ಶಿವಮೊಗ್ಗ ಬಿ.ಎಚ್.ರಸ್ತೆಯ ಇಎಸ್‌ಐ ಡಿಸ್ಪೆನ್ಸರಿ.
- 130ಕ್ಕೂ ಅಧಿಕ ಡಿಸ್ಪೆನ್ಸರಿಗಳಿಗೆ ಎಸ್‌ಒಪಿ ಹೊರಡಿಸಿದ ಆಯುಕ್ತರು
- ರಾಜ್ಯಾದ್ಯಂತ ಕೋಟ್ಯಂತರ ರೂ. ದುರ್ಬಳಕೆ ಹಿನ್ನೆಲೆಯಲ್ಲಿ ಬಿಗಿ ಕ್ರಮ
- ಖಾಸಗಿ ಆಸ್ಪತ್ರೆಗಳಿಗೆ ರೆಫರೆಲ್ ಪತ್ರ ಮತ್ತು ಒಪಿಡಿ ಸೇವೆ ಸ್ಥಗಿತ
ರಾಜ್ಯಾದ್ಯಂತ ವಿಮಾ ರೋಗಿಗಳ ಹೆಸರಲ್ಲಿ ನಡೆಯುತ್ತಿದ್ದ ಕೋಟ್ಯಂತರ ರೂ. ದುರ್ಬಳಕೆ ತಡೆಗೆ ಮುಂದಾಗಿರುವ ಕಾರ್ಮಿಕರ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆಗಳ ಆಯುಕ್ತಾಲಯ(Workers' State Insurance Scheme Medical Services Commissionerate)ವು ಎಸ್‌ಪಿಒ(ಪ್ರಾಮಾಣಿಕ ಕಾರ್ಯಚರಣೆ ವಿಧಾನ)ಯನ್ನು ಬಿಗಿಗೊಳಿಸಿದೆ. ಹಾಗಾಗಿ ವಿಮಾ ರೋಗಿಗಳಿಗೆ ಇದುವರೆಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಸರಳವಾಗಿ ಸಿಗುತ್ತಿದ್ದ ರೆಫರೆನ್ಸ್ ಪತ್ರ(Reference letter) ಹಾಗೂ ಒಪಿಡಿ(ಹೊರ ರೋಗಿ ವಿಭಾಗ) ಸೇವೆಗೆ ಬ್ರೇಕ್ ಬಿದ್ದಿದೆ.
ರಾಜ್ಯದಲ್ಲಿ 130ಕ್ಕೂ ಅಧಿಕ ಇಎಸ್‌ಐ ಡಿಸ್ಪೆನರಿ(ESI Dispensary)ಗಳಿದ್ದು, ಲಕ್ಷಾಂತರ ಕಾರ್ಮಿಕರು ಮತ್ತು ಅವರ ಕುಟುಂಬ ಸದಸ್ಯರು ಇಎಸ್‌ಐ ಸೌಲಭ್ಯವನ್ನು ಪ್ರತಿವರ್ಷ ಪಡೆದುಕೊಳ್ಳುತ್ತಿದ್ದಾರೆ. ಆದರೆ ಇದೀಗ ಇಎಸ್‌ಐ ಡಿಸ್ಪೆನ್ಸರಿಗಳಲ್ಲಿ ಕೋಟ್ಯಂತರ ರೂ. ದುರ್ಬಳಕೆ ಆಗಿರುವುದನ್ನು ಮನಗಂಡಿರುವ ರಾಜ್ಯ ಸರ್ಕಾರ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಬೇಕಿದ್ದ ರೆಫರೆಲ್ ಪತ್ರ ಮತ್ತು ಒಪಿಡಿ ಸೇವೆಯನ್ನು ಸ್ಥಗಿತಗೊಳಿಸಿದೆ.
ಸಣ್ಣಪುಟ್ಟ ಜ್ವರ, ಶೀತ, ನೆಗಡಿ, ಕೆಮ್ಮು ಇತ್ಯಾದಿ ಆರೋಗ್ಯ ಸಮಸ್ಯೆಗಳಿಗೂ ವಿಮಾ ರೋಗಿಗಳು ಖಾಸಗಿ ಆಸ್ಪತ್ರೆ(Private hospital)ಗಳಿಗೆ ತೆರಳುತ್ತಿದ್ದರು. ಒಡಿಪಿ ಚಿಕಿತ್ಸೆಗೆ ಗುಣಮುಖರಾಗಬೇಕಿದ್ದ ವಿಮಾ ರೋಗಿಗಳ ಹೆಸರಲ್ಲಿ ಕೆಲ ಖಾಸಗಿ ಆಸ್ಪತ್ರೆಗಳು ಲಕ್ಷಾಂತರ ರೂ. ಬಿಲ್ ಮಾಡಿರುವುದು ಮೇಲ್ನೋಟಕ್ಕೆ ದೃಢಪಟ್ಟಿದೆ. ಹಾಗಾಗಿ ಎಸ್‌ಒಪಿಯನ್ನು ಮತ್ತಷ್ಟು ಬಿಗಿಗೊಳಿಸಿರುವ ಸರ್ಕಾರ ಕೆಲವೊಂದು ಮಾರ್ಗಸೂಚಿಗಳ ಪಾಲನೆಗೆ ಡಿಸ್ಪೆನ್ಸರಿಗಳಿಗೆ ಆದೇಶಿಸಿದೆ.
ಡಿಸ್ಪೆನ್ಸರಿಗಳಲ್ಲಿ ಸ್ಪೆಷಾಲಿಸ್ಟ್ ವೈದ್ಯರ ಕೊರತೆ: ಬೆಂಗಳೂರು, ದಾವಣಗೆರೆ, ಮೈಸೂರು, ಕಲ್ಬುರ್ಗಿ, ಬೆಳಗಾವಿ, ಧಾರವಾಡ(ಹುಬ್ಬಳ್ಳಿ) ಜಿಲ್ಲೆಗಳಲ್ಲಿ ಮಾತ್ರ ಇಎಸ್‌ಐ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ. ಉಳಿದಂತೆ 25 ಜಿಲ್ಲೆಗಳಲ್ಲಿ ಇಎಸ್‌ಐ ಡಿಸ್ಪೆನ್ಸರಿಗಳೇ ಕಾರ್ಯಾನಿರ್ವಹಿಸುತ್ತಿದ್ದು, ಅಲ್ಲಿ ಎಂಬಿಬಿಎಸ್ ವೈದ್ಯರು(MBBS doctor) ಮಾತ್ರ ಇದ್ದಾರೆ. ಸ್ಪೆಷಾಲಿಸ್ಟ್(ಪರಿಣಿತಿ) ವೈದ್ಯರ ಕೊರತೆ ಇದೆ. ಆ ಕಾರಣಕ್ಕೆ ವಿಮಾ ರೋಗಿಗಳು ಡಿಸ್ಪೆನ್ಸರಿಗಳಲ್ಲಿ ಚಿಕಿತ್ಸೆ ಪಡೆಯಲು ವಿಮಾ ರೋಗಿಗಳು ಹಿಂದೇಟು ಹಾಕುತ್ತಿದ್ದಾರೆ. ಗಂಭೀರ ಕಾಯಿಲೆಗಳ ಜತೆಗೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೂ ರೆಫರೆಲ್ ಪತ್ರ ಹಿಡಿದು ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುತ್ತಿದ್ದರು.
ಲೆಕ್ಕಕ್ಕೂ ಸಿಗುತ್ತಿಲ್ಲ ಹಣ ದುರ್ಬಳಕೆ: ವಿಮಾ ರೋಗಿಗಳ ಹೆಸರಲ್ಲಿ ರಾಜ್ಯಾದ್ಯಂತ ಸಾವಿರಾರು ಖಾಸಗಿ ಆಸ್ಪತ್ರೆಗಳು ಇಎಸ್‌ಐ ಜತೆ ಹೊಂದಾಣಿಕೆ ಮಾಡಿಕೊಂಡಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರ(Central and State Government) ಎರಡೂ ವಿಮಾ ರೋಗಿಗಳ ಚಿಕಿತ್ಸೆಯ ಕಂತು ಪಾವತಿ ಮಾಡುತ್ತಿವೆ. ಆದರೆ ಇದುವರೆಗೆ ವಿಮಾ ರೋಗಿಗಳ ಹೆಸರಲ್ಲಿ ಖಾಸಗಿ ಆಸ್ಪತ್ರೆಗಳಿಂದ ಆಗಿರುವ ಕೋಟಿ ಕೋಟಿ ರೂ. ದುರ್ಬಳಕೆ ಲೆಕ್ಕಕ್ಕೂ ಸಿಗದಂತಾಗಿದೆ. ಕೆಲ ಸಣ್ಣಪುಟ್ಟ ಕಾಯಿಲೆಗಳಿಗೂ ವಿಮಾ ರೋಗಿಗಳನ್ನು ಒಳರೋಗಿಗಳನ್ನಾಗಿ ದಾಖಲಿಸಿಕೊಂಡು ಲಕ್ಷಾಂತರ ರೂ. ಬಿಲ್ ಮಾಡಿಸಿಕೊಂಡಿರುವ ಉದಾಹರಣೆಗಳು ಸಾಕಷ್ಟಿವೆ. ಆ ನಿಟ್ಟಿನಲ್ಲಿ ಎಚ್ಚೆತ್ತಿಕೊಂಡಿರುವ ಸರ್ಕಾರ ಎಸ್‌ಒಪಿ ಪಾಲನೆ(SOP compliance)ಗೆ ಆದೇಶಿಸಿದೆ.
ತುರ್ತು ಚಿಕಿತ್ಸೆಗಿಲ್ಲ ಅಡೆತಡೆ: ವಿಮಾ ರೋಗಿಗಳ ತುರ್ತು ಚಿಕಿತ್ಸೆ(Emergency treatment)ಗಳಿಗೆ ಎಸ್‌ಒಪಿಯಲ್ಲಿ ಯಾವುದೇ ಅಡೆತಡೆ ಇಲ್ಲ. ಹೃದಯಾಘಾತ, ರಸ್ತೆ ಅಥವಾ ಕೆಲಸದ ಸ್ಥಳದಲ್ಲಿ ಅಪಘಾತ, ಹಾವು ಕಡಿತ, ಶೇ.30ಕ್ಕಿಂತ ಹೆಚ್ಚು ಸುಟ್ಟ ಗಾಯ, ವಿಷ ಪ್ರಾಶನ, ಡೆಂಘಿ ಜ್ವರ(ಪ್ಲೆಟ್‌ಲೇಟ್ ಟ್ರಾನ್ಸ್‌ಷ್ಯೂಷನ್ ಕೂಟದಲ್ಲಿ ಮಾತ್ರ), ಹೆರಿಗೆ, ಮಕ್ಕಳ ಶಸ್ತ್ರಚಿಕಿತ್ಸೆ, ಪಾರ್ಶ್ವವಾಯುದಂತಹ ಕಾಯಿಲೆಗಳಿಗೆ ಯಾವುದೇ ರೆಫರಲ್ ಪತ್ರದ ಅಗತ್ಯವಿಲ್ಲ. ನೇರವಾಗಿ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದಾಗಿದೆ.
ಯಾವುದಕ್ಕೆ ರೆಫರೆಲ್ ಲಟರ್ ಕಡ್ಡಾಯ ?
ಹೃದಯ ಸಂಬಂಧಿ, ನರ ಸಂಬಂಧಿ, ಜಠರ ಅಥವಾ ಜೀರ್ಣಾಂಗ, ಕ್ಯಾನ್ಸರ್, ರೇಡಿಯಾಲಜಿ,, ಮೂತ್ರಕೋಶ(ಕಿಡ್ನಿ), ಡಯಾಲಿಸಿಸ್(Dialysis)ನಂತಹ ಕಾಯಿಲೆಗಳಿಗೆ ರೆಫರೆಲ್ ಲೆಟರ್ ಕಡ್ಡಾಯವಾಗಿದೆ. ಅಲ್ಲದೆ, ಇಎಸ್‌ಐ ಡಿಸ್ಪೆನ್ಸರಿಗಳಲ್ಲಿ ಚಿಕಿತ್ಸೆ ಸಿಗದಿದ್ದರೆ ಜಿಲ್ಲಾಸ್ಪತ್ರೆ(District Hospital)ಗಳು ಮೊದಲ ಆದ್ಯತೆ ಆಗಬೇಕು. ಅಲ್ಲಿಯೂ ನುರಿತ ವೈದ್ಯರು ಲಭ್ಯವಿಲ್ಲದಿದ್ದರೆ ಮಾತ್ರ ಇಎಸ್‌ಐ ಹೊಂದಾಣಿಕೆ ಮಾಡಿಕೊಂಡ ಖಾಸಗಿ ಆಸ್ಪತ್ರೆಗಳಲ್ಲಿ ವಿಮಾ ರೋಗಿಗಳು ಚಿಕಿತ್ಸೆ ಪಡೆಯಲು ಅರ್ಹರಾಗಿರುವರು.
ಮಾರ್ಗಸೂಚಿಗಳೇನು ?
- ಇನ್ಮುಂದೆ ಸಕ್ಷಮ ಪ್ರಾಧಿಕಾರ ಸಹಿ ಕಡ್ಡಾಯ
- ಬಳಕೆದಾರರ ಐಡಿ, ಪಾಸ್‌ವರ್ಡ್ ಹಂಚಿಕೊಳ್ಳುವಿಕೆ ನಿಷೇಧ
- ವಿಮಾ ರೋಗಿಯ ಪ್ರಸ್ತುತ ಭಾವಚಿತ್ರ ಸೆರೆಹಿಡಿದು ಪಿ1 ನಮೂನೆಯಲ್ಲಿ ಉಳಿಸುವುದು
- ರೆಫರೆಲ್ ಪತ್ರವನ್ನು ಸಂಬಂಧಿಸಿದ ವೈದ್ಯರು ಧನ್ವಂತರಿ ತಂತ್ರಾಂಶದ ಮೂಲಕ ಸೃಜಿಸುವುದು
- ವಿಮಾ ರೋಗಿಗಳಿಗೆ ಜಿಲ್ಲಾಸ್ಪತ್ರೆಗಳೇ ಮೊದಲ ಆದ್ಯತೆ ಆಗಬೇಕು
ಎಸ್‌ಒಪಿ ಬಿಗಿಗೊಳಿಸಲು ಕಾರಣ ?
- ವಿಮಾ ರೋಗಿಗಳು, ಖಾಸಗಿ ಆಸ್ಪತ್ರೆಗಳ ಕಳ್ಳಾಟ ಬಯಲು
- ಸಣ್ಣಪುಟ್ಟ ಆರೋಗ್ಯ ಸಮಸ್ಯೆಗೂ ಲಕ್ಷಾಂತರ ಬಿಲ್ ಕ್ಲೈಮ್
- ಸರ್ಕಾರದ ಲೆಕ್ಕಕ್ಕೂ ಸಿಗುತ್ತಿಲ್ಲ ಅನುದಾನ ದುರ್ಬಳಕೆ
- ಇಎಸ್‌ಐ ಡಿಸ್ಪೆನ್ಸರಿಗಳಲ್ಲಿ ಸ್ಪೆಷಾಲಿಸ್ಟ್ ವೈದ್ಯರ ಕೊರತೆ
"
ವಿಮಾ ರೋಗಿಗಳ ಹೆಸರಲ್ಲಿ ಹಣ ದುರ್ಬಳಕೆ ಆಗುವುದನ್ನು ತಡೆಯಲು ಸರ್ಕಾರ ಈ ಹಿಂದಿನಿಂದಲೂ ಇದ್ದ ಎಸ್‌ಒಪಿಯನ್ನು ಮತ್ತಷ್ಟು ಬಿಗಿಗೊಳಿಸಿದೆ. ತುರ್ತು ಸಮಯ ಹೊರತುಪಡಿಸಿ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ನೋಂದಾಯಿತ ಖಾಸಗಿ ಆಸ್ಪತ್ರೆಗಳಿಗೆ ರೆಫರೆಲ್ ಪತ್ರ ಮತ್ತು ಒಪಿಡಿಗೆ ಅವಕಾಶ ನೀಡದಂತೆ ಕಾರ್ಮಿಕರ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆಗಳ ಆಯುಕ್ತರು ಇಎಸ್‌ಐ ಡಿಸ್ಪೆನ್ಸರಿಗಳಿಗೆ ಆದೇಶಿಸಿದ್ದಾರೆ. ಹಾಗಾಗಿ ರೆಫರೆಲ್ ಪತ್ರಗಳನ್ನು ನೀಡುತ್ತಿಲ್ಲ.
— ಡಾ. ಕೆ.ಆರ್.ಅಶ್ವಿನಿ, ಶಿವಮೊಗ್ಗ ಬಿ.ಎಚ್.ರಸ್ತೆಯ ಇಎಸ್‌ಐ ಡಿಸ್ಪೆನ್ಸರಿ ಆಡಳಿತ ವಿಮಾ ವೈದ್ಯಾಧಿಕಾರಿ