ಶಿಕಾರಿಪುರ ತಾಲೂಕು ಆಸ್ಪತ್ರೆಯಲ್ಲಿ ಸಿಬಿ ನ್ಯಾಟ್ ಯಂತ್ರ ಉದ್ಘಾಟನೆ ಕಾರ್ಯಕ್ರಮದಲ್ಲಿ ವಿವಿಧ ಬೇಡಿಕೆ ಈಡೇರಿಸುವಂತೆ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ವೈದ್ಯರು ಮನವಿ ಸಲ್ಲಿಸಿದರು. ಡಾ. ಅರುಣ್‌ಕುಮಾರ್, ಡಾ. ಬಸವ ಕುಲಾಲ್, ಡಾ. ಅಶೋಕ್ ಇತರರಿದ್ದರು.
ಶಿಕಾರಿಪುರ: ವೈದ್ಯರೆಂದರೆ ದೇವರ ಸಮಾನ. ಆತಂಕದಿಂದ ಬಂದ ರೋಗಿಗಳಿಗೆ ಮಾತೃವಾತ್ಸಲ್ಯ ನೀಡಿ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಸರ್ಕಾರಿ ಆಸ್ಪತ್ರೆಯಲ್ಲಿ ಆಧುನಿಕ ಆರೋಗ್ಯ ಸೇವೆಯನ್ನು ಮತ್ತಷ್ಟು ಬಲಪಡಿಸುವ ದಿಸೆಯಲ್ಲಿ ಸಿಬಿ ನ್ಯಾಟ್ ಯಂತ್ರವನ್ನು ಉದ್ಘಾಟಿಸಿ ಮಾತನಾಡಿ, ಯಂತ್ರವು ಕ್ಷಯರೋಗ ಸೇರಿ ಪ್ರಮುಖ ಸೋಂಕುಗಳನ್ನು ಅತಿ ವೇಗವಾಗಿ ಮತ್ತು ಅಚ್ಚುಕಟ್ಟಾಗಿ ಪತ್ತೆಹಚ್ಚುವ ಸಾಮರ್ಥ್ಯ ಹೊಂದಿದೆ ಎಂದರು.
ಸಂಯೋಜಿತ ತಂತ್ರಜ್ಞಾನದಿಂದ ಕಡಿಮೆ ಸಮಯದಲ್ಲಿ ರೋಗನಿರ್ಣಯ ಮಾಡಬಹುದು. ಗ್ರಾಮೀಣ ಪ್ರದೇಶಗಳ ಜನರಿಗೆ ತ್ವರಿತ ಪರೀಕ್ಷಾ ಸೌಲಭ್ಯ ದೊರೆಯಲು ಇದು ಮಹತ್ವದ ಹೆಜ್ಜೆ. ರೋಗಿಗಳಿಗೆ ಸಮಯೋಚಿತ ಚಿಕಿತ್ಸೆ ನೀಡುವಿಕೆ ಇನ್ನಷ್ಟು ಪರಿಣಾಮಕಾರಿಯಾಗಲಿದೆ. ಶಿಕಾರಿಪುರ ತಾಲೂಕಿನ ಜನತೆಗೆ ಉತ್ತಮ, ವಿಶ್ವಾಸಾರ್ಹ ಮತ್ತು ವೇಗದ ಸೇವೆ ತಲುಪಿಸಲು ಈ ಹೊಸ ಯಂತ್ರ ಸಹಕಾರಿಯಾಗಿದೆ ಎಂದು ತಿಳಿಸಿದರು.
ಶಿಕಾರಿಪುರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಬೇರೆ ಬೇರೆ ತಾಲೂಕುಗಳಿಂದ ರೋಗಿಗಳು ಬರುತ್ತಾರೆ. ಇಲ್ಲಿ ತಜ್ಞ ವೈದ್ಯರು ಇರುವದರಿಂದ ಸೂಕ್ತ ಚಿಕಿತ್ಸೆ ದೊರೆಯುತ್ತದೆ. ಹೊಸದಾಗಿ ತಾಯಿ-ಮಕ್ಕಳ ಆಸ್ಪತ್ರೆ ನಿರ್ಮಾಣವಾದರೂ ಈ ಆಸ್ಪತ್ರೆಗೆ ಬರುವ ಹೊರರೋಗಿಗಳ ಸಂಖ್ಯೆ ಕಡಿಮೆಯಾಗಿಲ್ಲ. ಜನರ ವಿಶ್ವಾಸ ವೈದ್ಯರು ನೀಡುವ ಚಿಕಿತ್ಸೆಯನ್ನು ಅವಲಂಬಿಸಿರುತ್ತದೆ ಎಂದರು.
ಪುರಸಭೆ ಅಧ್ಯಕ್ಷೆ ಸುನಂದಾ ಮಂಜುನಾಥ್, ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಆಡಳಿತ ವೈದ್ಯಾಧಿಕಾರಿ ಡಾ. ಅರುಣ್‌ಕುಮಾರ್, ಡಾ. ಬಸವ ಕುಲಾಲ್, ಡಾ. ಅಶೋಕ್, ಯಶವಂತ್, ಆರೋಗ್ಯರಕ್ಷಾ ಸಮಿತಿಯ ಪದಾಧಿಕಾರಿಗಳು ಇದ್ದರು.