ಶಿವಮೊಗ್ಗ ಕೋಟೆ ಮಾರಿಕಾಂಬ ಜಾತ್ರೆಗೆ ಮಂಗಳವಾರ ಸಾರು (ಅಂಕೆ) ಹಾಕುವ ಮೂಲಕ ಅಧಿಕೃತ ಚಾಲನೆ ನೀಡಲಾಯಿತು. ಎಸ್.ಕೆ.ಮರಿಯಪ್ಪ, ಎನ್.ಮಂಜುನಾಥ್, ಎನ್.ಉಮಾಪತಿ, ಎಸ್. ಹನುಮಂತಪ್ಪ, ಡಿ.ಎಂ.ರಾಮಯ್ಯ ಇತರರಿದ್ದರು.
- 24ರಿಂದ 28ರವರೆಗೆ ಉತ್ಸವ
- ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ
ಶಿವಮೊಗ್ಗ: ನಗರದ ಇತಿಹಾಸ (histtorical) ಹಾಗೂ ಪುರಾಣ ಪ್ರಸಿದ್ಧ (famous) ಕೋಟೆ ಮಾರಿಕಾಂಬ (marikamba) ಜಾತ್ರೆ ಫೆ.24ರಿಂದ 28ರವರೆಗೆ ನಡೆಯಲಿದ್ದು, ಮಂಗಳವಾರ ಸಾರು (ಅಂಕೆ) ಹಾಕುವ ಮೂಲಕ ಮಾರಿಕಾಂಬ ಸೇವಾ ಸಮಿತಿ ಪದಾಧಿಕಾರಿಗಳು ಜಾತ್ರೆಗೆ ಅಧಿಕೃತ ಚಾಲನೆ ನೀಡಿದರು.
ಇದಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾರಿಕಾಂಬ ಸೇವಾ ಸಮಿತಿ ಅಧ್ಯಕ್ಷ ಎಸ್.ಕೆ.ಮರಿಯಪ್ಪ ಜಾತ್ರೆ ಸಿದ್ಧತೆಗಳ ಬಗ್ಗೆ ವಿವರಿಸಿದರು. ಇಡೀ ನಗರವನ್ನು ವಿದ್ಯುತ್ ದೀಪ, ತಳಿರು ತೋರಣಗಳಿಂದ ಅಲಂಕರಿಸಲಾಗುವುದು. ವೀರಭದ್ರೇಶ್ವರ ಟಾಕೀಸ್ ರಸ್ತೆ, ಕುವೆಂಪು ರಸ್ತೆ, ನೆಹರು ರಸ್ತೆ, ಜೈಲ್ ರಸ್ತೆ ಸೇರಿ ಅನೇಕ ಕಡೆ ವಿದ್ಯುತ್ ದೀಪಾಲಂಕಾರ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಜಾತ್ರೆ ಸಂದರ್ಭ ವಾಹನ ನಿಲುಗಡೆ ವ್ಯವಸ್ಥೆ, ಮಾರಿಕಾಂಬ ದೇವಸ್ಥಾನದಿಂದ ಗಾಂಧಿಬಜಾರ್ ರಸ್ತೆಯೂ ಸೇರಿ ಶಿವಪ್ಪನಾಯಕ ವೃತ್ತದವರೆಗೆ ಭಕ್ತರಿಗೆ ಸರದಿಯಲ್ಲಿ ನಿಲ್ಲಲು ತೊಂದರೆ ಆಗದಂತೆ ಶಾಮಿಯಾನ ಅಳವಡಿಸಲಾಗುವುದು. ಸಂಘ-ಸಂಸ್ಥೆಗಳ ನೆರವಿನಿಂದ ಕುಡಿಯುವ ನೀರು, ಪಾನಕ, ಮಜ್ಜಿಗೆ ವಿತರಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜುಗೊಳಿಸಲಾಗುತ್ತದೆ. ಶಕ್ತಿ ದೇವತೆ ಅಲಂಕಾರಕ್ಕಾಗಿ ಪರಿಣಿತರಿಗೆ ಸೂಚಿಸಲಾಗಿದೆ. ಭಕ್ತರು ದೇವಿಯನ್ನು ಕಣ್ತುಂಬಿಕೊಳ್ಳುವಂತೆ ಅಲಂಕಾರ ಮಾಡಲಾಗುವುದು. ಗಾಂಧಿ ಬಜಾರ್ ಪ್ರವೇಶ ದ್ವಾರದಲ್ಲಿ ವಿಶೇಷ ಅಲಂಕಾರವಿರಲಿದೆ ಎಂದರು.
ಫೆ.24ರ ಬೆಳಗ್ಗೆ 5ಕ್ಕೆ ಮಂಗಳವಾದ್ಯದೊಂದಿಗೆ ಬಿ.ಬಿ ರಸ್ತೆಯ ನಾಡಿಗರ ಕುಟುಂಬದವರನ್ನು ಪೂಜೆಗೆ ಆಹ್ವಾನಿಸಲಾಗುತ್ತದೆ. ಆ ಕುಟುಂಬದ ಮುತ್ತೈದೆಯರು ಮಂಗಳ ದ್ರವ್ಯಾದಿಗಳೊಂದಿಗೆ ಮಾರಿಕಾಂಬೆಗೆ ಉಡಿ ತುಂಬಿ, ಪೂಜೆ ಸಲ್ಲಿಸುತ್ತಾರೆ. ನಂತರ ದೇವಿಯನ್ನು ಗಾಂಧಿ ಬಜಾರ್‌ನಲ್ಲಿ ಪ್ರತಿಷ್ಠಾಪಿಸಿ ರಾತ್ರಿ 9ರವರೆಗೆ ಪೂಜೆ ಸಲ್ಲಿಸಲಾಗುವುದು. ಬಳಿಕ ದೇವಿಯನ್ನು ಗದ್ದುಗೆಗೆ ಕರೆತಂದು ಕೂರಿಸಲಾಗುವುದು. ಸಂಪ್ರದಾಯದಂತೆ ವಿಶ್ವಕರ್ಮ, ಉಪ್ಪಾರ, ಹರಿಜನ, ಕುರುಬ ಸಮಾಜದವರು ಪೂಜೆ ಸಲ್ಲಿಸುತ್ತಾರೆ. ಫೆ.28ರ ರಾತ್ರಿ 7ಕ್ಕೆ ದೇವಿಯ ವನಪ್ರವೇಶದ ನಿಮಿತ್ತ ಮೆರವಣಿಗೆ ಆರಂಭವಾಗಲಿದೆ ಎಂದು ತಿಳಿಸಿದರು.
ಮಾರಿಕಾಂಬ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್, ಉಪಾಧ್ಯಕ್ಷ ಎನ್.ಉಮಾಪತಿ, ಕಾರ್ಯದರ್ಶಿಗಳಾದ ಎಸ್. ಹನುಮಂತಪ್ಪ, ಡಿ.ಎಂ.ರಾಮಯ್ಯ, ಎಸ್.ಸಿ.ಲೋಕೇಶ್, ಸಹಕಾರ್ಯದರ್ಶಿಗಳಾದ ಎ.ಎಚ್.ಸುನೀಲ್, ಸೀತಾರಾಮಾ ನಾಯ್ಕ, ಟಿ.ಎಸ್.ಚಂದ್ರಶೇಖರ್, ಪೂಜಾ ಸಂಚಾಲಕರಾದ ಸತ್ಯನಾರಾಯಣ್ ಸುದ್ದಿಗೋಷ್ಠಿಯಲ್ಲಿದ್ದರು.
ದೇವಿಗೆ ಚಿನ್ನ-ಬೆಳ್ಳಿ
ಜಾತ್ರೆಗೆ ಅಗತ್ಯವಿರುವ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ದೇವಿಯ ಸ್ಥಿರ ಮೂರ್ತಿಗೆ 1.600 ಕೆಜಿ ಬಂಗಾರದ ಮುಖ ಕವಚವನ್ನು ಮಾಡಿಸಲಾಗುತ್ತಿದೆ. 16 ಕೆ.ಜಿ ಬೆಳ್ಳಿಯೊಂದಿಗೆ ದೇವಿಯ ಗರ್ಭಗುಡಿಯ ರಜತ ಬಾಗಿಲನ್ನು ನಿರ್ಮಿಸಲಾಗುತ್ತಿದೆ ಎಂದು ಕೋಟೆ ಮಾರಿಕಾಂಬ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ತಿಳಿಸಿದರು. ಆರಂಭದಿಂದ ಅಂತ್ಯದವರೆಗೆ ಪ್ರತಿದಿನ ಈ ಹಿಂದಿನ ಸಂಪ್ರದಾಯದಂತೆ ನಿಗದಿತ ಸಮುದಾಯದವರು ದೇವಿಗೆ ಪೂಜೆ ಸಲ್ಲಿಸಲಿದ್ದಾರೆ. ಆಚರಣೆಗೆ ಯಾವುದೇ ಲೋಪ ಎದುರಾಗದಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದರು.
ನಾವು ದೇಣಿಗೆ ಕೇಳಿಲ್ಲ
ಮಾರಿಕಾಂಬ ದೇವಿ ಜಾತ್ರೆಗಾಗಿ ನಾವು ಯಾರ ಬಳಿಯೂ ದೇಣಿಗೆ ಸಂಗ್ರಹಿಸಿಲ್ಲ. ಭಕ್ತರು ನೀಡಿದ ಕಾಣಿಕೆಯಿಂದ, ದೇವಾಲಯದ ಆದಾಯದಿಂದ ಜಾತ್ರೆ ನಡೆಸಲಾಗುತ್ತಿದೆ. ಜಾತ್ರೆ ಹೆಸರಿನಲ್ಲಿ ಬೇರೆಯವರು ದೇಣಿಗೆ ಸಂಗ್ರಹಿಸಿದರೆ ಅದಕ್ಕೆ ಸಮಿತಿ ಹೊಣೆಯಲ್ಲ ಎಂದು ಎಸ್.ಕೆ.ಮರಿಯಪ್ಪ ಸ್ಪಷ್ಟಪಡಿಸಿದರು. ಮುಂದಿನ ದಿನಗಳಲ್ಲಿ ಜಾತ್ರೆ ನೆಪದಲ್ಲಿ ಚಿನ್ನಿದಾಂಡು, ಕೋಳಿ ಅಂಕ ಬಿಟ್ಟು ಬೇರೆ ಬೇರೆ ಕ್ರೀಡೆಗಳು ನಗರದ ವಿವಿಧ ಬಡಾವಣೆಗಳನ್ನು ಆಯೋಜಿಸಬಹುದು. ಜಾತ್ರೆ ಹೆಸರಿನಲ್ಲಿ ನಡೆಯುವ ಇಂತಹ ಪಂದ್ಯಾವಳಿಗೂ ನಮ್ಮ ಸಮಿತಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು.