ಭದ್ರಾವತಿ ಎಂಪಿಎಂ ಬಡಾವಣೆಗೆ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಕಲ್ಪಿಸಲಾಯಿತು. ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್ ಚಾಲನೆ ನೀಡಿದರು. ಟಿ.ಜಿ.ಬಸವರಾಜಯ್ಯ, ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು. 
ಶಿವಮೊಗ್ಗ

ಎಂಪಿಎಂ ಬಡಾವಣೆಗೆ ಬಸ್ ಸಂಚಾರ | Bus Facility

ಶಿವಕುಮಾರ ಎಸ್.ಪಿ.
ಭದ್ರಾವತಿ: ಎಂಪಿಎಂ ಕಾರ್ಖಾನೆ ನೌಕರರು ವಾಸಿಸುತ್ತಿರುವ ಎಂಪಿಎಂ ಬಡಾವಣೆಗೆ ಶುಕ್ರವಾರದಿಂದ ಕೆಎಸ್‌ಆರ್‌ಟಿಸಿ ಬಸ್ ಸಂಚಾರಕ್ಕೆ ಚಾಲನೆ ನೀಡಲಾಯಿತು.
ಎಂಪಿಎಂ ಬಡಾವಣೆ ನಗರಸಭೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ-206ರ ಪಕ್ಕದಲ್ಲಿದ್ದರೂ ಹಲವು ವರ್ಷಗಳಿಂದ ಕೆಎಸ್‌ಆರ್‌ಟಿಸಿ ಬಸ್ ಸಾರಿಗೆ ವ್ಯವಸ್ಥೆ ಇರಲಿಲ್ಲ. ಇದರಿಂದ ಇಲ್ಲಿನ ನಿವಾಸಿ ತೊಂದರೆ ಅನುಭವಿಸುವಂತಾಗಿತ್ತು. ಎಂಪಿಎಂ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ನೇತೃತ್ವದಲ್ಲಿ ನಿವಾಸಿಗಳು ಬಸ್ ವ್ಯವಸ್ಥೆ ಕಲ್ಪಿಸಿಕೊಡುವಂತೆ ಶಾಸಕ ಬಿ.ಕೆ.ಸಂಗಮೇಶ್ವರ್ ಹಾಗೂ ಕೆಎಸ್‌ಆರ್‌ಟಿಸಿ ಬಸ್ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಬಸ್ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
ತರೀಕೆರೆ-ಭದ್ರಾವತಿ ನಡುವೆ ಸಂಚರಿಸುವ ಸಾಮಾನ್ಯ ಸಾರಿಗೆ ಬಸ್ (ಲೋಕಲ್) ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಿಂದ ಜಯಶ್ರೀ ವೃತ್ತ, ಪ್ರೊ. ಬಿ. ಕೃಷ್ಣಪ್ಪ ವೃತ್ತ(ಮಿಲ್ಟ್ರಿಕ್ಯಾಂಪ್) ಬಳ್ಳಾಪುರ, ಉಜ್ಜನಿಪುರ ಮಾರ್ಗವಾಗಿ ಎಂಪಿಎಂ ಬಡಾವಣೆ ತಲುಪಲಿದೆ. ನಂತರ ಬಾರಂದೂರು, ಎಂ.ಸಿ.ಹಳ್ಳಿ ಮೂಲಕ ತರೀಕೆರೆ ತಲುಪಲಿದೆ. ಬೆಳಗ್ಗೆ 10 ಗಂಟೆಗೆ ಹಾಗೂ ಸಂಜೆ 5.30ಕ್ಕೆ ಎರಡು ಬಾರಿ ಬಸ್ ಸಂಚರಿಸಲಿದೆ.
ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜಕುಮಾರ್, ಎಂಪಿಎಂ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಟಿ.ಜಿ.ಬಸವರಾಜಯ್ಯ, ನಿರ್ದೇಶಕರು, ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮತ್ತು ಎಂಪಿಎಂ ಬಡಾವಣೆ ನಿವಾಸಿಗಳು ಉಪಸ್ಥಿತರಿದ್ದರು.