ನಗರದ ಆಲ್ಕೊಳ ವೃತ್ತದಲ್ಲಿ ಮಾಜಿ ಸಿಎಂ ಎಸ್.ಬಂಗಾರಪ್ಪ ಹೆಸರಿನ ನಾಮಫಲಕವನ್ನು ಸಚಿವ ಮಧು ಬಂಗಾರಪ್ಪ ಅನಾವರಣಗೊಳಿಸಿದರು. ಎಸ್.ಎನ್.ಚನ್ನಬಸಪ್ಪ, ಬಲ್ಕೀಶ್ ಬಾನು, ಚೇತನ್ ಗೌಡ, ಜಿ.ಪಲ್ಲವಿ, ಸಿ.ಎಸ್.ಚಂದ್ರಭೂಪಾಲ, ಡಾ. ಜಿ.ಡಿ.ನಾರಾಯಣಪ್ಪ, ಕಲಗೋಡು ರತ್ನಾಕರ್, ಎಸ್.ಪಿ.ಶೇಷಾದ್ರಿ, ಮಧು, ಪ್ರಭುಲಿಂಗ ಕವಳಿಕಟ್ಟಿ, ಬಿ.ನಿಖಿಲ್ ಇದ್ದರು.
- ಆಲ್ಕೊಳ ವೃತ್ತದಿಂದ‘ಎಸ್.ಬಂಗಾರಪ್ಪ’ನಾಮಫಲಕ ಉದ್ಘಾಟನೆ
- ಆಶ್ರಯ, ಆರಾಧನಾ ಹೀಗೆ ಹತ್ತು ಹಲವಾರು ಯೋಜನೆ ನೀಡಿದ್ದ ಬಂಗಾರಪ್ಪ
- ಶಿವಮೊಗ್ಗದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿಕೆ
ಶಿವಮೊಗ್ಗ: ನಾಡಿನ ಬಡವರ ಶ್ರೇಯೋಭಿವೃದ್ಧಿಗಾಗಿ ತಂದ ಅನೇಕ ಯೋಜನೆಗಳಲ್ಲಿ ನಮ್ಮ ತಂದೆ, ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ(S.Bangarappa) ಅವರು ಇನ್ನೂ ಜೀವಂತವಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ನಗರದ ಗೋಪಾಲಗೌಡ ಬಡಾವಣೆಯಲ್ಲಿ ಶನಿವಾರ ಆಲ್ಕೊಳ ವೃತ್ತದಿಂದ ಡಿವಿಜಿ ವೃತ್ತ(Dvg circle)ದವರೆಗೆ 100 ಅಡಿ ದ್ವಿಪಥ ರಸ್ತೆಗೆ ಮಾಜಿ ಸಿಎಂ ‘ಎಸ್.ಬಂಗಾರಪ್ಪ’ ನಾಮಫಲಕ(Nameplate) ಉದ್ಘಾಟನೆ ಮತ್ತು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ 290 ಮನೆಗಳಿಗೆ ಹಕ್ಕುಪತ್ರಗಳ ವಿತರಣೆ ಹಾಗೂ ಆಶ್ರಯ ಯೋಜನೆ ಅಡಿ ಫಲಾನುಭವಿಗಳಿಗೆ ಮನೆಗಳ ಕೀ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಎಸ್.ಬಂಗಾರಪ್ಪ ಅವರು ಬಡವರ ಏಳಿಗೆಗಾಗಿ ಆಶ್ರಯ(Ashraya), ಆರಾಧನಾ, ಅಕ್ಷಯ, ಗ್ರಾಮೀಣ ಕೃಪಾಂಕ, ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಹೀಗೆ ಹತ್ತು ಹಲವಾರು ಯೋಜನೆಗಳನ್ನು ನೀಡಿದ್ದರು. ಅದರಿಂದ ರೈತರು ಆರ್ಥಿಕವಾಗಿ ಸುಧಾರಣೆಯಾಗಿದ್ದಾರೆ. ಬಂಗಾರಪ್ಪ ಅವರ ಹೆಸರನ್ನು ಗೋಪಾಲಗೌಡ(Gopalagouda) ಬಡಾವಣೆಯ ರಸ್ತೆಗೆ ನಾಮಕರಣ ಮಾಡಿವುದು ಹೆಮ್ಮೆಯ ವಿಷಯವಾಗಿದ್ದು, ಅವರ ಯೋಜನೆಗಳು ಮತ್ತು ಕಾರ್ಯಕ್ರಮಗಳು ಸದಾ ಹಸಿರಾಗಿವೆ ಎಂದರು.
ಹಕ್ಕುಪತ್ರಗಳನ್ನು ವಿತರಣೆ ಮಾಡುವುದರಲ್ಲಿಯೂ ಬಂಗಾರಪ್ಪ ಚಿಂತನೆ ಇತ್ತು. ಗೋಪಾಲಗೌಡರ ಜಯಂತಿಯಂದೇ ರಸ್ತೆಗೆ ಬಂಗಾರಪ್ಪ ಹೆಸರು ನಾಮಕರಣವಾಗುತ್ತಿರುವುದು ಹಿರಿಯ ಚೇತನಗಳ ಆಶೀರ್ವಾದವಾಗಿದೆ. ಉಸ್ತುವಾರಿ ಸಚಿವನಾಗಿ ಈ ಕಾರ್ಯಕ್ರಮ ಉದ್ಘಾಟಿಸುತ್ತಿರುವುದಕ್ಕೆ ನನಗೆ ಹೆಮ್ಮೆ ಮತ್ತು ನನ್ನ ಪುಣ್ಯವಾಗಿದೆ. ನಾನು ಕೂಡ ತಂದೆಯವರ ತತ್ವ, ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಹೋಗುತ್ತಿದ್ದೇನೆ ಎಂದರು.
ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ 290 ಮನೆಗಳಿಗೆ ಹಕ್ಕುಪತ್ರಗಳ ವಿತರಣೆ ಹಾಗೂ ಆಶ್ರಯ ಯೋಜನೆ ಅಡಿಯಲ್ಲಿ ಆಯ್ಕೆಯಾಗಿರುವ ಫಲಾನುಭವಿಗಳಿಗೆ ಮನೆಗಳ ಕೀ ಹಸ್ತಾಂತರ ಮಾಡಲಾಯಿತು.
ಎಂಎಲ್‌ಸಿ ಬಲ್ಕೀಶ್ ಬಾನು, ರಾಜ್ಯ ಎಸ್‌ಸಿ, ಎಸ್‌ಟಿ ಅಲೆಮಾರಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ, ರಾಜ್ಯ ಜವಳಿ ಮೂಲ ಸೌಲಭ್ಯ(ವಿದ್ಯುತ್ ಮಗ್ಗಗಳ) ನಿಗಮದ ಅಧ್ಯಕ್ಷ ಚೇತನ್ ಗೌಡ, ಮಾಜಿ ಶಾಸಕ ಡಾ. ಜಿ.ಡಿ.ನಾರಾಯಣಪ್ಪ, ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ, ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಮುಖಂಡರಾದ ವೈ.ಎಚ್.ನಾಗರಾಜ್, ಎಸ್.ಪಿ.ಶೇಷಾದ್ರಿ, ವಿಜಯಕುಮಾರ್ ಸಂತೇಕಡೂರು, ರಮೇಶ್ ಶಂಕರಘಟ್ಟ, ಮಧು, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ,ಎಸ್‌ಪಿ ಬಿ.ನಿಖಿಲ್, ಪಾಲಿಕೆ ಆಯುಕ್ತ ಕೆ.ಮಾಯಣ್ಣಗೌಡ ಮತ್ತಿತರರು ಉಪಸ್ಥಿತರಿದ್ದರು.
ಜಾತಿಗೆ ಅಂಟಿಕೊಂಡಿರದ ಬಂಗಾರಪ್ಪ
ಮಾಜಿ ಸಿಎಂ ಎಸ್.ಬಂಗಾರಪ್ಪ ಅವರು ಎಂದಿಗೂ ಜಾತಿಗೆ ಅಂಟಿಕೊಂಡಿರಲಿಲ್ಲ. ರಾಜ್ಯದ ಕಟ್ಟಕಡೆಯ ವ್ಯಕ್ತಿ ಬಗ್ಗೆಯೂ ಸದಾ ಚಿಂತಿಸುತ್ತಿದ್ದರು. ಅಕ್ಷಯ, ಆರಾಧನಾ, ಆಶ್ರಯದಂತಹ ಉತ್ತಮ ಯೋಜನೆಗಳನ್ನು ನೀಡಿದ ಶ್ರೇಷ್ಠ ನಾಯಕ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಬಣ್ಣಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗೋಪಾಲಗೌಡ ಬಡಾವಣೆಯ ರಸ್ತೆಗೆ ಬಂಗಾರಪ್ಪ ಅವರ ಹೆಸರು ನಾಮಕರಣ ಮಾಡಿರುವುದು ಸಂತಸದ ವಿಷಯ. ಅಂದುಕೊಂಡಂತೆ ಕಾರ್ಯ ನಿರ್ವಹಿಸುತ್ತಿದ್ದ ಧೀಮಂತ ವ್ಯಕ್ತಿ ಅವರು.ಬಂಗಾರಪ್ಪ ಅವರು ಬಡವರಿಗೆ ಸೂರು ಒದಗಿಸಲು ತಂದ ಆಶ್ರಯ ಯೋಜನೆಯಡಿ ಬಡವರಿಗೆ ಹಕ್ಕುಪತ್ರಗಳನ್ನು ನೀಡಲಾಗುತ್ತಿದೆ. ಇನ್ನೂ ಹಲವರಿಗೆ ನೀಡಬೇಕಿದೆ. ಕೆರೆ ಕಟ್ಟೆಗಳ ಜಾಗವನ್ನು ರಕ್ಷಿಸುವ ಅಗತ್ಯವಿದೆ. ದೊಡ್ಡ ದೊಡ್ಡ ಕಟ್ಟಡಗಳು ಕೆರೆಗಳ ಜಾಗದಲ್ಲಿ ನಿರ್ಮಾಣವಾಗಿದ್ದು ಇದಕ್ಕೆ ಪರಿಹಾರ ಹುಡುಕಬೇಕಿದೆ ಎಂದರು.