಿ ಖಾತೆ ಬದಲಾವಣೆ ಶುಲ್ಕ(Account change fee)ದ ಹೆಸರಿನಲ್ಲಿ ಸರ್ಕಾರದ ಸುತ್ತೋಲೆಯಲ್ಲಿ ನಿಗದಿಪಡಿಸಿರುವ ಮೊತ್ತಕ್ಕಿಂತ ಹಲವು ಪಟ್ಟು ಹೆಚ್ಚಿನ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಸರ್ಕಾರದ ನಿಯಮಾವಳಿಗೆ ವಿರುದ್ಧವಾಗಿ ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿದ್ದರೆ ಅದನ್ನು ತಕ್ಷಣ ಸರಿಪಡಿಸಬೇಕು. ಈ ಸಮಸ್ಯೆ ಬಗೆಹರಿಸಲು ಆರು ತಿಂಗಳು ಬೇಕಾಗುವ ಪರಿಸ್ಥಿತಿ ಏಕೆ ನಿರ್ಮಾಣವಾಗಿದೆ ಎಂದು ಪ್ರಶ್ನಿಸಿದರು.
ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ವಿ.ವಸಂತ್‌ಕುಮಾರ್ ಮಾತನಾಡಿ, ಸಮಸ್ಯೆಗಳ ಪರಿಹಾರಕ್ಕಾಗಿ ಕಳೆದ 10 ತಿಂಗಳಿಂದ ಶಾಸಕರು ಹಾಗೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುತ್ತಿದ್ದರೂ ಸಮಸ್ಯೆಗಳ ಕುರಿತು ಸಮರ್ಪಕ ಸಭೆ ನಡೆಯುತ್ತಿಲ್ಲ. ಒಳ್ಳೆಯ ಮಾತಿನಲ್ಲಿ ಹಲವು ಬಾರಿ ಮನವಿ ಮಾಡಿದ್ದೇವೆ. ಆದರೆ ನಮ್ಮ ಮನವಿಗಳಿಗೆ ಸ್ಪಂದನೆ ದೊರೆಯುತ್ತಿಲ್ಲ. ನಮ್ಮ ತಾಳ್ಮೆಯ ಕಟ್ಟೆ ಒಡೆದಿದ್ದು, ಇಂದಿನಿಂದ ಹೋರಾಟದ ಎರಡನೇ ಹಂತ(Second stage) ಆರಂಭವಾಗಿದೆ. ಸಮಸ್ಯೆಗಳು ಬಗೆಹರಿಯದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಒಕ್ಕೂಟದ ಅಧ್ಯಕ್ಷ ಎಸ್.ಆರ್.ಗೋಪಾಲ್, ಸಂಘಟನಾ ಕಾರ್ಯದರ್ಶಿ ಡಾ. ಎ.ಸತೀಶ್‌ಕುಮಾರ್ ಶೆಟ್ಟಿ, ಕಾರ್ಯದರ್ಶಿ ಎಸ್.ಬಿ. ಅಶೋಕ್‌ಕುಮಾರ್, ನಾಗರಾಜ್ ಘೋರೆ, ನಾಗರಾಜ್ ಶೆಟ್ಟರ್, ಜನಮೇಜಿರಾವ್, ಜನಾರ್ದನ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್, ಉಪಾಧ್ಯಕ್ಷ ಜಿ.ವಿಜಯ ಕುಮಾರ್ ಮತ್ತಿತರರು ಪ್ರತಿಭಟನೆಯಲ್ಲಿದ್ದರು.