ಮೃತ ಬಿಎಲ್‌ಒ ಮಂಜುಳಾ. 
ಶಿವಮೊಗ್ಗ

ಎಸ್‌ಐಆರ್ ಪ್ರಕ್ರಿಯೆಯಲ್ಲಿ ತೊಡಗಿದ್ದ ಬಿಎಲ್‌ಒ ಕುಸಿದು ಬಿದ್ದು ಸಾವು | BLO Death

ಪ್ರಮುಖ ಮುಖ್ಯಾಂಶಗಳು

  • ಭದ್ರಾವತಿ ತಾಲೂಕಿನ ಕಲ್ಹಾಪುರ ಬಳಿ ಕೋಡಿ ಹೊಸೂರು ಗ್ರಾಮದಲ್ಲಿ ಘಟನೆ
  • ಕೋಡಿ ಹೊಸೂರು ಪಿಡಿಒ, ಸಹಾಯಕ ಸಿಬ್ಬಂದಿ ಜತೆ ತೆರಳಿದ್ದ ಮಂಜುಳಾ
  • ತಹಸೀಲ್ದಾರ್ ಪ್ರದೀಪ್ ಭೇಟಿ, ಹೊಳೆಹೊನ್ನೂರು ಠಾಣಾ ವ್ಯಾಪ್ತಿಯಲ್ಲಿ ಘಟನೆ
ಶಿವಮೊಗ್ಗ: ಭದ್ರಾವತಿ ತಾಲೂಕಿನ ಕಲ್ಹಾಪುರ ಬಳಿ ಕೋಡಿ ಹೊಸೂರು ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ಮತದಾರ ಪಟ್ಟಿಯ ಎಸ್‌ಐಆರ್(ವಿಶೇಷ ಸಮಗ್ರ ಪರಿಷ್ಕರಣೆ) ಪ್ರಕ್ರಿಯೆಯಲ್ಲಿ ತೊಡಗಿದ್ದ ಮಹಿಳಾ ಬಿಎಲ್‌ಒ(Female BLO)(ಬೂತ್ ಮಟ್ಟದ ಅಧಿಕಾರಿ) ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಭದ್ರಾವತಿ ತಾಲೂಕಿನ ಕಲ್ಹಾಪುರದ ಅಂಗನವಾಡಿ ಕಾರ್ಯಕರ್ತೆ(Anganwadi worker) ಮಂಜುಳಾ (50) ಮೃತ ಬಿಎಲ್‌ಒ. ಕೋಡಿ ಹೊಸೂರು ಪಿಡಿಒ, ಬಿಎಲ್‌ಒ ಮಂಜುಳಾ ಹಾಗೂ ಸಹಾಯಕ ಸಿಬ್ಬಂದಿ ಎಸ್‌ಐಆರ್ ಪ್ರಕ್ರಿಯೆ(SIR process)ಯಲ್ಲಿ ತೊಡಗಿಸಿಕೊಂಡಿದ್ದರು. ಈ ವೇಳೆ ಮಂಜುಳಾ ಅವರು ಕುಸಿದು ಬಿದ್ದಿದ್ದಾರೆ. 
ತಕ್ಷಣವೇ ಸಹೋದ್ಯೋಗಿಗಳು ಅವರನ್ನು ಅರಬಿಳಚಿ ಪ್ರಾಥಮಿಕ ಆರೋಗ್ಯ ಕೇಂದ್ರ(Arabilachi Primary Health Center)ಕ್ಕೆ ಕರೆದೊಯ್ದಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಭದ್ರಾವತಿ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಮಂಜುಳಾ ಕೊನೆಯುಸಿರೆಳೆದಿದ್ದಾರೆ. ಭದ್ರಾವತಿ ಸರ್ಕಾರಿ ಆಸ್ಪತ್ರೆ(Bhadravati Govt Hospital)ಯಲ್ಲಿ ಮೃತದೇಹ ಇರಿಸಲಾಗಿದೆ. ಭದ್ರಾವತಿ ತಹಸೀಲ್ದಾರ್ ಪ್ರದೀಪ್ ಭೇಟಿ ನೀಡಿದ್ದು, ಹೊಳೆಹೊನ್ನೂರು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.