ಕಳೆದ ವರ್ಷ ಗಣಪತಿ ಹಬ್ಬವನ್ನು ಶಾಂತಿಯುತವಾಗಿ ಆಚರಿಸಿದ ಶೀಬಿನಕೆರೆ ಗಣಪತಿ ಸಂಘದವರನ್ನು ತೀರ್ಥಹಳ್ಳಿಯಲ್ಲಿ ಗೌರವಿಸಲಾಯಿತು. ಆರಗ ಜ್ಞಾನೇಂದ್ರ, ರಂಜಿತ್, ರತ್ನಾಕರ್ ಶೆಟ್ಟಿ, ಗೀತಾ ರಮೇಶ್ ಇತರರಿದ್ದರು.
ತೀರ್ಥಹಳ್ಳಿ: ಸ್ವಾತಂತ್ರೃ ಚಳವಳಿ ಸಂದರ್ಭ ಜನರನ್ನು ಸಂಘಟಿಸಲು ಗಣೇಶೋತ್ಸವ ಆರಂಭಿಸಲಾಗಿತ್ತು. ಆದರೆ ಇತ್ತೀಚಿಗೆ ಅದು ದೇಶಭಕ್ತಿ ಭಾವನೆ ಸೃಜಿಸುವ ವೇದಿಕೆಯಾಗಿ ಉಳಿದಿಲ್ಲ. ಕಾಟಾಚಾರಕ್ಕೆ ಆಚರಣೆ ಮಾಡುವ ಬದಲು ಧಾರ್ಮಿಕ ಭಾವನೆಯಿಂದ ಗಣೇಶೋತ್ಸವ ಆಚರಿಸಬೇಕಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಪಟ್ಟಣದ ಗೋಪಾಲ ಗೌಡ ರಂಗಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಸೌಹಾರ್ದ ಸಭೆಯಲ್ಲಿ ಮಾತನಾಡಿದ ಅವರು, ಗಣೇಶ ಹಬ್ಬದ ಆಚರಣೆಯಲ್ಲಿ ಭಕ್ತಿ ಪ್ರಧಾನ ಕಾರ್ಯಕ್ರಮಗಳಿಗೆ ಆದ್ಯತೆ ನೀಡಬೇಕು ಎಂದರು.
ಗಣಪತಿ ವಿಸರ್ಜನೆ ವೇಳೆ ಸಾಂಸ್ಕೃತಿಕ ವೈಭವ ಬಿಂಬಿಸುವ ಕಾರ್ಯಕ್ರಮಗಳು ಮಾತ್ರ ಇರಲಿ. ನಮ್ಮ ಸಂಪ್ರದಾಯಕ್ಕೆ ವಿರುದ್ಧವಾದ ಡಿಜೆ ಹಾಕಿದಾಗ ಯುವಕರಿಗೆ ಹುಚ್ಚೆದ್ದು ಕುಣಿಯುವ ಆಸಕ್ತಿ ಬರುತ್ತದೆ. ಅಂತಹ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಘರ್ಷಣೆಗೂ ಕಾರಣವಾಗಬಹುದು. ಹಾಗಾಗಿ ಗಣೇಶೋತ್ಸವ ಧಾರ್ಮಿಕವಾಗಿ ಇರಲಿ ಎಂದು ಆಶಿಸಿದರು.
ಎಎಸ್ಪಿ ಭಾನುಪ್ರಕಾಶ್ ಮಾತನಾಡಿ, ಪೊಲೀಸ್ ಇಲಾಖೆಗೆ ಸಾರ್ವಜನಿಕರು ಸಹಕರಿಸಬೇಕು. ರಾತ್ರಿ 10.30ರವರೆಗೆ ಮಾತ್ರ ಕಾರ್ಯಕ್ರಮ ನಡೆಸಲು ಅವಕಾಶ ಇರುತ್ತದೆ. ಅರ್ಧ ತಾಸು ತಡವಾದರೆ ಪೊಲೀಸರು ಬಿಡುತ್ತಾರೆ. ಆದರೆ ಅಂತಹ ಸಂದರ್ಭದಲ್ಲಿ ಪ್ರಶ್ನೆ ಮಾಡಲು ಬರುವಂತಹ ಪೊಲೀಸರ ವಿರುದ್ಧ ಗಲಾಟೆ ಮಾಡಲು ಹೋಗಬೇಡಿ. ಪೂಜೆ ಸಂದರ್ಭ ಅಥವಾ ಕಾರ್ಯಕ್ರಮ ತಡೆಯುವ ಮನಸ್ಥಿತಿ ಪೊಲೀಸರಿಗೆ ಇರುವುದಿಲ್ಲ. ಶಾಂತಿ ಸುವ್ಯವಸ್ಥೆ ಕಾಪಾಡುವ ಜತೆಗೆ ಹಬ್ಬವನ್ನು ಆಚರಿಸಿ ಎಂದರು.
ತಹಸೀಲ್ದಾರ್ ರಂಜಿತ್ ಮಾತನಾಡಿ, ಈಗಾಗಲೇ ಎಲ್ಲ ಇಲಾಖೆಯಿಂದ ಅನುಮತಿ ಪಡೆಯಲು ಸಹಕಾರಿಯಾಗುವಂತೆ ತಾಲೂಕು ಪಂಚಾಯಿತಿ ಕಟ್ಟಡದಲ್ಲಿ ಒಂದೇ ಕಡೆ ವ್ಯವಸ್ಥೆ ಮಾಡಲಾಗಿದೆ. ಕಡೆಯ ದಿನ ಬಂದು ಅನುಮತಿ ಪಡೆಯುವುದಕ್ಕಿಂತ ಈಗಲೇ ಗಣಪತಿ ಸಮಿತಿ ಹೆಸರನ್ನು ನೋಂದಾಯಿಸಿ ಅನುಮತಿ ಪಡೆಯಿರಿ. ಅನುಮತಿ ಪಡೆಯಲು ಹೇಳುತ್ತಿರುವುದು ಬೇರೆ ಕಾರಣಕ್ಕೆ ಅಲ್ಲ. ಗಣಪತಿ ವಿಸರ್ಜನೆಯ ದಿನ, ಸಮಯ ಅಧಿಕಾರಿಗಳಿಗೆ ತಿಳಿಯಬೇಕು ಎನ್ನುವ ಸಲುವಾಗಿ ಈ ವ್ಯವಸ್ಥೆ ಮಾಡಲಾಗಿದೆ ಎಂದರು.
ಕಳೆದ ವರ್ಷ ಗಣಪತಿ ಹಬ್ಬದಲ್ಲಿ ಡಿಜೆ ಬಳಸದೆ ಶಾಂತಿಯುತ ಮತ್ತು ಸೌಹಾರ್ದದಿಂದ ಹಬ್ಬವನ್ನು ಆಚರಿಸಿದ ಪಟ್ಟಣದ ಸೀಬಿನಕೆರೆ ಮತ್ತು ಛತ್ರಕೇರಿ ಗಣಪತಿ ಸಮಿತಿ ಮುಖ್ಯಸ್ಥರನ್ನು ಪೊಲೀಸ್ ಇಲಾಖೆಯಿಂದ ಗೌರವಿಸಲಾಯಿತು.
ಪಪಂ ಅಧ್ಯಕ್ಷರಾದ ರತ್ನಾಕರ್ ಶೆಟ್ಟಿ, ಉಪಾಧ್ಯಕ್ಷರಾದ ಗೀತಾ ರಮೇಶ್, ನಾಗರಾಜ್, ಸಬ್ ಇನ್ಸ್‌ಪೆಕ್ಟರ್ ಸುಷ್ಮಾ, ಆಗುಂಬೆ ಸಬ್ ಇನ್ಸ್‌ಪೆಕ್ಟರ್ ಶಿವನ ಗೌಡ ಇತರರಿದ್ದರು.