ವಿಧಾನ ಪರಿಷತ್‌ಗೆ ನಡೆದ ನಾಲ್ಕು ಕ್ಷೇತ್ರಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳು ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಶಿವಮೊಗ್ಗ ಬಿಜೆಪಿ ಕಚೇರಿ ಎದುರು ಮುಖಂಡರು ಮತ್ತು ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು. ಡಿ.ಎಸ್.ಅರುಣ್, ಎನ್.ಕೆ.ಜಗದೀಶ್, ಕೆ.ಜಿ.ಕುಮಾರಸ್ವಾಮಿ, ಎಸ್.ಜ್ಞಾನೇಶ್ವರ್, ಎನ್.ಜಿ.ನಾಗರಾಜ್, ಸಿ.ಎಚ್.ಮಾಲತೇಶ್, ಮೋಹನ್ ರೆಡ್ಡಿ, ಎಸ್.ಎಸ್.ಜ್ಯೋತಿಪ್ರಕಾಶ್, ಸುರೇಖಾ ಮುರುಳೀಧರ್ ಇದ್ದರು. 
ಶಿವಮೊಗ್ಗ

ಎನ್‌ಡಿಎ ಮೈತ್ರಿಕೂಟ ಗೆಲುವು ಹಿನ್ನೆಲೆ ಬಿಜೆಪಿ ವಿಜಯೋತ್ಸವ BJP Celebrations

ಶಿವಮೊಗ್ಗ: ವಿಧಾನ ಪರಿಷತ್ ಶಿಕ್ಷಕರು ಮತ್ತು ಪದವೀಧರ ಕ್ಷೇತ್ರಗಳ ಚುನಾವಣೆಯಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಎನ್‌ಡಿಎ ಮೈತ್ರಿಕೂಟ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಬುಧವಾರ ನಗರದ ಬಿಜೆಪಿ ಕಚೇರಿ ಎದುರು ಮುಖಂಡರು ಮತ್ತು ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.

ಶಿವಮೊಗ್ಗ: ವಿಧಾನ ಪರಿಷತ್ ಶಿಕ್ಷಕರು ಮತ್ತು ಪದವೀಧರ ಕ್ಷೇತ್ರಗಳ ಚುನಾವಣೆಯಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಎನ್‌ಡಿಎ ಮೈತ್ರಿಕೂಟ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಬುಧವಾರ ನಗರದ ಬಿಜೆಪಿ ಕಚೇರಿ ಎದುರು ಮುಖಂಡರು ಮತ್ತು ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.

ಆಗ್ನೇಯ, ಪಶ್ಚಿಮ, ಬೆಂಗಳೂರು, ಈಶಾನ್ಯ ಕ್ಷೇತ್ರಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳು ಭರ್ಜರಿ ಜಯ ಗಳಿಸಿದ್ದು, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಗೆ ರಾಜ್ಯದಲ್ಲಿ ಮತ್ತಷ್ಟು ಬಲ ಬಂದಂತಾಗಿದೆ. ಈ ಫಲಿತಾಂಶವು ಮುಂದಿನ 2028ರ ವಿಧಾನಸಭೆ ಚುನಾವಣೆಯ ದಿಕ್ಸೂಚಿ ಆಗಿದೆ ಎಂದು ಎನ್‌ಡಿಎ ಮೈತ್ರಿ ಪರ ಘೋಷಣೆ ಮೊಳಗಿಸಿದರು.

ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ, ಎಂಎಲ್‌ಸಿ ಡಿ.ಎಸ್.ಅರುಣ್, ವಿಧಾನ ಪರಿಷತ್‌ನ ನಾಲ್ಕು ಕ್ಷೇತ್ರಗಳಲ್ಲಿ ಗೆದ್ದಿರುವುದು ಬಿಜೆಪಿಯ ಆತ್ಮವಿಶ್ವಾಸ ಹೆಚ್ಚಿಸಿದೆ. ಇದು ನಮ್ಮ ಶಕ್ತಿ ಪ್ರದರ್ಶನಕ್ಕೆ ಮೊದಲ ಅಗ್ನಿಪರೀಕ್ಷೆಯಾಗಿದ್ದು, ಮುಂದಿನ ಜಿಪಂ ಮತ್ತು ತಾಪಂ ಚುನಾವಣೆಗಳಲ್ಲಿಯೂ ಕಾರ್ಯಕರ್ತರು ಸನ್ನದ್ಧರಾಗುವಂತೆ ಮಾಡಿದೆ ಎಂದರು.

ನಾಲ್ಕಕ್ಕೆ ನಾಲ್ಕು ಸ್ಥಾನಗಳನ್ನು ಗೆಲ್ಲುತ್ತೇವೆಂಬ ಆತ್ಮವಿಶ್ವಾಸದಿಂದಲೇ ಕೆಲಸ ಮಾಡುತ್ತಿದ್ದೆವು. ರಾಜ್ಯದಲ್ಲಿ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಬೇಕೆಂಬ ಮನಸ್ಥಿತಿ ಜನರಲ್ಲಿದ್ದರೂ ಅದನ್ನು ಹೇಗೆ ವ್ಯಕ್ತಪಡಿಸಬೇಕೆಂಬ ಗೊಂದಲವಿತ್ತು. ಇದೀಗ ಚುನಾವಣಾ ಫಲಿತಾಂಶದ ಮೂಲಕ ಜನರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

ಬಿಜೆಪಿ ಪ್ರಮುಖ ವಿರೋಧ ಪಕ್ಷವಾಗಿ ರಾಜ್ಯಾದ್ಯಂತ ಸಣ್ಣಪುಟ್ಟ ಸಮಸ್ಯೆಗಳಿಂದ ಹಿಡಿದು ದೊಡ್ಡ ಹಗರಣಗಳವರೆಗೆ ನಿರಂತರ ಹೋರಾಟ ನಡೆಸುತ್ತಿದೆ. ವಾಲ್ಮೀಕಿ ನಿಗಮದ ಹಗರಣ ಸೇರಿ ಹಲವು ವಿಚಾರಗಳಲ್ಲಿ ಪಕ್ಷದ ಕಾರ್ಯಕರ್ತರು ಹಗಲಿರುಳು ಹೋರಾಟ ಮಾಡಿದ್ದಾರೆ. ಆದರೂ ಪ್ರತಿಪಕ್ಷವಾಗಿ ಬಿಜೆಪಿ ಯಾವುದೇ ಹೋರಾಟ ನಡೆಸುತ್ತಿಲ್ಲ ಎಂಬ ಟೀಕೆಗಳು ಕೇಳಿಬರುತ್ತಿದ್ದವು. ನಮಗೆ ನಮ್ಮ ಶಕ್ತಿಯನ್ನು ತೋರಿಸಲು ಒಂದು ಪರೀಕ್ಷೆ ಬೇಕಿತ್ತು. ಇದೀಗ ನಡೆದ ಚುನಾವಣೆಯಲ್ಲಿ ನಾಲ್ಕು ಸ್ಥಾನಗಳನ್ನು ಗೆಲ್ಲುವ ಮೂಲಕ ಮೊದಲ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದ್ದೇವೆ. ಮುಂದಿನ ಚುನಾವಣೆಗಳಲ್ಲೂ ನಮ್ಮ ಶಕ್ತಿ ಪ್ರದರ್ಶಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿಯೂ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ರಂಗನಾಥ್ ಗೆಲುವು ಸಾಧಿಸಿರುವುದು ಮಹತ್ವದ ಬೆಳವಣಿಗೆ. ಬೆಂಗಳೂರಿನಲ್ಲಿ ಎನ್‌ಡಿಎ ಅಭ್ಯರ್ಥಿಗೆ ಠೇವಣಿಯೂ ಉಳಿಯುವುದಿಲ್ಲ ಎಂಬ ರೀತಿಯಲ್ಲಿ ಮಾತನಾಡಲಾಗುತ್ತಿತ್ತು. ಆದರೆ ಅಲ್ಲಿನ ಶಿಕ್ಷಕ ಮತದಾರರು ತೀರ್ಪು ನೀಡಿದ್ದು, ರಂಗನಾಥ್ ಅವರನ್ನು ಗೆಲ್ಲಿಸಿದ್ದಾರೆ. ಎಲ್ಲ ವಿಜೇತ ಅಭ್ಯರ್ಥಿಗಳಿಗೂ ಶಿವಮೊಗ್ಗ ಜಿಲ್ಲಾ ಬಿಜೆಪಿಯ ವತಿಯಿಂದ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ಮಾಜಿ ಶಾಸಕ ಕೆ.ಜಿ.ಕುಮಾರಸ್ವಾಮಿ, ಜಿಲ್ಲಾ ಉಪಾಧ್ಯಕ್ಷರಾದ ಎಸ್.ಜ್ಞಾನೇಶ್ವರ್, ಎನ್.ಜಿ. ನಾಗರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಎಚ್.ಮಾಲತೇಶ್, ನಗರ ಬಿಜೆಪಿ ಅಧ್ಯಕ್ಷ ಮೋಹನ್ ರೆಡ್ಡಿ, ಜಿಲ್ಲಾ ವಕ್ತಾರ ಎಸ್.ಎಸ್. ಜ್ಯೋತಿಪ್ರಕಾಶ್, ಮುಖಂಡರಾದ ವೀರಭದ್ರಪ್ಪ ಪೂಜಾರ್, ಸುರೇಖಾ ಮುರಳೀಧರ್, ಸಂತೋಷ್ ಬಳ್ಳೆಕೆರೆ, ಕೆ.ವಿ.ಅಣ್ಣಪ್ಪ, ಚಂದ್ರಶೇಖರ್ ಮತ್ತಿತರರು ಪಾಲ್ಗೊಂಡಿದ್ದರು.