ನೀಟ್ ಪ್ರಶ್ನೆಪತ್ರಿಕೆ ಸೋರಿಕೆಗೆ ಕೇಂದ್ರ ಸರ್ಕಾರದ ವೈಫಲ್ಯವೇ ಕಾರಣ ಎಂದು ಆರೋಪಿಸಿ ಶಿರಾಳಕೊಪ್ಪದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ರಾಘವೇಂದ್ರ ನಾಯ್ಕ, ಮಂಜಾ ನಾಯ್ಕ, ನಯಾಜ್ ಅಹ್ಮದ್, ಸದ್ದು ಜಾಫರ್, ಕರಿಬಸಪ್ಪ ಇತರರಿದ್ದರು.
ಶಿರಾಳಕೊಪ್ಪ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆಗೆ ಕೇಂದ್ರ ಸರ್ಕಾರದ ಆಡಳಿತ ವೈಫಲ್ಯವೇ ಕಾರಣ. ಪ್ರಕರಣದ ನೈತಿಕ ಪ್ರಕರಣದ ಹೊಣೆಹೊತ್ತು ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
2016ರಲ್ಲಿಯೂ ಇಂತಹ ಘಟನೆ ನಡೆದಿದ್ದರೂ ಸಂಬಂಧಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ. ಇದೀಗ ಪ್ರಶ್ನೆ ಪತ್ರಿಕೆ ಸೋರಿಕೆ ದೇಶದ ಶಿಕ್ಷಣ ವ್ಯವಸ್ಥೆಗೆ ದೊಡ್ಡ ಕಳಂಕ. ಚುನಾವಣೆ ಸಂದರ್ಭ ಬೆಲೆ ಏರಿಕೆಯನ್ನು ನಿಯಂತ್ರಿಸಿದ್ದ ಸರ್ಕಾರ, ಇದೀಗ ಪೆಟ್ರೋಲ್, ಡೀಸೆಲ್ ಸೇರಿ ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸಿ ಜನಸಾಮಾನ್ಯರ ಮೇಲೆ ಆರ್ಥಿಕ ಹೊರೆ ಹಾಕುತ್ತಿದೆ. ಸಂಸದರು ಹಾಗೂ ಶಾಸಕರು ಜನರ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿಲ್ಲ ಎಂದು ದೂರಿದರು.
ವಿದ್ಯಾರ್ಥಿಗಳು ವರ್ಷಪೂರ್ತಿ ಕಷ್ಟಪಟ್ಟು ಓದಿ ಪರೀಕ್ಷೆಗೆ ಸಿದ್ಧರಾಗುತ್ತಾರೆ. ಆದರೆ ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಮತ್ತು ಅವ್ಯವಸ್ಥೆಯಿಂದ ಪರೀಕ್ಷಾ ವ್ಯವಸ್ಥೆಯ ಮೇಲೆ ವಿದ್ಯಾರ್ಥಿಗಳು ಹಾಗೂ ಪಾಲಕರಿಗಿದ್ದ ವಿಶ್ವಾಸ ಕಡಿಮೆಯಾಗಿದೆ. ಇದು ಸಾಮಾನ್ಯ ತಪ್ಪಲ್ಲ. ವಿದ್ಯಾರ್ಥಿಗಳ ಭವಿಷ್ಯದ ಜತೆ ಆಟವಾಡುವ ಗಂಭೀರ ಪ್ರಕರಣ. ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ನೀಟ್ ಬದಲು ಸಿಇಟಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಕೆಡಿಪಿ ಸದಸ್ಯ ರಾಘವೇಂದ್ರ ನಾಯ್ಕ, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಮಂಜಾ ನಾಯ್ಕ, ಟೌನ್ ಕಾಂಗ್ರೆಸ್ ಅಧ್ಯಕ್ಷ ನಯಾಜ್ ಅಹ್ಮದ್, ಟೌನ್ ಯುವ ಕಾಂಗ್ರೆಸ್ ಅಧ್ಯಕ್ಷ ಸದ್ದು ಜಾಫರ್ ಬಳ್ಳಿಗಾವಿ, ಪ್ರಮುಖರಾದ ಕರಿಬಸಪ್ಪ, ಮಾಜಿ ಪ್ರಧಾನ ಬಾಷಾ ಸಾಬ್, ಸಾಲೂರು ಗ್ರಾಪಂ ಅಧ್ಯಕ್ಷ ಹನುಮಂತ ನಾಯ್ಕ್, ಪುರಸಭೆ ಮಾಜಿ ಸದಸ್ಯ ರಾಜಸಾಬ್, ಯುವ ಮುಖಂಡರಾದ ಸಾಜಿದ್ ಅಲಿ, ಸಮೀರ್, ಸೂಫಿಯಾನ್, ಯುವರಾಜ್ ನಾಯ್ಕ್, ಜಬೀ, ತಾಹ, ಸಫೀರ್ ಇತರರಿದ್ದರು.