ಶಿಕಾರಿಪುರ: ಕಸ್ತೂರಿ ರಂಗನ್ ವರದಿ ಬಗ್ಗೆ ಮಾಹಿತಿ ಪಡೆಯುವ ಸಂಬಂಧ ಸೆ.19ರಂದು ತೀರ್ಥಹಳ್ಳಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಗಮಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಪಾಲ್ಗೊಳ್ಳಲಿದ್ದಾರೆ. ಹಾಗಾಗಿ ವರದಿಯಿಂದ ತೊಂದರೆಗೀಡಾಗುವ ಎಲ್ಲ ತಾಲೂಕುಗಳ ರೈತರು ಆಗಮಿಸಿ ನಿಮ್ಮ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭಂಡಾರಿ ಮಾಲತೇಶ್ ಹೇಳಿದರು.
ಕಸ್ತೂರಿ ರಂಗನ್ ವರದಿ ಕರಡು ಅಧಿಸೂಚನೆ ಜಾರಿಯಾದರೆ ಮಲೆನಾಡಿನ ರೈತರು, ಕೃಷಿ ಕಾರ್ಮಿಕರು ಹಾಗೂ ಸಾರ್ವಜನಿಕರ ಬದುಕಿಗೆ ದೊಡ್ಡ ಸಂಕಷ್ಟ ಎದುರಾಗಲಿದೆ. ಈ ಹಿನ್ನೆಲೆಯಲ್ಲಿ ಮಲೆನಾಡ ಜನರ ನೈಜ ಪರಿಸ್ಥಿತಿ ಮತ್ತು ಅಹವಾಲುಗಳನ್ನು ಆಲಿಸಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕಾರ್ಯಕ್ರಮಕ್ಕೆ ಯಾವುದೇ ಪಕ್ಷದ ರೈತರಾಗಲಿ, ಕಸ್ತೂರಿ ರಂಗನ್ ವರದಿಯಿಂದ ತಾಲೂಕಿನಲ್ಲಿ ತೊಂದರೆಗೆ ಒಳಗಾದವರು ಮತ್ತು ಶಿವಮೊಗ್ಗ ಜಿಲ್ಲೆ ಹಾಗೂ ಪಶ್ಚಿಮಘಟ್ಟ ಮತ್ತು ಮಲೆನಾಡು ಭಾಗದ ಸಮಸ್ತ ರೈತರು, ಕೃಷಿಕರು, ಕಾರ್ಮಿಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಅಹವಾಲು ಸಲ್ಲಿಸುವ ಮೂಲಕ ವರದಿಯನ್ನು ಒಗ್ಗಟ್ಟಿನಿಂದ ವಿರೋಧಿಸಬೇಕು ಎಂದರು.
ಕೆಡಿಪಿ ಸದಸ್ಯ ರಾಘವೇಂದ್ರ ನಾಯಕ್ ಮಾತನಾಡಿ, ಕಸ್ತ್ತೂರಿ ರಂಗನ್ ವರದಿಯಿಂದ ತಾಲೂಕಿನ 11 ಗ್ರಾಮಗಳ ರೈತರಿಗೆ ತೊಂದರೆಯಾಗುತ್ತಿದೆ. ಕೇಂದ್ರ ಸರ್ಕಾರ ತಕ್ಷಣ ಈ ವರದಿಯನ್ನು ಯಾವ ಕಾರಣಕ್ಕೂ ಅನುಷ್ಠಾನಕ್ಕೆ ತರಲು ರಾಜ್ಯ ಸರ್ಕಾರ ಬಿಡುವುದಿಲ್ಲ ಎಂದರು.
ಶಿವು ಹುಲ್ಮಾರ್, ಮಂಜುನಾಯ್ಕ, ಉಮೇಶ್, ಅತಾವುಲ್ಲಾ, ಅಜೀಮ್ ಇತರರಿದ್ದರು.