ಶಿವಮೊಗ್ಗ ತಾಲೂಕು ಲಿಂಗಾಪುರ ಸಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಮಕ್ಕಳನ್ನು ಟಿಲ್ಲರ್ ಮೂಲಕ ಮೆರವಣಿಗೆಯಲ್ಲಿ ಕರೆತರಲಾಯಿತು. ಬಿಇಒ ರಮೇಶ್, ಶಿಕ್ಷಕರು, ಸಾರ್ವಜನಿಕರು ಇದ್ದರು. 
ಶಿವಮೊಗ್ಗ

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕಲರವ I government schools

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾದ್ಯಂತ ಮೊದಲ ದಿನ ಅದ್ದೂರಿ ಸ್ವಾಗತ
  • ಪಠ್ಯಪುಸ್ತಕ, ಸಮವಸ್ತ್ರ ವಿತರಣೆ
  • ಬಿಸಿಯೂಟದ ಜತೆ ಸಿಹಿ ಹಂಚಿಕೆ
ಶಿವಮೊಗ್ಗ: ಜಿಲ್ಲೆಯ ವಿವಿಧೆಡೆ ಸೋಮವಾರ ಸರ್ಕಾರಿ (government) ಶಾಲೆಗಳ ಪ್ರಾರಂಭೋತ್ಸವ ಸಂಭ್ರಮದಿಂದ ಜರುಗಿತು. ಶಾಲೆ (schools) ಗಳನ್ನು ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು. ಮಕ್ಕಳನ್ನು ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆ ಸಿಬ್ಬಂದಿ ವಿಶೇಷವಾಗಿ ಸ್ವಾಗತಿಸಿದರು. ಬಹುತೇಕ ಕಡೆಗಳಲ್ಲಿ ಮಕ್ಕಳು (childrens) ಶಾಲೆ ಆವರಣಕ್ಕೆ ಪ್ರವೇಶಿಸುತ್ತಿದ್ದಂತೆ ಶಿಕ್ಷಕರು ಪುಷ್ಪವೃಷ್ಟಿಗೈದರು.
ಕೆಲವೆಡೆ ಮಕ್ಕಳಿಗೆ ಬಲೂನ್ ನೀಡಿ, ಸಿಹಿ ವಿತರಿಸಿ ಸ್ವಾಗತಿಸಲಾಯಿತು. ಸಮವಸ್ತ್ರ, ಪಠ್ಯಪುಸ್ತಕ ವಿತರಿಸಲಾಯಿತು. ದಾಖಲಾತಿ ಪ್ರಕ್ರಿಯೆಗೂ ಚಾಲನೆ ನೀಡಲಾಯಿತು. ಮೊದಲ ದಿನವೇ ಮಕ್ಕಳು ಹೊಸ ಹುರುಪಿನೊಂದಿಗೆ ಶಾಲೆಗಳತ್ತ ಹೆಜ್ಜೆ ಹಾಕಿದರು. ಶಿವಮೊಗ್ಗದ ದುರ್ಗಿಗುಡಿ ಸರ್ಕಾರಿ ಶಾಲೆಗೆ ಮಕ್ಕಳು ಆಗಮಿಸುತ್ತಿದ್ದಂತೆ ಪ್ರವೇಶ ದ್ವಾರದಲ್ಲಿ ಶಿಕ್ಷಕರು ಮತ್ತು ಸಿಬ್ಬಂದಿ ಮಕ್ಕಳಿಗೆ ಆರತಿ ಎತ್ತಿ ಬರಮಾಡಿಕೊಂಡರು.
ಶಾಲೆಯ ಆವರಣ, ಕೊಠಡಿಗಳು, ಬಿಸಿಯೂಟದ ತಯಾರಿಕೆ ಕೊಠಡಿಗಳನ್ನು ಮೂರು ದಿನದ ಮುಂಚೆಯೇ ಸ್ವಚ್ಛಗೊಳಿಸಲಾಗಿತ್ತು. ಶಾಲೆಗಳ ಆರಂಭಕ್ಕೂ ಮೊದಲೇ ಮಕ್ಕಳಿಗೆ ಸಮವಸ್ತ್ರ ಮತ್ತು ಪಠ್ಯ ಪುಸ್ತಕಗಳು ರವಾನೆಯಾಗಿದ್ದು, ಶಾಲಾ ಆರಂಭೋತ್ಸವನ್ನು ಸೌಲಭ್ಯ ವಿತರಣೆ ಮೂಲಕ ಅದ್ದೂರಿಯಾಗಿ ಆಚರಿಸಲಾಯಿತು.
ಟಿಲ್ಲರ್‌ನಲ್ಲಿ ಮೆರವಣಿಗೆ
ಶಿವಮೊಗ್ಗ ತಾಲೂಕಿನ ಗಡಿ ಭಾಗದಲ್ಲಿರುವ ಎನ್.ಆರ್.ಪುರ ರಸ್ತೆಯ ಲಿಂಗಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆರಂಭೋತ್ಸವದಲ್ಲಿ ಬಿಇಒ ರಮೇಶ್ ನಾಯ್ಕ ಭಾಗವಹಿಸಿದ್ದರು. ಹೂವು ಬೆಲೂನ್‌ಗಳಿಂದ ಅಲಂಕೃತವಾದ ಟಿಲ್ಲರ್‌ನಲ್ಲಿ ಮಕ್ಕಳನ್ನು ಗ್ರಾಮದ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ಶಾಲಾ ಆವರಣಕ್ಕೆ ಕರೆತರಲಾಯಿತು. ಶಿಕ್ಷಕರು, ಸಾರ್ವಜನಿಕರು ಹಾಗೂ ಪಾಲಕರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಮಕ್ಕಳು ಶಾಲಾ ಆವರಣಕ್ಕೆ ಆಗಮಿಸುತ್ತಿದ್ದಂತೆ ಸ್ವತಃ ಬಿಇಒ ಮುಂದೆ ನಿಂತು ಮಕ್ಕಳಿಗೆ ಪುಷ್ಪವೃಷ್ಟಿ ಮಾಡಿದರು. ಬಳಿಕ ಸಭಾ ಕಾರ್ಯಕ್ರಮ ನಡೆಸಿ ಮಕ್ಕಳಿಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಿಸಲಾಯಿತು.
ಮಕ್ಕಳಿಗೆ ಸಿಹಿಯೂಟ
ಶಾಲಾ ಆರಂಭೋತ್ಸವದ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಸರ್ಕಾರಿ ಶಾಲೆಗಳಲ್ಲಿನ ಮಕ್ಕಳಿಗೆ ಬಿಸಿಯೂಟದೊಂದಿಗೆ ಸಿಹಿಯ ವ್ಯವಸ್ಥೆ ಮಾಡಲಾಗಿತ್ತು. ಇದಕ್ಕೆ ಎಸ್‌ಡಿಎಂಸಿ, ಶಿಕ್ಷಕರು, ಪಾಲಕರು, ಸಾರ್ವಜನಿಕರು ಕೈಜೋಡಿಸಿದ್ದರು. ಶಾಲೆಯ ಮೊದಲ ದಿನ ವಿದ್ಯಾರ್ಥಿಗಳಿಗೆ ಅವಿಸ್ಮರಣೀಯ ಆಗಿರುವಂತೆ ನೋಡಿಕೊಳ್ಳಲಾಗಿತ್ತು. ಶಾಲೆಯ ವಾತಾವರಣ ಅಹ್ಲಾದಕರವಾಗಿತ್ತು.