ಕಲ್ಮನೆ ಗ್ರಾಮದಲ್ಲಿ ಆಯೋಜಿಸಿದ್ದ ಕೃಷಿ ಕಾರ್ಯಾನುಭವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೃಷಿ-ತೋಟಗಾರಿಕಾ ವಿವಿ, ಪ್ರೌಢಶಾಲೆ ವಿದ್ಯಾರ್ಥಿಗಳು, ಅಧ್ಯಾಪಕರು.
ಶಿಕಾರಿಪುರ: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂತಿಮ ವರ್ಷದ ಬಿ.ಎಸ್ಸಿ (ಅನರ್ಸ್) ಕೃಷಿ ವಿದ್ಯಾರ್ಥಿಗಳು ತಮ್ಮ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ‘ಸಿರಿಧಾನ್ಯಗಳ ಮಹತ್ವ’ದ ಕುರಿತು ಗುಂಪು ಚರ್ಚೆ ಕಾರ್ಯಕ್ರಮವನ್ನು ತಾಲೂಕಿನ ಕಲ್ಮನೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದರು.
ವಿದ್ಯಾರ್ಥಿ ಸಮುದಾಯಕ್ಕೆ ಆರೋಗ್ಯಕರ ಆಹಾರ, ಸಿರಿಧಾನ್ಯಗಳ ಮಹತ್ವ, ಪೌಷ್ಟಿಕತೆ, ಆರ್ಥಿಕತೆ ಮತ್ತು ಕೃಷಿಯಲ್ಲಿನ ಮಹತ್ವವನ್ನು ತಿಳಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿಗಳು ನವಣೆ, ಸಜ್ಜೆ, ಬರಗು, ರಾಗಿ ಮುಂತಾದ ಸಿರಿಧಾನ್ಯಗಳನ್ನು ಪ್ರದರ್ಶಿಸಿದರು. ಅವುಗಳಲ್ಲಿರುವ ಪೌಷ್ಟಿಕ ಅಂಶಗಳು ಮತ್ತು ಸೇವನೆಯಿಂದ ಆಗುವ ಪ್ರಯೋಜನಗಳನ್ನು ವಿವರಿಸಿದರು.
ಸಿರಿಧಾನ್ಯಗಳ ಕೃಷಿ ವಿಧಾನ, ಕಡಿಮೆ ನೀರಿನಲ್ಲಿ ಬೆಳೆ ಬೆಳೆಯುವ ಸಾಮರ್ಥ್ಯ ಮತ್ತು ರೈತರ ಆದಾಯ ವೃದ್ಧಿಯಲ್ಲಿ ಅವುಗಳ ಪಾತ್ರ ಕುರಿತು ವಿವರಿಸಿದರು. ಸಿರಿಧಾನ್ಯಗಳು ನಮ್ಮ ಪಾರಂಪರಿಕ ಆಹಾರ ಸಂಸ್ಕೃತಿಯ ಅವಿಭಾಜ್ಯ ಅಂಗ. ಅವುಗಳ ಬಳಕೆಯಿಂದ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಎಂದು ಮನದಟ್ಟು ಮಾಡಿದರು.
ಪ್ರೌಢಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡು ಕೃಷಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಹಲವು ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳಿ ಹೊಸ ಮಾಹಿತಿ ತಿಳಿದುಕೊಂಡರು.