ಬೇಳೂರು 
ಶಿವಮೊಗ್ಗ

ಬಿಜೆಪಿಯಿಂದ ಇಬ್ಬಗೆ ನೀತಿ ಸರಿಯಲ್ಲ | Meet the press

ಶಿವಕುಮಾರ ಎಸ್.ಪಿ.
ಸಾಗರ: ಪಂಪ್ಟ್ ಸ್ಟೋರೇಜ್ ಯೋಜನೆಯಿಂದ ಪರಿಸರ ನಾಶವಾಗುತ್ತದೆ ಎಂದು ಹೇಳುವ ಬಿಜೆಪಿ ನಾಯಕರು, ಅರಣ್ಯ ಉಳಿಸಲು ಪ್ರಯತ್ನಿಸುವ ಅರಣ್ಯ ಇಲಾಖೆ ಕಾರ್ಯಕ್ಕೆ ಅಡ್ಡಿ ಉಂಟು ಮಾಡುತ್ತಿದ್ದಾರೆ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಇಂತಹ ಇಬ್ಬಗೆ ನೀತಿ ಸರಿಯಲ್ಲ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರಣ್ಯವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವುದು ಕೆಲವರ ಚಾಳಿಯಾಗಿದೆ. ಬೇಸೂರು ಗ್ರಾಮದ ಎಸ್ಸಿ ಕಾಲನಿಯಲ್ಲಿ ಅರಣ್ಯ ಇಲಾಖೆ ಟ್ರಂಚ್ ಹೊಡೆಯಲು ಹೋದಾಗ ಬಿಜೆಪಿಯ ಕೆಲವು ಮುಖಂಡರು ತಡೆದಿದ್ದಾರೆ. ಅರಣ್ಯ ಇಲಾಖೆ ತನ್ನ ಜಾಗವನ್ನು ಬಂದೋಬಸ್ತ್ ಮಾಡಿಕೊಳ್ಳಲು ಅಡ್ಡಿಪಡಿಸುವುದು ಸರಿಯಲ್ಲ. ಹೊಸದಾಗಿ ಒತ್ತುವರಿಗೆ ಅವಕಾಶ ಇಲ್ಲ. ಹಿಂದಿನಿಂದಲೂ ಉಳುಮೆ ಮಾಡಿಕೊಂಡ ಬಂದವರಿಗೆ ಅರಣ್ಯ ಇಲಾಖೆ ಯಾವುದೇ ತೊಂದರೆ ಕೊಡುವುದಿಲ್ಲ. ಯಡಮನೆ, ನಾಡಕಲಸಿ, ಬೇಸೂರು ಇನ್ನಿತರೆ ಕಡೆಗಳಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆಗೆ ಮುಂದಾಗಿದೆ.  ಲಾಗಾಯ್ತಿನಿಂದ ಸಾಗುವಳಿ ಮಾಡಿಕೊಂಡು ಬಂದ ರೈತರಿಗೆ ತೊಂದರೆ ಕೊಟ್ಟರೆ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಿದ್ದೇನೆ ಎಂದರು.
ಪದೇಪದೆ ಅರಣ್ಯ ಒತ್ತುವರಿ ಮಾಡಿದರೆ ಇಲಾಖೆ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗಿರುತ್ತದೆ. ಅರಣ್ಯ ರಕ್ಷಣೆ ದೃಷ್ಟಿಯಿಂದ ಟ್ರಂಚ್ ಹೊಡೆಯಲು ಬರುವ ಇಲಾಖೆಗೆ ಯಾರೂ ತೊಂದರೆ ಕೊಡಬಾರದು. ಕಂದಾಯ ಜಾಗವಾದರೆ ತೆರವು ಮಾಡುವುದಿಲ್ಲ. ಅರಣ್ಯ ಒತ್ತುವರಿ ಮಾಡಿದರೆ ಬಿಡುವುದಿಲ್ಲ. ಅರಣ್ಯ ರಕ್ಷಣೆಗೆ ಕೆಲವು ಕಠಿಣ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯ ಎಂಸು ಎಚ್ಚರಿಸಿದರು.