- ಸ್ಟೇಜ್ ಕ್ಯಾರಿಯೇಜ್ ಬಸ್‌ಗಳ ಏಕಮುಖ ಸಂಚಾರಕ್ಕೆ ಅವಕಾಶ
- ರಾತ್ರಿ ಸಂಚಾರಕ್ಕಾಗಿ ಕ್ಯಾಟ್ ಐ ಮತ್ತು ಸೋಲಾರ್ ಸ್ಟಡ್ಸ್ ಅಳವಡಿಕೆ
- ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶ
ಶಿವಮೊಗ್ಗ: ಸಾರ್ವಜನಿಕರ ಹಿತದೃಷ್ಟಿಯಿಂದ ರಾಜ್ಯ ಹೆದ್ದಾರಿ 52ರ ಹುಲಿಕಲ್ ಘಾಟ್ ಮೂಲಕ ನಿಗದಿತ ಸಾಮರ್ಥ್ಯದ ಸ್ಟೇಜ್ ಕ್ಯಾರಿಯೇಜ್ ಬಸ್(Stage Carriage Bus)ಗಳ ಏಕಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ(District Collector Prabhulinga Kavalikatti)ಆದೇಶಿಸಿದ್ದಾರೆ.
ಘಾಟ್ ವ್ಯಾಪ್ತಿಯ ಶ್ರೀ ಚಂಡಿಕಾಂಬ ದೇವಸ್ಥಾನದ ಬಳಿ ಹೇರ್‌ಪಿನ್ ತಿರುವಿನಲ್ಲಿ ಅಳವಡಿಸಿರುವ ವೇಗಮಿತಿ ಫಲಕದಂತೆ ಗಂಟೆಗೆ 20 ಕಿ.ಮೀ. ವೇಗದಲ್ಲಿ ಚಲಿಸಬೇಕು. 40+2 ಆಸನ ಸಾಮರ್ಥ್ಯವುಳ್ಳ ಸ್ಟೇಜ್ ಕ್ಯಾರಿಯೇಜ್ ಬಸ್‌ಗಳಿಗೆ ಮಾತ್ರ ಸಂಚರಿಸಲು ಅನುಮತಿ ನೀಡಲಾಗಿದೆ.
ಏ.9ರಂದು ಹುಲಿಕಲ್ ಘಾಟ್(Hulikal Ghat)ನ ಹೇರ್‌ಪಿನ್ ತಿರುವಿನಲ್ಲಿ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ 12 ಮೀಟರ್ ಎತ್ತರದ ಕಾಂಕ್ರಿಟ್ ರಸ್ತೆ ಕೆಳಭಾಗದಲ್ಲಿ 5 ಅಡಿಯಷ್ಟು ಭೂಕುಸಿತ ಉಂಟಾಗಿತ್ತು. ಇದರಿಂದ ಮಾಸ್ತಿಕಟ್ಟೆಯಿಂದ ಹೊಸಂಗಡಿವರೆಗೆ ಎಲ್ಲ ಮಾದರಿ ವಾಹನ ಸಂಚಾರ ನಿಷೇಧಿಸಿ ಬದಲಿ ಮಾರ್ಗ ಕಲ್ಪಿಸಲಾಗಿತ್ತು.
ಪ್ರಸ್ತುತ ಲೋಕೋಪಯೋಗಿ ಇಲಾಖೆ(Public Works Department)ಯಿಂದ ತಡೆಗೋಡೆ ನಿರ್ಮಿಸಿ, ಕಾಂಕ್ರೀಟ್ ಹಾಕಿ ತಾತ್ಕಾಲಿಕ ದುರಸ್ತಿ ಕೈಗೊಂಡ ನಂತರ ಅಧಿಕಾರಿಗಳ ವರದಿ ಆಧರಿಸಿ ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಘಾಟಿಯಲ್ಲಿ ಮತ್ತೊಮ್ಮೆ ಭೂಕುಸಿತ ಸಂಭವಿಸುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆಯಾಗಿ ತಡೆಗೋಡೆ, ಸೂಚನಾ ಫಲಕಗಳು ಹಾಗೂ ರಾತ್ರಿ ಸಂಚಾರದ ಅನುಕೂಲಕ್ಕಾಗಿ ಕ್ಯಾಟ್ ಐ ಮತ್ತು ಸೋಲಾರ್ ಸ್ಟಡ್ಸ್(Cat's Eye and Solar Studs) ಅಳವಡಿಸಿ ಸುರಕ್ಷತೆ ಖಾತ್ರಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.