ನಗರದಿಂದ ತೀರ್ಥಹಳ್ಳಿ ಮಾರ್ಗವಾಗಿ ಶಿವಮೊಗ್ಗಕ್ಕೆ ಹೋಗುವ ರಾಜ್ಯ ರಸ್ತೆ ಸಾರಿಗೆ ಬಸ್ ವ್ಯವಸ್ಥೆಗೆ ಶಾಸಕ ಆರಗ ಜ್ಞಾನೇಂದ್ರ ಚಾಲನೆ ನೀಡಿದರು.
ತೀರ್ಥಹಳ್ಳಿ: ಶಕ್ತಿ ಯೋಜನೆ ಸದ್ಬಳಕೆ ಆಗಬೇಕಾದರೆ ಸರ್ಕಾರಿ ಬಸ್ಗಳ ಸಂಚಾರವನ್ನು ಹೆಚ್ಚಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಪಟ್ಟಣದಲ್ಲಿ ಸೋಮವಾರ ನಗರ ಹೋಬಳಿಯ ರ್ಯಾವೆಯಿಂದ ತೀರ್ಥಹಳ್ಳಿ ಮಾರ್ಗವಾಗಿ ಶಿವಮೊಗ್ಗಕ್ಕೆ ತೆರಳುವ ಕೆಎಸ್ಆರ್ಟಿಸಿ ಬಸ್ಗೆ ಚಾಲನೆ ನೀಡಿ ಮಾತನಾಡಿದ ಅವರು, ಈ ಭಾಗದಲ್ಲಿ ಸರ್ಕಾರಿ ಬಸ್ಗಳ ಸಂಚಾರ ಕಡಿಮೆ. ಇದರಿಂದ ಮಹಿಳೆಯರು ಶಕ್ತಿ ಯೋಜನೆ ಸೌಲಭ್ಯದಿಂದ ವಂಚಿತರಾಗಿದ್ದಾರೆ ಎಂದರು.
ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುತ್ತಿರುವ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವುದು ಕಷ್ಟ. ಆರ್ಥಿಕವಾಗಿ ಹಿಂದುಳಿದ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪಟ್ಟಣದಲ್ಲಿರುವ ಎರಡೂ ಸರ್ಕಾರಿ ಪ್ರೌಢಶಾಲೆಗಳಿಗೆ ನಗರ ಹೋಬಳಿಯ ಭಾಗದಿಂದ ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಈ ವಿದ್ಯಾರ್ಥಿಗಳಿಗೆ ಈಗ ಆರಂಭವಾಗಿರುವ ಬಸ್ ಸಂಚಾರದಿಂದ ಅನುಕೂಲವಾಗಲಿದೆ ಎಂದು ಹೇಳಿದರು.
ಮಲೆನಾಡು&ಕರಾವಳಿ ಸಂಪರ್ಕದ ಹುಲಿಕಲ್ ಘಾಟ್ ಸರ್ವಋತು ಹೆದ್ದಾರಿ. ಇತ್ತೀಚೆಗೆ ರಸ್ತೆ ಕುಸಿತದಿಂದಾಗಿ ಅಸ್ತವ್ಯಸ್ತಗೊಂಡಿದ್ದ ಸಂಚಾರ ವ್ಯವಸ್ಥೆಯಿಂದ ವ್ಯಾಪಾರ, ವ್ಯವಹಾರಗಳಿಗೆ ಹಿನ್ನಡೆಯಾಗಿತ್ತು. 5.50 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆದಿದ್ದು ಇನ್ನೂ ಒಂದು ಕೋಟಿ ರೂ. ವೆಚ್ಚದ ಕೆಲಸ ಆಗಬೇಕು. ಘಾಟ್ ಮಾರ್ಗಅಭಿವೃದ್ಧಿ ಕಾಮಗಾರಿ ಮಂಜೂರಾದರೂ ಮೂರು ತಿಂಗಳು ಕಾಮಗಾರಿ ಆರಂಭಿಸದಂತೆ ಅಡ್ಡಿಪಡಿಸಿದ ಪರಿಣಾಮ ಘಾಟ್ನಲ್ಲಿ ದೊಡ್ಡ ಅನಾಹುತ ನಡೆಯುವಂತಾಯಿತು. ಗುತ್ತಿಗೆದಾರರು ಮತ್ತು ಅಧಿಕಾರಿಗಳ ವಿರುದ್ಧ ದೂರು ದಾಖಲಿಸುವ ಬೆದರಿಕೆ ಹಾಕಿದ್ದೇ ದುರಂತಕ್ಕೆ ಕಾರಣ ಎಂದು ನುಡಿದರು.