ಟಿಂಬರ್ ಲಾರಿಗಳ ಸಂಚಾರದಿಂದ ಗದ್ದೆಯಂತಾಗಿರುವ ಹೊಸನಗರ ತಾಲೂಕಿನ ಹೆಬ್ಬುರಳಿ-ಬೆಕ್ಕೋಡಿ ಲಾಂಚ್ ರಸ್ತೆ.
ಹೊಸನಗರ: ತಾಲೂಕಿನ ಹೆಬ್ಬುರಳಿ ಗ್ರಾಮದಲ್ಲಿ ಟಿಂಬರ್ ಲಾರಿಗಳ ಸಂಚಾರದಿಂದ ರಸ್ತೆ ಕೆಸರುಮಯವಾದ ಕಾರಣ ಆಕ್ರೋಶಗೊಂಡ ಗ್ರಾಮಸ್ಥರು ಬುಧವಾರ ಲಾರಿಯನ್ನು ತಡೆದು ಪ್ರತಿಭಟನೆ ನಡೆಸಿದರು.
ರಾಣೆಬೆನ್ನೂರು- ಬೈಂದೂರು ರಾಷ್ಟ್ರೀಯ ಹೆದ್ದಾರಿ ಬೈಪಾಸ್‌ಗಾಗಿ ಕಡಿತಲೆ ಮಾಡಿದ ಮರಗಳನ್ನು ಅರಣ್ಯ ಇಲಾಖೆ ಲಾರಿಗಳ ಮೂಲಕ ಸಾಗಿಸುತ್ತಿದೆ. ನಿರಂತರ ಸಂಚಾರದಿಂದ ಬೆಕ್ಕೋಡಿ ಲಾಂಚ್ ರಸ್ತೆಯ ಮೂರ್ನಾಲ್ಕು ಭಾಗದಲ್ಲಿ ಹೊಂಡ, ಗುಂಡಿಗಳಾಗಿದ್ದು ಜನರು ಓಡಾಡದಂತಾಗಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.
ಕೊಡಸೆ, ಬೆನ್ನಟ್ಟೆ, ಕೆಳಗಳಲೆ, ಕೊಡೆಬೈಲು, ಸುಳುಗೋಡು, ತೆಂಗಿನಕಟ್ಟೆ, ಬೆಕ್ಕೋಡಿ ಗ್ರಾಮದ 60ಕ್ಕೂ ಹೆಚ್ಚು ಕುಟುಂಬಗಳಿಗೆ ಲಾಂಚ್ ತಲುಪಲು ಇರುವ ಏಕೈಕ ರಸ್ತೆಯಾಗಿದ. ಇದೀಗ ರಸ್ತೆ ಕೆಸರುಮಯವಾಗಿದೆ. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಗುತ್ತಿಗೆದಾರರು ಸ್ಥಳಕ್ಕೆ ಬಾರದೆ ನುಣುಚಿಕೊಳ್ಳುತ್ತಿದ್ದಾರೆ. ಇರುವ ಏಕೈಕ ರಸ್ತೆಯನ್ನೂ ಹಾಳುಗೆಡವಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಗರ ವಲಯ ಅರಣ್ಯ ಇಲಾಖೆ ಅಧಿಕಾರಿ ಯೋಗರಾಜ್ ಭೇಟಿ ನೀಡಿ ಗ್ರಾಮಸ್ಥರನ್ನು ಸಮಾಧಾನಪಡಿಸಲು ಯತ್ನಿಸಿದರು. ರಸ್ತೆಯನ್ನು ಗ್ರಾಮಸ್ಥರೇ ಮಳೆಗಾಲದಲ್ಲಿ ಸರಿಪಡಿಸಿ ಓಡಾತ್ತಿದ್ದೆವು. ಇದೀಗ ಟಿಂಬರ್ ಲಾರಿ ಸಂಚಾರದಿಂದ ರಸ್ತೆ ಸಂಪೂರ್ಣ ಹಾಳಾಗಿದೆ. ಸರಿ ಮಾಡಿಕೊಡುವ ತನಕ ಲಾರಿಗಳನ್ನು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಇದಕ್ಕೆ ಸ್ಪಂದಿಸಿದ ಅರಣ್ಯಾಧಿಕಾರಿ ನಾಳೆ ರಸ್ತೆ ದುರಸ್ತಿ ಮಾಡಿಕೊಡುವ ಭರವಸೆ ನೀಡಿ, ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು.
ಗ್ರಾಪಂ ಮಾಜಿ ಸದಸ್ಯ ಕೊಡಸೆ ಚಂದ್ರಪ್ಪ, ಗ್ರಾಮಸ್ಥರಾದ ಹೆಬ್ಬುರಳಿ ಚಂದ್ರಪ್ಪ, ಗಿರೀಶ್, ರತ್ನಾಕರ ಶೆಟ್ಟಿ, ಭದ್ರಪ್ಪ, ನವೀನ್, ವೆಂಕಟೇಶ್, ನಾಗರಾಜ್ ಇತರರಿದ್ದರು.