ಶಿವಮೊಗ್ಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸುದ್ದಿಗಾರರೊಂದಿಗೆ ಮಾತನಾಡಿದರು.
- ರಾಜ್ಯದಲ್ಲಿ ನಿಲ್ಲುತ್ತಿಲ್ಲ ಕಬ್ಬು ಬೆಳೆಗಾರರ ಹೋರಾಟದ ಕಿಚ್ಚು
- ಬೆಳೆಗಾರರ ಹೋರಾಟವನ್ನು ಸಿಎಂ ಗಂಭೀರವಾಗಿ ಪರಿಗಣಿಸಬೇಕು
- ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸರ್ಕಾರಕ್ಕೆ ಸಲಹೆ
ಶಿವಮೊಗ್ಗ: ಕಬ್ಬು ಬೆಳೆಗಾರರು ಸಂಕಷ್ಟದಲ್ಲಿದ್ದು, ರಾಜ್ಯದಲ್ಲಿ ಕಬ್ಬು ಬೆಳೆಗಾರರ ಹೋರಾಟದ ಕಿಚ್ಚು ನಿಲ್ಲುತ್ತಿಲ್ಲ. ಹಾಗಾಗಿ ಸರ್ಕಾರ ಒಳಜಗಳ ಬದಿಗಿಟ್ಟು ಬೆಳೆಗಾರರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ(vijayendra) ಸರ್ಕಾರಕ್ಕೆ ಸಲಹೆ ನೀಡಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ಆರಂಭಗೊಂಡ ಕಿಚ್ಚು ಇದೀಗ ಬಾಗಲಕೋಟೆ ಸೇರಿ ಹಲವು ಜಿಲ್ಲೆಗಳಿಗೆ ವ್ಯಾಪಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah)ಅವರು ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆಗಳ ಮಾಲೀಕರ ನಡುವಿನ ಸಂಧಾನ ಸಭೆ ನಡೆದರೂ ವಾತಾವರಣ ತಿಳಿಯಾಗುತ್ತಿಲ್ಲ ಎಂದರು.
ರೈತರ ಹೋರಾಟ ಹೆಚ್ಚಾಗುತ್ತಲೇ ಇದೆ. ಉಸ್ತುವಾರಿ ಸಚಿವರನ್ನು ಸ್ಥಳಕ್ಕೆ ಕಳುಹಿಸಬೇಕು. ಬೆಳೆಗಾರರ ಹೋರಾಟವನ್ನು ಸಿಎಂ ಗಂಭೀರವಾಗಿ ಪರಿಗಣಿಸಬೇಕು. ಮತ್ತೊಂದೆಡೆ ಮೆಕ್ಕೆಜೋಳ ದರ ಕುಸಿತವಾಗಿದ್ದು, ಖರೀದಿ ಕೇಂದ್ರ ಇನ್ನೂ ಆರಂಭವಾಗಿಲ್ಲ. ರೈತರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ರೈತರ ಜೀವನದ ಜತೆ ಚೆಲ್ಲಾಟ ಆಡುವುದನ್ನು ಬಿಡಬೇಕು ಎಂದರು.