ಶಿಕಾರಿಪುರದ ಕಿರಣ್ ಟಾಕೀಸ್ ವೃತ್ತದಲ್ಲಿ ಸಿಸಿ ಕ್ಯಾಮರಾ ಅಳವಡಿಸಿರುವುದು. 
ಶಿವಮೊಗ್ಗ

ಸಂಚಾರ ವ್ಯವಸ್ಥೆ ಸುಧಾರಣೆಗೆ ಕ್ಯಾಮರಾ ಅಳವಡಿಕೆ | Traffic

ಶಿವಕುಮಾರ ಎಸ್.ಪಿ.
ಶಿಕಾರಿಪುರ: ಪಟ್ಟಣದಲ್ಲಿ ಜನಸಂಖ್ಯೆ ಹೆಚ್ಚಾದಂತೆ ವಾಹನಗಳ ಸಂಚಾರ ದಟ್ಟಣೆಯೂ ಜಾಸ್ತಿಯಾಗುತ್ತಿದೆ. ಇದರಿಂದ ಸಂಚಾರ ನಿಯಮ ಉಲ್ಲಂಘನೆ, ಅಪಘಾತಗಳಾಗುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಮುಂದಾಗಿದೆ.
ಜಯಶ್ರೀ ಟಾಕೀಸ್, ಕನಕ ಪಾರ್ಕ್, ಮಂಡಿಪೇಟೆ ರಸ್ತೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಖಾಸಗಿ ಬಸ್ ನಿಲ್ದಾಣದವರೆಗಿನ ರಸ್ತೆ, ಪುನೀತ್ ರಾಜ್‌ಕುಮಾರ್ ರಸ್ತೆಗಳಲ್ಲಿ ಯಾವಾಗಲೂ ವಾಹನಗಳ ಓಡಾಟ ಹೆಚ್ಚಾಗಿರುತ್ತದೆ. ಹಾಗಾಗಿ ಸಂಚಾರ ವ್ಯವಸ್ಥೆಯಲ್ಲಿ ಸುಧಾರಣೆ ತರಲು, ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಸಂಚಾರ ನಿಯಮಗಳ ಉಲ್ಲಂಘನೆ ತಡೆಗಟ್ಟಲು ಐಟಿಎಂಎಸ್ ವ್ಯವಸ್ಥೆ ಜಾರಿಗೊಳಿಸಿದೆ. ಇದಕ್ಕೆ ಪೂರಕವಾಗಿ 36 ಕಡೆ ಸಿಸಿ ಕ್ಯಾಮರಾ ಅಳವಡಿಸಿದೆ.
ಐಟಿಎಂಎಸ್ ಆರಂಭವಾಗಿ ಕೇವಲ 15 ದಿನಗಳಲ್ಲಿ 300 ಕೇಸುಗಳು ದಾಖಲಾಗಿವೆ. 1.50 ಲಕ್ಷ ರೂ. ದಂಡ ವಿಧಿಸಲಾಗಿದೆ. ವರ್ಷದ ಆರಂಭದಿಂದ ಈವರೆಗೆ ಡ್ರಂಕ್ ಆ್ಯಂಡ್ ಡ್ರೈವ್ 30 ಕೇಸುಗಳು ದಾಖಲಾಗಿವೆ. ಇದರ ಪರಿಣಾಮವಾಗಿ ವಾಹನಗಳ ವೇಗಕ್ಕೆ ಕಡಿವಾಣ ಬಿದ್ದಿದೆ. ಸವಾರರ ತಲೆ ಮೇಲೆ ಹೆಲ್ಮೆಟ್‌ಗಳು ಕಾಣಿಸುತ್ತಿವೆ.
ಪಟ್ಟಣದ ಮುಖ್ಯವಾದ ಮತ್ತು ಅತಿ ಹೆಚ್ಚು ಸಂಚಾರ ದಟ್ಟಣೆ ಇರುವ 36 ಸ್ಥಳಗಳಲ್ಲಿ ಸ್ವಯಂಚಾಲಿತ ಸಿಸಿ ಕ್ಯಾಮರಾಗಳನ್ನು ಅಳವಡಿಸಿದೆ. ಇವುಗಳಿಂದ ವಾಹನ ಸವಾರರು, ಚಾಲಕರು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. 
ಮೊಬೈಲ್ ಬರಲಿದೆ ದಂಡದ ಮಾಹಿತಿ: ಹೆಲ್ಮೆಟ್ ರಹಿತ ಚಾಲನೆ, ಟ್ರಿಪಲ್ ರೈಡಿಂಗ್, ಒನ್ ವೇನಲ್ಲಿ ದ್ವಿಮುಖ ಸಂಚಾರ, ಸಿಗ್ನಲ್ ಜಂಪ್, ನೋ ಪಾರ್ಕಿಂಗ್ ಸೇರಿದಂತೆ 40 ವಿಭಾಗಗಳಲ್ಲಿ ದಂಡ ವಿಧಿಸಲಾಗುತ್ತದೆ. ಸವಾರರ ತಪ್ಪುಗಳು ಸಾಕ್ಷ್ಯ ಸಮೇತ ದಾಖಲಾಗುತ್ತದೆ. ವಾಹನಗಳ ನಂಬರ್ ಪ್ಲೇಟ್ ಆಧರಿಸಿ ನೋಟಿಸ್ ಜಾರಿಯಾಗುತ್ತದೆ. ಈ ಕ್ಯಾಮರಾಗಳು ಪೊಲೀಸ್ ನಿಯಂತ್ರಣ ಕೊಠಡಿಯ ಸರ್ವರ್‌ಗೆ ಸಂಪರ್ಕ ಹೊಂದಿವೆ. ನಿಯಮ ಉಲ್ಲಂಘನೆಯಾದ ತಕ್ಷಣ ವಾಹನದ ಮಾಲೀಕರ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಮೂಲಕ ದಂಡದ ಮಾಹಿತಿ ರವಾನೆಯಾಗುತ್ತದೆ ಅಥವಾ ನೋಂದಾಯಿತ ವಿಳಾಸಕ್ಕೆ ನೋಟಿಸ್ ತಲುಪಲಿದೆ. ಆಯಕಟ್ಟಿನ ಸ್ಥಳಗಳಲ್ಲಿ ಅಳವಡಿಸಿರುವ ಸ್ಮಾರ್ಟ್ ಕ್ಯಾಮರಾಗಳು ಹದ್ದಿನ ಕಣ್ಣಿಡಲಿವೆ.