ಸೊರಬದ ಮುರುಘಾ ಮಠದಲ್ಲಿ ಏರ್ಪಡಿಸಿದ್ದ ಶಿವಾನುಭವ ಕಾರ್ಯಕ್ರಮದಲ್ಲಿ ಕಾಶಿಯಾತ್ರೆ ಪೂರ್ಣಗೊಳಿಸಿದ ಭಕ್ತರನ್ನು ಮಠದಿಂದ ಸನ್ಮಾನಿಸಲಾಯಿತು. ಶ್ರೀ ಮಹಾಂತ ಸ್ವಾಮೀಜಿ, ಶಂಕರ್ ಶೇಟ್, ಡಾ. ಉಮೇಶ್ ಭದ್ರಾಪುರ ಇತರರಿದ್ದರು. 
ಶಿವಮೊಗ್ಗ

ಪುಣ್ಯಸ್ಥಳಗಳ ದರ್ಶನಕ್ಕೆ ಶ್ರೇಷ್ಠ ಕಾಲ

ಸೊರಬ: ಸನಾತನ ಹಿಂದೂ ಧರ್ಮದಲ್ಲಿ ಅಧಿಕ ಮಾಸಕ್ಕೆ ಹೆಚ್ಚಿನ ಮಹತ್ವವಿದೆ. ಪುಣ್ಯಸ್ಥಳಗಳ ದರ್ಶನ ಹಾಗೂ ಯಾತ್ರೆಯಿಂದ ಜೀವನ ಪಾವನ ಮಾಡಿಕೊಳ್ಳಲು ಶ್ರೇಷ್ಠ ಕಾಲ ಎಂದು ಜಡೆ ಸಂಸ್ಥಾನ ಮಠದ ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.
ಮುರುಘಾ ಮಠದಲ್ಲಿ ಅಧಿಕ ಕಾರ ಹುಣ್ಣಿಮೆ ಪ್ರಯುಕ್ತ ಏರ್ಪಡಿಸಿದ್ದ 243ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಅಧಿಕ ಮಾಸದಲ್ಲಿ ಸಾಮಾನ್ಯವಾಗಿ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಸಂಪ್ರದಾಯವಿದೆ. ಜೀವನದಲ್ಲಿ ನೆಮ್ಮದಿ ಬದುಕು ನಡೆಸಲು ಸಕಾಲವಾಗಿದೆ. ದಾನ, ಧರ್ಮ, ಪರೋಪಕಾರ ಸದಾ ನಮ್ಮನ್ನು ಕಾಯಲಿದೆ ಎಂದರು.
ಜಿಲ್ಲೆಯಲ್ಲಿ 9 ಮಠಗಳಿದ್ದು, ಎಲ್ಲ ಮಠಗಳು ತ್ರಿವಿಧ ದಾಸೋಹದ ಮೂಲಕ ಸಮಾಜವನ್ನು ಗಟ್ಟಿಗೊಳಿಸುವ ಕೆಲಸ ಮಾಡುತ್ತಿವೆ. ನಾಡಿನಲ್ಲಿ ಶಿವಮೊಗ್ಗ ಜಿಲ್ಲೆ ಧಾರ್ಮಿಕ, ಸಾಸ್ಕೃತಿಕ, ಕಲೆ, ಸಾಹಿತ್ಯ ಹಾಗೂ ರಾಜಕೀಯವಾಗಿ ಶ್ರೀಮಂತವಾಗಿದೆ. ಪ್ರಕೃತಿ ನೀಡಿದ ಎಲ್ಲ ಸಂಪತ್ತನ್ನು ಸದ್ಬಳಕೆ ಮಾಡಿಕೊಂಡು ಸಾರ್ಥಕ ಬದುಕು ಕಟ್ಟಿಕೊಳ್ಳಬೇಕು ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷ ಡಿ.ಶಂಕರ್ ಶೇಟ್ ಮಾತನಾಡಿ, ಶಿವಾನುಭವ ಕಾರ್ಯಕ್ರಮ ಗುರು ಪರಂಪರೆ ಅನುಭವವಾಗಿ ಜೀವನವನ್ನು ಉತ್ತಮಪಡಿಸಿಕೊಳ್ಳಲು ಹಾಗೂ ಪರಿವರ್ತನೆ ಮೂಲಕ ಬದುಕಿನ ಸಾರ್ಥಕ್ಯ ಹೊಂದಲು ಸಾಧ್ಯವಾಗುತ್ತದೆ ಎಂದರು.
ಸರ್ಕಾರಿ ಆಸ್ಪತ್ರೆ ಮಕ್ಕಳ ವೈದ್ಯ ಚಂದನಕುಮಾರ್, ಅರ್ಚನಾ ರಾಘವೇಂದ್ರ ಅವರನ್ನು ಸನ್ಮಾನಿಸಲಾಯಿತು. ರಾಮಣ್ಣ ಭಜಂತ್ರಿ ಶಹನಾಯಿ ವಾದ್ಯ ನುಡಿಸಿದರು. ಉಪನ್ಯಾಸಕ ಡಾ. ಉಮೇಶ್ ಭದ್ರಾಪುರ, ಅಕ್ಕನ ಬಳಗದ ಅಧ್ಯಕ್ಷೆ ರೇಖಾ ಜಗದೀಶ್, ರೇಣುಕಮ್ಮ ಗೌಳಿ, ಮಹೇಶ್ ಪಾಟೀಲ್, ನಾಗರತ್ನಾ, ಲಲಿತಾ, ಸಾವಿತ್ರಮ್ಮ ಇತರರಿದ್ದರು.