ತೀರ್ಥಹಳ್ಳಿ ಕಾನೂನು ನೆರವು ಸಮಿತಿಯಿಂದ ಗುಲಾಬಿ ಆಂದೋಲನ ನಡೆಸಲಾಯಿತು. ಗೀತಾಮಣಿ, ಎಂ.ಎನ್.ರಮೇಶ್, ಡಾ. ಅನಿಕೇತನ್ ಇತರರಿದ್ದರು. 
ಶಿವಮೊಗ್ಗ

ತಂಬಾಕು ಸೇವನೆಯಿಂದ ಕ್ಯಾನ್ಸರ್ ಕಾಯಿಲೆ

ತೀರ್ಥಹಳ್ಳಿ: ತಂಬಾಕು ಸೇವನೆಯಿಂದ ಮಾರಣಾಂತಿಕವಾದ ಬಾಯಿ, ಶ್ವಾಸಕೋಶದ ಕ್ಯಾನ್ಸರ್ ಕಾಯಿಲೆ ಬರುವ ಸಾಧ್ಯತೆ ಇದೆ. ಹೃದಯಾಘಾತ ಮತ್ತು ಉಸಿರಾಟದ ತೊಂದರೆಯೂ ಬರಲಿದೆ ಎಂದು ಕಾನೂನು ನೆರವು ತಾಲೂಕು ಸಮಿತಿ ಅಧ್ಯಕ್ಷೆ ಗೀತಾಮಣಿ ಹೇಳಿದರು.
ತಾಲೂಕು ಕಾನೂನು ನೆರವು ಸಮಿತಿಯಿಂದ ಪಟ್ಟಣದ ಸರ್ಕಾರಿ ಜಯಚಾಮರಾಜೇಂದ್ರ ಆಸ್ಪತ್ರೆ ಆವರಣದಲ್ಲಿ ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಮತ್ತು ಗುಲಾಬಿ ಆಂದೋಲನದ ನೇತೃತ್ವ ವಹಿಸಿ ಮಾತನಾಡಿ, ತಂಬಾಕಿನಿಂದ ಬರುವ ಕಾಯಿಲೆಗಳಿಂದ ಪ್ರತಿ ವರ್ಷ ವಿಶ್ವಾದ್ಯಂತ 60 ಲಕ್ಷಕ್ಕೂ ಹೆಚ್ಚು ಜನರು ಸಾವಿಗೀಡಾಗುತ್ತಿದ್ದಾರೆ. ಸಾರ್ವಜನಿಕರು ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳನ್ನು ತಿಳಿದುಕೊಳ್ಳಬೇಕು ಎಂದು ತಿಳಿಸಿದರು.
ತಂಬಾಕು ಉತ್ಪನ್ನಗಳ ಸೇವನೆಯಿಂದ ಮಹಿಳೆಯರಲ್ಲಿ ಗರ್ಭಪಾತ ಹಾಗೂ ಬಂಜೆತನ ಸಮಸ್ಯೆಗಳು ಕಂಡುಬರುತ್ತಿವೆ. ಪುರುಷರಲ್ಲಿ ನಪುಂಸಕತ್ವ ಉಂಟಾಗುವ ಸಾಧ್ಯತೆ ಇದೆ. ತಂಬಾಕು ನಿಯಂತ್ರಣ ಕಾಯ್ದೆ -2003ರ ಅನ್ವಯ ಶಿಕ್ಷಣ ಸಂಸ್ಥೆಗಳ ಸಮೀಪದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಶಿಕ್ಷಾರ್ಹ ಅಪರಾಧ. ಅಂಗಡಿಗಳಲ್ಲಿ ಪ್ರದರ್ಶನವೂ ನಿಷಿದ್ಧ. ಅಂಗಡಿ ಮಾಲೀಕರು ಆರೋಗ್ಯ ಎಚ್ಚರಿಕೆ ನಾಮಫಲಕವನ್ನು ಮುಂಭಾಗದಲ್ಲಿ ಹಾಕುವುದು ಕಡ್ಡಾಯ ಎಂದು ತಿಳಿಸಿದರು.
ವಕೀಲರ ಸಂಘದ ತಾಲೂಕು ಅಧ್ಯಕ್ಷ ಎಂ.ಎನ್.ರಮೇಶ್, ತಾಲೂಕು ವೈದ್ಯಾಧಿಕಾರಿ ಡಾ. ಅನಿಕೇತನ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜಯಲಕ್ಷ್ಮೀ, ಜೆಸಿ ಆಸ್ಪತ್ರೆ ಸಿಬ್ಬಂದಿ ಇದ್ದರು.