ಗಣೇಶೋತ್ಸವದ ಅಂಗವಾಗಿ ಹೊಸನಗರದಲ್ಲಿ ಆಯೋಜಿಸಿದ್ದ ಶಾಂತಿಸಭೆಯಲ್ಲಿ ಎಎಸ್ಪಿ ಭಾನುಪ್ರಕಾಶ್, ಪಿಎಸ್‌ಐ ಸಂತೋಷ್ ಬಾಗೋಗಿ ಇದ್ದರು.
ಹೊಸನಗರ: ಸಾರ್ವಜನಿಕರು ಹಾಗೂ ಗಣೇಶೋತ್ಸವ ಸಮಿತಿಯವರು ಇಲಾಖೆ ಸೂಚಿಸಿರುವ ನಿಯಮಾವಳಿಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವ ಮೂಲಕ ಗಣೇಶೋತ್ಸವ ಆಚರಿಸಬೇಕು ಎಂದು ಎಎಸ್ಪಿ ಭಾನುಪ್ರಕಾಶ್ ತಿಳಿಸಿದರು.
ತಾಲೂಕು ಪಂಚಾಯಿತಿ ಆವರಣದಲ್ಲಿ ಏರ್ಪಡಿಸಿದ್ದ ಗಣೇಶೋತ್ಸವ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಗಣೇಶೋತ್ಸವದಲ್ಲಿ ಪೊಲೀಸ್ ಇಲಾಖೆಗೆ ಎಷ್ಟು ಜವಾಬ್ದಾರಿ ಇರುತ್ತದೆಯೋ ಗಣೇಶೋತ್ಸವ ಸಮಿತಿಗಳಿಗೂ ಅಷ್ಟೇ ಜವಾಬ್ದಾರಿ ಇರುತ್ತದೆ ಎಂದರು.
ಹೊಸನಗರದಲ್ಲಿ ಗಣೇಶೋತ್ಸವದ ವೇಳೆ ಎಂದಿಗೂ ಅಹಿತಕರ ಘಟನೆಗಳು ನಡೆದಿಲ್ಲ. ಮುಂದೆಯೂ ಇದೇ ರೀತಿ ಪ್ರತಿಯೊಂದು ಸಮಿತಿಗಳು ಜವಾಬ್ದಾರಿಯುತ, ಕಾನೂನುಬದ್ಧವಾಗಿ ಗಣೇಶೋತ್ಸವ ನಡೆಸಬೇಕು. ಇಲಾಖೆ ನಿಮಗೆ ಸಂಪೂರ್ಣ ಸಹಕಾರ ನೀಡಲಿದೆ ಎಂದರು.
ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಸಾರ್ವಜನಿಕರಿಗೆ ತೊಂದರೆ ಆಗದಂತೆ ಸಮಿತಿ ನಿಗಾ ವಹಿಸಬೇಕು. ವಿಸರ್ಜನೆ ಸಮಯದಲ್ಲಿ ಯಾವುದೇ ಅಹಿತಕರ ಘಟನೆ, ಗೊಂದಲಗಳು ಸೃಷ್ಟಿಯಾದಲ್ಲಿ. ಕಾರಣಕರ್ತರನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸುಪ್ರೀಂ ಕೋರ್ಟ್ ಆದೇಶದನ್ವಯ ಕರ್ಕಶ ಶಬ್ಧ ಮಾಡುವ ಡಿಜೆ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ಮಾತ್ರ ನಿಯಮಾನುಸಾರ ಧ್ವನಿವರ್ಧಕ ಬಳಸಲು ಅವಕಾಶವಿದೆ. 10 ಗಂಟೆ ನಂತರ ಧ್ವನಿವರ್ಧಕಗಳನ್ನು ಕಡ್ಡಾಯವಾಗಿ ಸ್ಥಗಿತಗೊಳಿಸಬೇಕು. ಜತೆಗೆ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾಕಾರಿ ಸಂದೇಶಗಳನ್ನು ಹಂಚಿಕೊಳ್ಳುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ತಹಸೀಲ್ದಾರ್ ಭರತ್‌ರಾಜ್, ಸಿಪಿಐ ಗೌಡಪ್ಪ ಗೌಡ, ಪಿಎಸ್‌ಐ ಸಂತೋಷ್ ಬಾಗೋಜಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಂ.ಎನ್.ಹರೀಶ್, ವಿವಿಧ ಗಣೇಶೋತ್ಸವ ಸಮಿತಿ, ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.