ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ ಭೇಟಿ ನೀಡಿದ್ದ ಕೇಂದ್ರ ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ. 
ಶಿವಮೊಗ್ಗ

ಲಾಭದತ್ತ ಭದ್ರಾವತಿ ವಿಐಎಸ್‌ಎಲ್ VISL

ಶಿವಮೊಗ್ಗ: ನಿರಂತರ ನಷ್ಟದ ಸುಳಿಗೆ ಸಿಲುಕಿದ್ದ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (ವಿಐಎಸ್‌ಎಲ್) ಇದೀಗ ಲಾಭದ ದಿಕ್ಕಿನತ್ತ ಹೊರಳಿದ್ದು, ಕಳೆದ ಮೂರು ತಿಂಗಳಿಂದ ಸತತ ಲಾಭದ ದಾರಿಯಲ್ಲಿ ಸಾಗಿದೆ ಎಂದು ಕೇಂದ್ರ ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಶಿವಮೊಗ್ಗ: ನಿರಂತರ ನಷ್ಟದ ಸುಳಿಗೆ ಸಿಲುಕಿದ್ದ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (ವಿಐಎಸ್‌ಎಲ್) ಇದೀಗ ಲಾಭದ ದಿಕ್ಕಿನತ್ತ ಹೊರಳಿದ್ದು, ಕಳೆದ ಮೂರು ತಿಂಗಳಿಂದ ಸತತ ಲಾಭದ ದಾರಿಯಲ್ಲಿ ಸಾಗಿದೆ ಎಂದು ಕೇಂದ್ರ ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಸುಧಾರಿತ ಆರ್ಥಿಕ ಕಾರ್ಯಕ್ಷಮತೆಯು ಅಲ್ಲಿನ ಕಾರ್ಮಿಕರ ನಿರಂತರ ಪ್ರಯತ್ನ, ಬದ್ಧತೆ ಮತ್ತು ಸಾಮೂಹಿಕ ಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತದ ಉಕ್ಕು ವಲಯ ಮತ್ತು ಅದರ ಸಂಸ್ಥೆಗಳನ್ನು ಬಲಪಡಿಸುವತ್ತ ಕೇಂದ್ರ ಸರ್ಕಾರ ನಿರಂತರವಾಗಿ ಗಮನಹರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕಾರ್ಖಾನೆಯ ಇತ್ತೀಚಿನ ಕಾರ್ಯಕ್ಷಮತೆ ಒಂದು ಉತ್ತೇಜಕ ಬೆಳವಣಿಗೆಯಾಗಿದ್ದು, ಘಟಕವು ಸತತ ಮೂರು ತಿಂಗಳು ನಿವ್ವಳ ಲಾಭವನ್ನು ದಾಖಲಿಸಿದೆ ಎಂದು ತಿಳಿಸಿದ್ದಾರೆ.

ಕಾರ್ಖಾನೆಯು ಜುಲೈನಲ್ಲಿ 0.33 ಕೋಟಿ ರೂ., ಆಗಸ್ಟ್‌ನಲ್ಲಿ 1.71 ಕೋಟಿ ರೂ. ಮತ್ತು ಸೆಪ್ಟೆಂಬರ್‌ನಲ್ಲಿ 1.96 ಕೋಟಿ ರೂ. ನಿವ್ವಳ ಲಾಭ ದಾಖಲಿಸಿದೆ. ಈ ಸತತ ತಿಂಗಳುಗಳ ಲಾಭ ಕಾರ್ಖಾನೆಯ ಆರ್ಥಿಕ ಕಾರ್ಯಕ್ಷಮತೆಯ ನಿರಂತರ ಸಕಾರಾತ್ಮಕ ಬೆಳವಣಿಗೆಯನ್ನು ಸೂಚಿಸುತ್ತದೆ. ಈ ಸುಧಾರಣೆಯು ವಿಶೇಷವಾಗಿ ಸೆಪ್ಟೆಂಬರ್‌ನಲ್ಲಿ ಎದ್ದು ಕಾಣುವಂತಿತ್ತು. 2025ರ ಇದೇ ಅವಧಿಯಲ್ಲಿದ್ದ 27.48 ಕೋಟಿ ರೂ.ಗೆ ಹೋಲಿಸಿದರೆ, 2026ರ ಸೆಪ್ಟೆಂಬರ್‌ನಲ್ಲಿ ಕಾರ್ಖಾನೆಯ ನಿವ್ವಳ ಆದಾಯ 51.87 ಕೋಟಿ ರೂ.ಗೆ ಏರಿಕೆಯಾಗಿದೆ. ಅಲ್ಲದೆ 2025ರ ಸೆಪ್ಟೆಂಬರ್‌ನಲ್ಲಿ ದಾಖಲಾಗಿದ್ದ 3.78 ಕೋಟಿ ರೂ. ನಷ್ಟಕ್ಕೆ ವ್ಯತಿರಿಕ್ತವಾಗಿ ಈ ವರ್ಷದ ಸೆಪ್ಟೆಂಬರ್‌ನಲ್ಲಿ ಘಟಕವು 1.96 ಕೋಟಿ ರೂ. ನಿವ್ವಳ ಲಾಭ ದಾಖಲಿಸಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಕಾರ್ಖಾನೆಯಲ್ಲಿ ಕಂಡುಬಂದಿರುವ ಪ್ರಗತಿಯು ನಮ್ಮ ಕಾರ್ಯಪಡೆಯ ಬದ್ಧತೆ ಮತ್ತು ಕಠಿಣ ಪರಿಶ್ರಮವನ್ನು ಪ್ರತಿಬಿಂಬಿಸುತ್ತದೆ. ಈ ಉತ್ತೇಜಕ ಕಾರ್ಯಕ್ಷಮತೆಗಾಗಿ ನಾನು ನಮ್ಮ ಕಾರ್ಮಿಕರನ್ನು ಮತ್ತು ಕಾರ್ಖಾನೆಯ ತಂಡವನ್ನು ಅಭಿನಂದಿಸುತ್ತೇನೆ ಎಂದು ಕೇಂದ್ರ ಸಚಿವರು ಶ್ಲಾಘಿಸಿದ್ದಾರೆೆ. ಅಲ್ಲದೆ ಕಾರ್ಖಾನೆಯ ಕಾರ್ಯಾಚರಣೆ ಕಾರ್ಯಕ್ಷಮತೆಯನ್ನು ಬಲಪಡಿಸುವ, ಹೆಚ್ಚು ಬಲವಾದ ಮತ್ತು ಸುಸ್ಥಿರ ಭವಿಷ್ಯ ರೂಪಿಸುವ ನಿರಂತರ ಪ್ರಯತ್ನಗಳ ಮೂಲಕ ಈ ಸಕಾರಾತ್ಮಕ ವೇಗವನ್ನು ಕಾಯ್ದುಕೊಳ್ಳಬೇಕು ಎಂದು ಒತ್ತಿ ಹೇಳಿದ್ದಾರೆ.

ಕಾರ್ಖಾನೆಯ ಒಟ್ಟಾರೆ ಆರ್ಥಿಕ ಸ್ಥಿತಿಯಲ್ಲೂ ಗಣನೀಯ ಸುಧಾರಣೆ ಕಂಡುಬಂದಿದೆ. ಕಳೆದ ಸೆಪ್ಟೆಂಬರ್‌ವರೆಗಿನ ಅವಧಿಯಲ್ಲಿ ಘಟಕದ ನಿವ್ವಳ ನಷ್ಟ 2.03 ಕೋಟಿ ರೂ. ನಷ್ಟಿತ್ತು. ಕಳೆದ ವರ್ಷದ ಇದೇ ಅವಧಿಯಲ್ಲಿ ಈ ನಷ್ಟವು 22.77 ಕೋಟಿ ರೂ.ನಷ್ಟಿದ್ದನ್ನು ಗಮನಿಸಿದರೆ ಇದು 20 ಕೋಟಿ ರೂ.ಗೂ ಹೆಚ್ಚಿನ ಸುಧಾರಣೆಯನ್ನು ಸೂಚಿಸುತ್ತದೆ.
ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಉಕ್ಕು ಸಚಿವ