ಗೌರಿ ಹುಣ್ಣಿಮೆ ನಿಮಿತ್ತ ಸೊರಬ ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತರು.
ಸೊರಬ: ಗೌರಿ ಹುಣ್ಣಿಮೆ ನಿಮಿತ್ತ ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಸ್ಥಾನಕ್ಕೆ ನೂರಾರು ಭಕ್ತರು ಆಗಮಿಸಿ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.
ಭಕ್ತರು ಶಕ್ತಿದೇವತೆ ಶ್ರೀ ರೇಣುಕಾ ದೇವಿ ದರ್ಶನ ಪಡೆದು ಉಧೋ ಉಧೋ ಎಂದು ಜೈಕಾರ ಹಾಕಿ ಭಕ್ತಿ ಸಮರ್ಪಿಸಿದರು. ದೇವಸ್ಥಾನದ ಆವರಣದಲ್ಲಿರುವ ಪರಿವಾರ ದೇವರಾದ ಕಾಲಭೈರವ, ನಾಗದೇವತೆ, ಮಾತಂಗಿ, ಪರಶುರಾಮ, ತ್ರಿಶೂಲದ ಭೈರಪ್ಪ ದೇವರಿಗೆ ಮತ್ತು ತೊಟ್ಟಿಲು ಬಾವಿಗೆ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.
ಭಕ್ತರು ವಿವಿಧ ಧಾರ್ಮಿಕ ಆಚರಣೆಗಳನ್ನು ನಡೆಸಿದರು. ಹೋಳಿಗೆ, ರೊಟ್ಟಿ, ಬುತ್ತಿ ತಯಾರಿಸಿಕೊಂಡು ಬಂದು ದೇವಿ ಹೆಸರಿನಲ್ಲಿ ನೈವೇದ್ಯ ಅರ್ಪಿಸಿದರು. ಬ್ಯಾಡಗಿ, ರಾಣೆಬೆನ್ನೂರು, ಹರಿಹರ, ಶಿಕಾರಿಪುರ, ಹಾನಗಲ್, ವಿಜಯಪುರ, ಚಿತ್ರದುರ್ಗ, ಶಿವಮೊಗ್ಗ, ಬೆಳಗಾವಿ, ಹಾವೇರಿ ಸೇರಿ ಉತ್ತರ ಕರ್ನಾಟಕ ಭಾಗದಿಂದ ಭಕ್ತರು ಆಗಮಿಸಿದ್ದರು.
ಪಲ್ಲಕ್ಕಿ ಉತ್ಸವ: ಗೌರಿ ಹುಣ್ಣಿಮೆ ನಿಮಿತ್ತ ಶ್ರೀ ರೇಣುಕಾಂಬ ದೇವಿ ಪಲ್ಲಕ್ಕಿ ಉತ್ಸವವು ದೇವಸ್ಥಾನದಿಂದ ವಾದ್ಯಮೇಳಗಳೊಂದಿಗೆ ಆರಂಭವಾಗಿ ಸಮೀಪದ ಹೊಳೆ ಜೋಳದಗುಡ್ಡೆ ವರದಾ ನದಿ ತೀರದ ಶ್ರೀ ಗೋಮಂತೇಶ್ವರ ದೇವಸ್ಥಾನಕ್ಕೆ ತೆರಳಿತು. ನಂತರ ಜೋಳದ ಗುಡ್ಡೆ ಮಾರ್ಗವಾಗಿ ಚಂದ್ರಗುತ್ತಿ ದೇವಸ್ಥಾನದ ನಾಲ್ಕು ಕಾಲು ಮಂಟಪದವರೆಗೆ ಪಲ್ಲಕ್ಕಿ ಉತ್ಸವ ಸಂಭ್ರಮದಿಂದ ಜರುಗಿತು. ಭಕ್ತರು ಹಣ್ಣು ಕಾಯಿ ಸೇವೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು.