ಶಿಕಾರಿಪುರದಲ್ಲಿ ಶಾಸಕ ಬಿ.ವೈ.ವಿಜಯೇಂದ್ರ ಅಧ್ಯಕ್ಷತೆಯಲ್ಲಿ ನಗರ ಆಶ್ರಯ ಸಮಿತಿ ಸಭೆ ನಡೆಯಿತು. ರೇಣುಕಯ್ಯ, ಮಾಲತೇಶ್, ವಾಣಿ, ನಾಗರಾಜ್ ಇತರರಿದ್ದರು.
ಶಿಕಾರಿಪುರ: ನಗರ ಪ್ರದೇಶದ ವಸತಿ ರಹಿತರಿಗೆ ಹಾಗೂ ಬಡವರಿಗೆ ಮನೆ ಹಾಗೂ ನಿವೇಶನ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಗರ ಆಶ್ರಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ನಗರ ವ್ಯಾಪ್ತಿಯಲ್ಲಿ ಆಶ್ರಯ ಯೋಜನೆಯಡಿ ಸಲ್ಲಿಕೆಯಾಗಿರುವ ಅರ್ಜಿಗಳ ಪರಿಶೀಲನೆ, ಹೊಸ ನಿವೇಶನಗಳ ಗುರುತಿಸುವಿಕೆ ಹಾಗೂ ಮೂಲ ಸೌಕರ್ಯಗಳ ಕುರಿತು ಗಂಭೀರವಾಗಿ ಪರಿಗಣಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಸರ್ಕಾರದ ವಸತಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಯಾವ ಕಾರಣಕ್ಕೂ ಅನರ್ಹರಿಗೆ ಮನೆಗಳು ಹಂಚಿಕೆಯಾಗದಂತೆ ಅಧಿಕಾರಿಗಳು ಅತ್ಯಂತ ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು. ಶಿಕಾರಿಪುರ ಪಟ್ಟಣ ಬೆಳೆಯುತ್ತಿರುವ ವೇಗಕ್ಕೆ ತಕ್ಕಂತೆ ಬಡಜನರ ವಸತಿ ಸಮಸ್ಯೆಯೂ ಹೆಚ್ಚಾಗುತ್ತಿದೆ. ಇದನ್ನು ನಿವಾರಿಸಲು ತಾಲೂಕು ಆಡಳಿತ ಹಾಗೂ ಪುರಸಭೆ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಬೇಕು ಎಂದರು.
ಗುರುತಿಸಲಾದ ಆಶ್ರಯ ಲೇಔಟ್‌ಗಳಲ್ಲಿ ರಸ್ತೆ, ಕುಡಿಯುವ ನೀರು, ವಿದ್ಯುತ್ ಹಾಗೂ ಚರಂಡಿ ವ್ಯವಸ್ಥೆ ಮೂಲ ಸೌಕರ್ಯಗಳನ್ನು ಪೂರೈಸಬೇಕು. ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರತಿ ಅರ್ಜಿಯನ್ನೂ ಜಾಗ್ರತೆಯಿಂದ ಪರಿಶೀಲಿಸಿ, ಶೀಘ್ರವೇ ಅರ್ಹರ ಪಟ್ಟಿಯನ್ನು ಅಂತಿಮಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ವಿವಿಧ ವಸತಿ ಯೋಜನೆಗಳಡಿ ಫಲಾನುಭವಿಗಳಿಗೆ ವಿತರಿಸಿರುವ ನಿವೇಶನ ಹಕ್ಕುಪತ್ರಗಳಲ್ಲಿನ ಲೋಪಗಳನ್ನು ಸರಿಪಡಿಸಿ, ಖಾತೆ ದಾಖಲು, ನಮೂನೆ-3 (ಇ-ಸ್ವತ್ತು) ನೀಡುವಲ್ಲಿ ಎದುರಾಗುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು.
ಆಶ್ರಯ ಸಮಿತಿ ಸದಸ್ಯರಾದ ರೇಣುಕಯ್ಯ, ಮಾಲತೇಶ್, ಮುಜೀಬ್, ತಹಸೀಲ್ದಾರ್ ವಾಣಿ, ತಾಪಂ ಇಒ ನಾಗರಾಜ್, ಪುರಸಭೆ ಮುಖ್ಯಾಧಿಕಾರಿ ಭರತ್ ಇತರರಿದ್ದರು.