ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ 
ಶಿವಮೊಗ್ಗ

ಓಡಿ ಖಾತೆಯಿಂದ 3.89 ಲಕ್ಷ ರೂ. ಕಡಿತ ಮಾಡಿದ್ದ ಬ್ಯಾಂಕ್‌ಗೆ ದಂಡ | Consumer Court

ಪ್ರಮುಖ ಮುಖ್ಯಾಂಶಗಳು

  • ಮುನ್ಸೂಚನೆ ನೀಡದೇ 3,89,554 ರೂ. ಕಡಿತ ಮಾಡಿದ್ದ ಬ್ಯಾಂಕ್‌
  • ಎರಡು ದಿನದೊಳಗೆ ಹಣ ಹಿಂದಿರುಗಿಸುವುದಾಗಿ ತಿಳಿಸಿದ್ದ ವ್ಯವಸ್ಥಾಪಕ
  • ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದ ಧನಂಜಯ
ಶಿವಮೊಗ್ಗ: ಓಡಿ(ಓವರ್‌ಡ್ರಾಫ್ಟ್)(Overdraft) ಖಾತೆಯಿಂದ ಯಾವುದೇ ಮುನ್ಸೂಚನೆ ನೀಡದೇ 3.89 ಲಕ್ಷ ರೂ. ಕಡಿತ ಮಾಡಿದ್ದ ಬ್ಯಾಂಕ್‌ಗೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ದಂಡ ವಿಧಿಸಿದ್ದು, ವಾರ್ಷಿಕ ಶೇ. 9ರ ಬಡ್ಡಿ ಸೇರಿಸಿ ಗ್ರಾಹಕನಿಗೆ ಪೂರ್ಣ ಹಣ ಪಾವತಿಸುವಂತೆ ಆದೇಶಿಸಿದೆ.
ಹೊಸನಗರ ತಾಲೂಕಿನ ಎಂ.ಗುಡ್ಡೆಕೊಪ್ಪದ ಎಂ.ವಿ.ಧನಂಜಯ ಎಂಬುವರು ಕೆನರಾ ಬ್ಯಾಂಕ್(Canara Bank) ಹೊಸನಗರ ಶಾಖೆ ಹೊಂದಿದ್ದು, ಓಡಿ ಖಾತೆ ಮೂಲಕ 2.80 ಲಕ್ಷ ರೂ.ನ ಸೌಲಭ್ಯ ಪಡೆದಿದ್ದರು. 2024ರ ಜೂನ್‌ನಲ್ಲಿ ಯಾವುದೇ ಮುನ್ಸೂಚನೆ ನೀಡದೇ ಬ್ಯಾಂಕ್ ಧನಂಜಯ ಅವರ ಓಡಿ ಖಾತೆಯಿಂದ 3,89,544 ರೂ. ಕಡಿತಗೊಳಿಸಿತ್ತು. 
ಈ ವಿಷಯವನ್ನು ಧನಂಜಯ ಅವರು ಬ್ಯಾಂಕ್ ವ್ಯವಸ್ಥಾಪಕ(Bank manager)ರ ಗಮನಕ್ಕೆ ತಂದಿದ್ದು, ಎರಡು ದಿನದೊಳಗೆ ಹಣ ಹಿಂದಿರುಗಿಸುವುದಾಗಿ ತಿಳಿಸಿದ್ದರು. ಆದರೆ ಯಾವುದೇ ಹಣ ಹಿಂದಿರುಗಿಸಿರಲಿಲ್ಲ. ಈ ಬಗ್ಗೆ 2025ರಲ್ಲಿ ಧನಂಜಯ ಅವರು ಲೀಗಲ್ ನೋಟಿಸ್(Legal Notice) ಅನ್ನು ಬ್ಯಾಂಕ್‌ಗೆ ನೀಡಿದ್ದರು. ಅದಕ್ಕೂ ಬ್ಯಾಂಕ್ ಪ್ರತ್ಯುತ್ತರ ನೀಡದೆ ಸೇವಾನ್ಯೂನತೆ ಎಸಗಿತ್ತು. ಹಾಗಾಗಿ ಗ್ರಾಹಕರ ಆಯೋಗಕ್ಕೆ ಧನಂಜಯ ದೂರು ನೀಡಿದ್ದರು. 
ಎರಡೂ ಪಕ್ಷಗಾರರು(ಗ್ರಾಹಕ-ಬ್ಯಾಂಕ್) ಸಲ್ಲಿಸಿದ ಪ್ರಮಾಣಪತ್ರ ಮತ್ತು ದಾಖಲಾತಿ ಪರಿಶೀಲಿಸಿದ ಆಯೋಗದ ಅಧ್ಯಕ್ಷ ಟಿ.ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಅವರನ್ನೊಳಗೊಂಡ ಪೀಠ ಒಡಿ ಖಾತೆಯಿಂದ ಹಣ ಕಡಿಗೊಳಿಸಿ ಹಿಂತಿರುಗಿಸದೆ ಸೇವಾನ್ಯೂನ್ಯತೆ(Inferiority) ಎಸಗಿದೆ ಎಂದು ತೀರ್ಮಾನಿಸಿ ದೂರನ್ನು ಭಾಗಶಃ ಪುರಸ್ಕರಿಸಿತ್ತು.
ಅಲ್ಲದೆ, ಓಡಿ ಖಾತೆಯಲ್ಲಿದ್ದ 3,89,554 ರೂ.ಗೆ 2025ರ ಫೆ.18ರಿಂದ ಅನ್ವಯವಾಗುವಂತೆ ವಾರ್ಷಿಕ ಶೇ. 9ರ ಬಡ್ಡಿ ಸೇರಿಸಿ ಪೂರ್ಣ ಹಣ ಪಾವತಿಸಬೇಕು. ಮಾನಸಿಕ ವೇದನೆಗೆ ಪರಿಹಾರವಾಗಿ ಒಂದು ಲಕ್ಷ ರೂ. ಮತ್ತು ದೂರಿನ ಖರ್ಚು ವೆಚ್ಚಕ್ಕಾಗಿ 10 ಸಾವಿರ ರೂ. ಅನ್ನು ಆದೇಶವಾದ 45 ದಿನಗಳೊಳಗಾಗಿ ಪಾವತಿಸಬೇಕು. ತಪ್ಪಿದ್ದಲ್ಲಿ ವಾರ್ಷಿಕ ಶೇ. 12ರ ಬಡ್ಡಿಯನ್ನು ಸೇರಿಸಿ ಪೂರ್ಣ ಹಣ ಪಾವತಿಸುವವರೆಗೆ ನೀಡುವಂತೆ ಬ್ಯಾಂಕ್‌ಗೆ ಪೀಠ ಆದೇಶಿಸಿದೆ ಎಂದು ಆಯೋಗದ ಸಹಾಯಕ ರಿಜಿಸ್ಟ್ರಾರ್ ಎಂ.ಟಿ.ಗಂಗಾಧರ ನಾಯ್ಕ್ ತಿಳಿಸಿದ್ದಾರೆ.