ಲೋಕಸಭೆ ಕಲಾಪದಲ್ಲಿ ಬಿ.ವೈ.ರಾಘವೇಂದ್ರ ಅಡಕೆ ಬೆಳೆಗಾರರ ಸಮಸ್ಯೆ ಪ್ರಸ್ತಾಪಿಸಿದರು.
- ಸಂಸತ್ ಅಧಿವೇಶನದಲ್ಲಿ ಪ್ರಸ್ತಾಪ
- ಬೆಳೆ ವಿಮೆ ಲೋಪಕ್ಕೆ ಆಕ್ಷೇಪ
- ರೋಗ ನಿರ್ವಹಣೆಗೆ ರಾಘವೇಂದ್ರ ಒತ್ತಾಯ
ಶಿವಮೊಗ್ಗ: ಮಲೆನಾಡು ಭಾಗದ ಅಡಕೆ (adike) ಬೆಳೆಗಾರ ನೆರವಿಗೆ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕು. ವಿಶೇಷ ಪ್ಯಾಕೇಜ್ (package) ನೀಡಬೇಕೆಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ (raghavendra) ಒತ್ತಾಯಿಸಿದ್ದಾರೆ.
ಸಂಸತ್ ಅಧಿವೇಶನದ ಶೂನ್ಯ ವೇಳೆಯಲ್ಲಿ ಬೆಳೆಗಾರರ ಸಮಸ್ಯೆ ಕುರಿತು ಪ್ರಸ್ತಾಪಿಸಿದ ಅವರು, ಮಲೆನಾಡು ಪ್ರದೇಶದ ಅಡಕೆ ಬೆಳೆಗಾರರು ಹಳದಿ ಎಲೆ ಮತ್ತು ಎಲೆ ಚುಕ್ಕೆ ರೋಗಗಳಿಂದ ಬೆಳೆ ನಷ್ಟ ಅನುಭವಿಸುತ್ತಿದ್ದಾರೆ. ಅಡಕೆ ತೋಟಗಳೇ ಸರ್ವನಾಶವಾಗುತ್ತಿವೆ. ಈ ವರ್ಷ ಆರೇಳು ತಿಂಗಳು ಮಳೆಯಾಗಿದ್ದರಿಂದ ತೋಟಗಳಿಗೆ ವ್ಯಾಪಕ ಹಾನಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ನಿರಂತರ ಮಳೆಯಿಂದಾಗಿ ರೋಗ ಬಾಧೆ ಹೆಚ್ಚಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಅಡಕೆ ಉತ್ಪಾದನೆ ತೀವ್ರವಾಗಿ ಕುಸಿದಿದ್ದರಿಂದ ರೈತರ ಆರ್ಥಿಕ ಸ್ಥಿತಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಹಾಗಾಗಿ ವಿಶೇಷ ಪ್ಯಾಕೇಜ್ ನಂತಹ ತಕ್ಷಣದ ಪರಿಹಾರದ ಸಾಧ್ಯತೆ ಬಗ್ಗೆ ಪರಿಶೀಲಿಸಬೇಕು. ರೋಗ ನಿಯಂತ್ರಣ ಕ್ರಮಗಳನ್ನು ಕಂಡುಕೊಳ್ಳಬೇಕೆಂದು ಆಗ್ರಹಿಸಿದರು.
ವಿಮೆ ಯೋಜನೆಯಲ್ಲಿ ನ್ಯೂನತೆ:
ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಲ್ಲಿ ಗಂಭೀರ ನ್ಯೂನತೆಗಳಾಗಿವೆ. ಬೆಳೆ ನಷ್ಟ ಅನುಭವಿಸಿದ ಶಿವಮೊಗ್ಗ ಜಿಲ್ಲೆಯ ರೈತರಿಗೆ ಸೂಕ್ತ ಪರಿಹಾರ ಸಿಕ್ಕಿಲ್ಲ. 100ಕ್ಕೂ ಹೆಚ್ಚು ಮಳೆ ಮಾಪನ ಕೇಂದ್ರಗಳಿದ್ದು, ಶೇ.50ರಷ್ಟು ಉಪಕರಣಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ಬಿವೈಆರ್ ಗಮನಸೆಳೆದರು.
ರಾಜ್ಯ ಸರ್ಕಾರ ಘೋಷಿಸಿದ ಬ್ಯಾಕಪ್ ಹವಾಮಾನ ಕೇಂದ್ರಗಳನ್ನು ತಡವಾಗಿ ಗುರುತು ಮಾಡಲಾಗಿದೆ ಮತ್ತು ಸಂಪೂರ್ಣ, ವಿಭಿನ್ನ ಮಳೆ ಮಾದರಿ ಹೊಂದಿರುವ ಪ್ರದೇಶಗಳಲ್ಲಿ, 20 ರಿಂದ 45 ಕಿಮೀ ದೂರದಲ್ಲಿ ಬ್ಯಾಕಪ್ ಹವಾಮಾನ ಕೇಂದ್ರಗಳನ್ನು ಗುರುತು ಮಾಡಲಾಗಿದೆ. ಇದರಿಂದ ವಿಮೆಯ ಲೆಕ್ಕಾಚಾರದಲ್ಲಿ ತಾಂತ್ರಿಕ ದೋಷಗಳಾಗಿ ರೈತರಿಗೆ ಅನ್ಯಾಯವಾಗಿದೆ. ಕೇಂದ್ರ ಕೃಷಿ ಸಚಿವಾಲಯ ತುರ್ತಾಗಿ ಮಧ್ಯಪ್ರವೇಶಿಸಿ, ಹತ್ತಿರದ ಮತ್ತು ಹವಾಮಾನಕ್ಕೆ ಅನುಗುಣವಾಗಿ ನಿಖರವಾದ ಹವಾಮಾನ ಕೇಂದ್ರಗಳ ಅಂಕಿ ಅಂಶಗಳನ್ನು ಅಧರಿಸಿ ವಿಮೆ ಪರಿಹಾರದ ಬಗ್ಗೆ ಮರು ಲೆಕ್ಕಾಚಾರ ಮಾಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು.