ಭದ್ರಾವತಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಬಷೀರ್ ಅಹಮದ್, ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರೇಮಾ ಬದರಿನಾರಾಯಣ, ಪೌರಾಯುಕ್ತ ಕೆ.ಎನ್.ಹೇಮಂತ್ ಇದ್ದರು.
ಭದ್ರಾವತಿ: ನಗರಸಭೆ ವ್ಯಾಪ್ತಿಯ ಎಲ್ಲ ವಿದ್ಯುತ್ ಕಂಬಗಳಿಗೆ ಹಾಗೂ ರಸ್ತೆ ವಿಭಜಕಗಳ ಮಧ್ಯೆ ಅಳವಡಿಸಿರುವ ಹೈಮಾಸ್ಟ್ ಕಂಬಗಳಿಗೆ ಫ್ಲೆಕ್ಸ್, ಬಂಟಿಂಗ್ಸ್, ಬ್ಯಾನರ್ ಕಟ್ಟುವುದನ್ನು ಸಂಪೂರ್ಣ ನಿಷೇಧಿಸಿ ಗುರುವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಒಮ್ಮತದ ತೀರ್ಮಾನ ತೆಗೆದುಕೊಳ್ಳಲಾಯಿತು.
ಗೀತಾ ರಾಜ್‌ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಕೊನೇ ಅವಧಿಯ ಸಾಮಾನ್ಯ ಸಭೆಯಲ್ಲಿ ಬ್ಯಾನರ್ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಚನ್ನಪ್ಪ, ಬಿ.ಟಿ.ನಾಗರಾಜ್, ಬಿ.ಕೆ.ಮೋಹನ್, ನಗರದ ಬಿ.ಎಚ್.ರಸ್ತೆ, ತರೀಕೆರೆ ರಸ್ತೆ ಸೇರಿ ಹಲವೆಡೆ ವಿಭಜಕ ನಿರ್ಮಿಸಿ, ಹೈಮಾಸ್ಟ್ ದೀಪಗಳನ್ನು ಅಳವಡಿಸಲಾಗಿದೆ. ಆ ಕಂಬಗಳಿಗೆ ಫ್ಲೆಕ್ಸ್, ಬ್ಯಾನರ್ ಅಳವಡಿಸಿ ಪರಿಸರ ಹಾಳು ಮಾಡಲಾಗುತ್ತಿದೆ. ಇದಕ್ಕೆ ಅವಕಾಶ ಇರದಿದ್ದರೂ ಅಧಿಕಾರಿಗಳು ಶಿಸ್ತು ಕ್ರಮ ಕೈಗೊಳ್ಳುತ್ತಿಲ್ಲ. ಯಾರಾದರೂ ಫೋನ್ ಮಾಡಿ ಅವಕಾಶ ಕೊಡಿ ಎಂದರೆ ಆಯುಕ್ತರು ಅವಕಾಶ ಕೊಟ್ಟು ಸುಮ್ಮನಾಗುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪೌರಾಯುಕ್ತ ಹೇಮಂತ್ ಮಾತನಾಡಿ, ಫ್ಲೆಕ್ಸ್, ಬ್ಯಾನರ್ ಅಳವಡಿಕೆ ನಿಲ್ಲಿಸಲು ಇದುವರೆಗೂ ಯಾವುದೇ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಸಾಧ್ಯವಾಗಿಲ್ಲ. ಯಾವುದಾದರೂ ನಿಗದಿತ ಜಾಗ ಗುರುತಿಸಿ, ನಗರಸಭೆ ಅನುಮತಿ ಪಡೆದು ಸೀಮಿತ ಅವಧಿಗೆ ಹಾಕಿಕೊಳ್ಳುವ ತೀರ್ಮಾನವನ್ನು ಸದಸ್ಯರು ಕೈಗೊಳ್ಳುವುದು ಸೂಕ್ತ ಎಂದು ಸಲಹೆ ನೀಡಿದರು. ಇದಕ್ಕೆ ಕೆಲವು ಸದಸ್ಯರು ವಿರೋಧ ವ್ಯಕ್ತಪಡಿಸಿ ನಮ್ಮ ಊರಿಗೆ ಫ್ಲೆಕ್ಸ್‌ಗಳೇ ಬೇಡ ಎಂದರು.
ಅನಗತ್ಯವಾಗಿ ಟ್ರಾೃಕ್ಟರ್, ಟಿಪ್ಪರ್ ಖರೀದಿಸುವುದನ್ನು ಬಿಟ್ಟು, ಅವುಗಳಿಗೆ ಮಾಡುವ ಖರ್ಚನ್ನು ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಲು ಬಳಸಿಕೊಳ್ಳಿ. ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡಬೇಡಿ. ಜೇಡಿಕಟ್ಟೆ, ಕವಲಗುಂದಿ ಗ್ರಾಮಗಳಲ್ಲಿರುವ ಜಮೀನುಗಳಲ್ಲಿ ಅಕ್ರಮವಾಗಿ ಲೇಔಟ್ ಮಾಡಿ ಅವುಗಳಿಗೆ ಖಾತೆ ಮಾಡಿ ಸೈಟುಗಳನ್ನು ಹಂಚಲಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಒತ್ತಾಯಿಸಲಾಯಿತು.
15 ಹಣಕಾಸು ಯೋಜನೆಯ ಎಂಪಿಸಿ ಅನುದಾನದಡಿ 25 ಲಕ್ಷ ರೂ. ಮೇಲ್ಪಟ್ಟ ವಿವಿಧ ಕಾಮಗಾರಿ, 15 ಕೋಟಿ ರೂ. ವಿಶೇಷ ಅನುದನದಡಿ ರಸ್ತೆ, ಚರಂಡಿ ಕಾಮಗಾರಿ ಸೇರಿದಂತೆ 13 ವಿಷಯಗಳಿಗೆ ಸಭೆ ಅನುಮೋದಿಸಿತು. ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರೇಮಾ ಬದರಿನಾರಾಯಣ, ಉಪಾಧ್ಯಕ್ಷ ಬಷೀರ್ ಅಹಮದ್ ಇತರರಿದ್ದರು.