ಅಪಘಾತದಲ್ಲಿ ನುಜ್ಜುಗುಜ್ಜಾದ ಕ್ಯಾಂಟರ್-ಕಾರು. 
ಶಿವಮೊಗ್ಗ

ಕಾರು-ಕ್ಯಾಂಟರ್ ಅಪಘಾತ, ಚಾಲಕ ಸೇರಿ ಇಬ್ಬರು ಸಾವು Car-Canter collision

ಶಿಕಾರಿಪುರ ತಾಲೂಕಿನ ತರಲಘಟ್ಟ ಕ್ಯಾಂಪ್ ಬಳಿ ರಾಜ್ಯ ಹೆದ್ದಾರಿಯಲ್ಲಿ ಕಾರು ಮತ್ತು ಕ್ಯಾಂಟರ್ ನಡುವೆ ಅಪಘಾತದಲ್ಲಿ ಚಾಲಕ ಸೇರಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ.

ಶಿವಮೊಗ್ಗ: ಶಿಕಾರಿಪುರ ತಾಲೂಕಿನ ತರಲಘಟ್ಟ ಕ್ಯಾಂಪ್ ಬಳಿ ರಾಜ್ಯ ಹೆದ್ದಾರಿಯಲ್ಲಿ ಕಾರು ಮತ್ತು ಕ್ಯಾಂಟರ್ ನಡುವೆ ಅಪಘಾತದಲ್ಲಿ ಚಾಲಕ ಸೇರಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ.

ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಸಮೀಪದ ಮುತ್ತಿಗೆ ಗ್ರಾಮದ ನಿವಾಸಿಗಳಾದ ಕಾರು ಚಾಲಕ ಸಿದ್ದು (34) ಹಾಗೂ ಲಲಿತಮ್ಮ (65) ಮೃತರು. ಅದೇ ಗ್ರಾಮದ ಉಜ್ಜಪ್ಪ (74), ಹನುಮಂತಪ್ಪ (65) ಹಾಗೂ ಜಯಮ್ಮ (55) ಎಂಬುವರು ಗಾಯಗೊಂಡಿದ್ದಾರೆ. ಈ ಪೈಕಿ ಜಯಮ್ಮ ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಮುತ್ತಿಗೆ ಗ್ರಾಮದ ಐವರು ಶಿವಮೊಗ್ಗದ ಆಸ್ಪತ್ರೆಗೆ ಕಾರಿನಲ್ಲಿ ಬಂದು ವಾಪಸ್ ಶಿಕಾರಿಪುರಕ್ಕೆ ತೆರಳುತ್ತಿದ್ದರು. ಈ ವೇಳೆ ಅಡಿಕೆ ತುಂಬಿಕೊಂಡು ಶಿವಮೊಗ್ಗದತ್ತ ಬರುತ್ತಿದ್ದ ಕ್ಯಾಂಟರ್ ಹಾಗೂ ಕಾರಿನ ಮಧ್ಯೆ ತರಲಘಟ್ಟ ಕ್ಯಾಂಪ್ ಸಮೀಪ ಮುಖಾಮುಖಿ ಢಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಇಬ್ಬರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಶಿಕಾರಿಪುರ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಶಿಕಾರಿಪುರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.