ಗೋಪಾಲಕೃಷ್ಣ ಬೇಳೂರು, ಸಾಗರ ಕ್ಷೇತ್ರದ ಶಾಸಕ 
ಶಿವಮೊಗ್ಗ

ಬೇಳೂರು ದೆಹಲಿ ದಂಡಯಾತ್ರೆ I beluru delhi

ಪ್ರಮುಖ ಮುಖ್ಯಾಂಶಗಳು

  • ಸಚಿವ ಸ್ಥಾನಕ್ಕಾಗಿ ಶಾಸಕ ಗೋಪಾಲಕೃಷ್ಣ ಪ್ರಯತ್ನ
  • ರಾಷ್ಟ್ರ ರಾಜಧಾನಿಯಲ್ಲೇ ಠಿಕಾಣಿ
ಅರವಿಂದ ಅಕ್ಲಾಪುರ ಶಿವಮೊಗ್ಗ
ಎರಡು ಮೂರು ದಿನದಿಂದ ರಾಜ್ಯದ ಕಾಂಗ್ರೆಸ್ ಶಾಸಕರು ದೆಹಲಿ (delhi) ದಂಡಯಾತ್ರೆಯಲ್ಲಿದ್ದಾರೆ. ಇವರಲ್ಲಿ ಪ್ರಮುಖವಾಗಿ ಕಾಣಿಸಿದವರು ಸಾಗರದ ಶಾಸಕ ಗೋಪಾಲಕೃಷ್ಣ ಬೇಳೂರು.(beluru) ತಮ್ಮ ರಾಜಕೀಯ ಗುರು ಬಂಗಾರಪ್ಪ (bangarappa) ಅವರಂತೆ ಸಕಾಲದಲ್ಲಿ ಸೂಕ್ತ ಪಟ್ಟು ಹಾಕುವಲ್ಲಿ ಬೇಳೂರು ಎಂದೂ ಹಿಂದೆ ಬಿದ್ದವರಲ್ಲ.
ಆರಂಭದಿಂದಲೂ ಬೇಳೂರು ರಾಜಕೀಯ ಗಮನಿಸಿದವರಿಗೆ ಅವರ ದೆಹಲಿ ಯಾತ್ರೆ, ಹೈಕಮಾಂಡ್ ನಾಯಕರ ಭೇಟಿ ಯಾವುದೂ ಹೊಸದಾಗಿ ಕಾಣಿಸಲು ಸಾಧ್ಯವೇ ಇಲ್ಲ. ಏಕೆಂದರೆ ಕಾಲದಿಂದ ಕಾಲಕ್ಕೆ ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡುತ್ತ, ಮನಸ್ಸಿಗೆ ಬಂದಿದ್ದನ್ನು ಹೇಳುತ್ತ ಬಯಸಿದ್ದನ್ನು ಪಡೆದುಕೊಂಡವರು ಬೇಳೂರು.
ಯಡಿಯೂರಪ್ಪ ಸಿಎಂ ಆದ ಸಂದರ್ಭದಿಂದ ಹಿಡಿದು ಪ್ರಸ್ತುತ ಸಿದ್ದರಾಮಯ್ಯ ಅವಧಿವರೆಗೆ ಬೇಳೂರು ರಾಜಕೀಯ ನಡೆ ವಿಶೇಷವಾಗಿದೆ. ಯಡಿಯೂರಪ್ಪ ಸಿಎಂ ಆಗಿದ್ದಾಗ ಅಂದಿನ ಬಿಜೆಪಿ ಶಾಸಕರು ನಡೆಸಿದ ರೆಸಾರ್ಟ್ ರಾಜಕೀಯದ ಮುನ್ನೆಲೆಯಲ್ಲಿದ್ದವರು ಗೋಪಾಲಕೃಷ್ಣ.
2008ರಿಂದ 2013ರವರೆಗೆ ಬಿಜೆಪಿ ಸರ್ಕಾರವಿದ್ದಾಗ ಎರಡನೇ ಬಾರಿಗೆ ಶಾಸಕರಾಗಿದ್ದ ಗೋಪಾಲಕೃಷ್ಣ ಬೇಳೂರು ಸಚಿವರಾಗಲು ಎಲ್ಲ ರೀತಿಯ ಪ್ರಯತ್ನ ಮಾಡಿದ್ದರು. ಒತ್ತಡ ತಂತ್ರಗಳನ್ನು ಸಾಕಷ್ಟು ಬಳಸಿದ್ದರು. ಆದರೆ ಅದು ಫಲ ನೀಡಲಿಲ್ಲ. ಆದರೆ ಈಗ ದೊಡ್ಡ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಆದರೆ ಅಂದುಕೊಂಡಷ್ಟು ಸುಲಭವಾಗಿ ಫಲ ದೊರೆಯುವ ಸಾಧ್ಯತೆಗಳಿಲ್ಲ.

ಮಂತ್ರಿಗಿರಿ ಸಿಗದಿದ್ದರೂ ಸ್ಥಾನಮಾನ

ರಾಜ್ಯದಲ್ಲಿ 2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಆರಂಭದಲ್ಲಿ ಮಧು ಬಂಗಾರಪ್ಪ ಅವರೊಂದಿಗೆ ಪದೇಪದೆ ವೇದಿಕೆ ಹಂಚಿಕೊಳ್ಳುತ್ತಿದ್ದ ಬೇಳೂರು ಕ್ರಮೇಣ ಮುನಿಸಿಕೊಂಡಿದ್ದರು. ಅದರಲ್ಲೂ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ಘೋಷಣೆ ವಿಳಂಬ ಆಗುತ್ತಿದ್ದಂತೆ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಬಹಿರಂಗವಾಗಿ ಮಾತನಾಡತೊಡಗಿದ್ದರು. ಪರೋಕ್ಷವಾಗಿ ಬಿ.ಕೆ.ಸಂಗಮೇಶ್ವರ್ ಪರ ಬ್ಯಾಟ್ ಬೀಸುತ್ತಾ ಹೊಸ ದಾಳ ಉರುಳಿಸಿದ್ದರು. ನನಗೆ ಯಾವ ಅಧಿಕಾರ ನೀಡದಿದ್ದರೂ ತೊಂದರೆ ಇಲ್ಲ. ನಾನು ಲೋಕಸಭಾ ಟಿಕೆಟ್ ಆಕಾಂಕ್ಷಿ. ಬಿಜೆಪಿ ಅಭ್ಯರ್ಥಿ ವಿರುದ್ಧ ನಾನೊಬ್ಬನೇ ಪ್ರಬಲ ಸ್ಪರ್ಧಿ ಎನ್ನತೊಡಗಿದರು. ಸಹೋದರಿ ಗೀತಾ ಶಿವರಾಜ್‌ಕುಮಾರ್ ಅವರಿಗೆ ಶಿವಮೊಗ್ಗ ಲೋಕಸಭಾ ಟಿಕೆಟ್ ಕೊಡಿಸಬೇಕೆಂಬ ಸಚಿವ ಮಧು ಬಂಗಾರಪ್ಪ ಅವರಿಗೆ ಪರೋಕ್ಷವಾಗಿ ಸಂದೇಶ ರವಾನಿಸಿದ ಬೇಳೂರು ಅಂತೂ ನಿಗಮವೊಂದರ ಅಧ್ಯಕ್ಷ ಸ್ಥಾನ ಪಡೆಯುವಲ್ಲಿ ಸಫಲರಾದರು. ಅದೂ ಸಚಿವ ಸಂಪುಟ ಸ್ಥಾನಮಾನದೊಂದಿಗೆ. ಮಂತ್ರಿಯಾಗದೆ ಇದ್ದರೂ ಸಚಿವರಿಗೆ ದೊರೆಯುವ ಸ್ಥಾನಮಾನ ಅವರಿಗೆ ಸಿಕ್ಕಂತಾಯಿತು.

ಮಧು ವಿರುದ್ಧವೇ ಗರಂ

ಗೋಪಾಲಕೃಷ್ಣ ಬೇಳೂರು ಯಾವ ಸಂದರ್ಭದಲ್ಲಿ ಯಾರೊಂದಿಗೆ ಯಾವ ರೀತಿ ವರ್ತಿಸುತ್ತಾರೆ ಎಂದು ಅಂದಾಜಿಸುವುದೇ ಕಷ್ಟ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಅಧಿಕಾರದ ಅಹಂ, ಪಿತ್ಥ ತಲೆಗೇರಿದೆ. ಅವರು ಮಾಜಿ ಸಿಎಂ ಮಗ. ಅವರ ತಂದೆ ಎಲ್ಲರನ್ನೂ ವಿಶ್ವಾಸದಿಂದ ಕಾಣುತ್ತಿದ್ದರು. ನಾನೂ ಬಂಗಾರಪ್ಪ ಅವರ ಗರಡಿಯಲ್ಲಿ ಬೆಳೆದವನು. ನನಗೂ ರಾಜಕೀಯ ಹಿರಿತನವಿದೆ. ನಮ್ಮ ಸರ್ಕಾರದಲ್ಲಿರುವ ಬೇರೆ ಜಿಲ್ಲೆಗಳ ಉಸ್ತುವಾರಿ ಸಚಿವರು ಎಲ್ಲ ಶಾಸಕರನ್ನೂ ಗೌರವದಿಂದ ನಡೆಸಿಕೊಳ್ಳುತ್ತಿದ್ದಾರೆ. ಆದರೆ ನಮ್ಮ ಜಿಲ್ಲೆಯ ಪರಿಸ್ಥಿತಿಯೇ ಬೇರೆ ಇದೆ ಎಂದು ಮಧು ಬಂಗಾರಪ್ಪ ವಿರುದ್ಧ ಒಮ್ಮೆ ಬೇಳೂರು ಗೋಪಾಲಕೃಷ್ಣ ಕಿಡಿಕಾರಿದ್ದರು. ನಂತರ ಅವರಿಬ್ಬರ ನಡುವೆ ತಾತ್ಕಾಲಿಕ ತೇಪೆ ಬಿದ್ದಿತ್ತು.

ಸದಾ ರೆಬೆಲ್ ಗುಣ

ಬಿಜೆಪಿಯಿಂದ ಗೆದ್ದಿದ್ದರೂ ವಿಧಾನಸೌಧದ ಎದುರು ಸಮಾಜವಾದಿ ಪಕ್ಷದ ಚಿಹ್ನೆಯಾಗಿದ್ದ ಸೈಕಲ್ ಏರಿ ಗಮನಸೆಳೆದಿದ್ದವರು ಬೇಳೂರು. 2013ರ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಸಿಗದೆ ಇದ್ದಾಗ ಜೆಡಿಎಸ್ ಸೇರ್ಪಡೆಯಾಗಿ ಆ ಪಕ್ಷದಿಂದಲೇ ಸ್ಪರ್ಧಿಸಿದ್ದರು. ಹೀಗೆ ಸದಾ ರೆಬೆಲ್ ಆಗುವುದು ಬೇಳೂರು ಗುಣ. 2018ರ ಚುನಾವಣೆಯಲ್ಲಿ ಕಾಗೋಡು ಜತೆಗೆ ಬೆಂಬಲವಾಗಿ ನಿಂತು ಅವರನ್ನು ಗೆಲ್ಲಿಸಿಕೊಳ್ಳುವ ಮೂಲಕ ಬಿಜೆಪಿಗೆ ತಿರುಗೇಟು ನೀಡಿದ್ದರು. ನಾನು ಹಿರಿಯ ಶಾಸಕ, ಜಿಲ್ಲಾ ಉಸ್ತುವಾರಿ ಸಚಿವರಿಗಿಂತಲೂ ಹೆಚ್ಚಿನ ಚುನಾವಣೆಗೆ ಸ್ಪರ್ಧಿಸಿದ್ದೇನೆ ಹಾಗೂ ಗೆದ್ದಿದ್ದೇನೆ ಎನ್ನುವ ಬೇಳೂರಿಗೆ ಸದ್ಯ ಸಚಿವ ಸ್ಥಾನ ಮಾತ್ರ ಗಗನಕುಸುಮ.

ಹಾದಿ ಸುಗಮವಾಗಿಲ್ಲ

ಗೋಪಾಲಕೃಷ್ಣ ಬೇಳೂರು ಬಯಸಿರುವ ಸಚಿವ ಸ್ಥಾನದ ಹಾದಿ ಅವರಂದುಕೊಂಡಷ್ಟು ಸುಗಮವಾಗಿಲ್ಲ. ಅವರು ಮೂರು ಬಾರಿ ಶಾಸಕರಾಗಿ ಹಿರಿತನ ಹೊಂದಿದ್ದರೂ ಗಾಡ್‌ಫಾದರ್ ಬೆಂಬಲವಿಲ್ಲ. ಪಕ್ಷದ ವೇದಿಕೆಯಲ್ಲೂ ಅವರನ್ನು ವೈಯಕ್ತಿಕವಾಗಿ ಬೆಂಬಲಿಸುವ ನಾಯಕರಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿರುವ ಈಡಿಗ ಸಮುದಾಯ ಶಾಸಕರ ನಡುವೆಯೇ ಸಚಿವ ಸ್ಥಾನಕ್ಕೆ ಪೈಪೋಟಿ ಇದೆ. ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಮಂತ್ರಿಗಿರಿ ಮೇಲೆ ಆರಂಭದಿಂದಲೂ ಕಣ್ಣಿಟ್ಟಿದ್ದಾರೆ. ಹಾಲಿ ಸಚಿವ ಮಧು ಬಂಗಾರಪ್ಪ ಅವರಿಗೆ ತಂದೆ ಹೆಸರಿನ ರಕ್ಷಣೆ ಇದೆ. ಚಿತ್ರನಟ ಶಿವರಾಜ್ ಕುಮಾರ್ ಶ್ರೀರಕ್ಷೆಯೂ ಇದೆ. ಸಚಿವ ಸಂಪುಟದಲ್ಲೇ ಏನೇ ಬದಲಾವಣೆಗಳಾದರೂ ಮಧು ಬಂಗಾರಪ್ಪ ಅವರನ್ನು ಕೈಬಿಟ್ಟು ಬೇಳೂರು ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತದೆ ಎಂಬುದನ್ನು ನಿಶ್ಚಿತವಾಗಿ ಹೇಳುವುದು ಕಷ್ಟ.
"

ಹಿರಿಯ ಶಾಸಕರ ತಂಡದ ಮೂಲಕ ಈಗಾಗಲೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ನಮ್ಮ ಅಹವಾಲು ಸಲ್ಲಿಸಿದ್ದೇವೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇನ್ನು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿಯಾಗಿ ಸಚಿವ ಸ್ಥಾನಕ್ಕಾಗಿ ಹಕ್ಕೊತ್ತಾಯ ಮಂಡಿಸಲಾಗುವುದು.