ಭದ್ರಾವತಿ ನಗರದ ಬಸವೇಶ್ವರ ವೃತ್ತದಲ್ಲಿರುವ ಶ್ರೀ ಕನ್ನಿಕಾ ಪರಮೇಶ್ವರಿ ಅಮ್ಮನವರ ದೇವಸ್ಥಾನ ವಾಸವಿ ಮಹಲ್‌ನಲ್ಲಿ ಪ್ರದರ್ಶಕ್ಕೆ ಇಟ್ಟಿರುವ ಅಯೋಧ್ಯೆ ಶ್ರೀರಾಮ ಸುವರ್ಣ ಮಂದಿರ.
- ಕಲಾವಿದ ವಿನಯ್ ರಾಮ್ ಕೈಚಳಕದಲ್ಲಿ ರಚನೆ
- ವಾಸವಿ ಜಯಂತ್ಯುತ್ಸವ ಅಂಗವಾಗಿ ನಿರ್ಮಾಣ
- ಬಸವೇಶ್ವರ ವೃತ್ತದಲ್ಲಿದೆ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನ
ಭದ್ರಾವತಿ: ಅಯೋಧ್ಯೆಯಲ್ಲಿರುವ ಶ್ರೀರಾಮ ಮಂದಿರವನ್ನು ನೋಡಿಲ್ಲವೆ? ಹಾಗಾದರೆ ನಗರದ ಬಸವೇಶ್ವರ ವೃತ್ತದ ಶ್ರೀ ಕನ್ನಿಕಾ ಪರಮೇಶ್ವರಿ ಅಮ್ಮನವರ ದೇವಸ್ಥಾನ ವಾಸವಿ ಮಹಲ್‌ಗೆ ಬನ್ನಿ. ಶ್ರೀ ರಾಮಮಂದಿರವನ್ನು ಕಣ್ತುಂಬಿಕೊಳ್ಳಬಹುದು.
ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಬಿದರೆ ಗ್ರಾಮದ ಕಲಾವಿದ ವಿನಯ್ ರಾಮ್ ಅವರು ಅಯೋಧ್ಯೆಯಲ್ಲಿರುವ ಶ್ರೀರಾಮ ಮಂದಿರ ಮಾದರಿ ಅದ್ಭುತವಾದ ಶ್ರೀರಾಮ ಸುವರ್ಣ ಮಂದಿರವನ್ನು ನಿರ್ಮಿಸಿದ್ದು, ಸಾರ್ವಜನಿಕರ ಪ್ರದರ್ಶನಕ್ಕೆ ಇಡಲಾಗಿದೆ.
ವಾಸವಿ ಜಯಂತ್ಯುತ್ಸವ ಅಂಗವಾಗಿ ಆರ್ಯವೈಶ್ಯ ಮಂಡಳಿಯ ಕನ್ನಿಕಾ ಪರಮೇಶ್ವರಿ ಅಮ್ಮನವರ ದೇವಸ್ಥಾನದ ಆವರಣದಲ್ಲಿ ನಿರ್ಮಿಸಿರುವ ಮಂದಿರದ ಮಾದರಿಯನ್ನು ಕಣ್ತುಂಬಿಕೊಳ್ಳಲು ತಾಲೂಕಿನ ವಿವಿಧೆಡೆಯಿಂದ ನೂರಾರು ಜನರು ಆಗಮಿಸುತ್ತಿದ್ದಾರೆ. ಸಾವಿರಾರು ಕಿ.ಮೀ ದೂರದಲ್ಲಿರುವ ಅಯೋಧ್ಯೆ ಶ್ರೀರಾಮಮಂದಿರ ನೋಡಿದಷ್ಟು ಸಂತೃಪ್ತಿ ಹೊಂದುವ ಮೂಲಕ ಕೈಮುಗಿದು ತೆರಳುತ್ತಿದ್ದಾರೆ.
ಶ್ರೀರಾಮನಿಗೆ ನನ್ನ ಜೀವನ ಸಮರ್ಪಿಸಿದ್ದು, ಸುವರ್ಣ ಮಂದಿರವನ್ನು ನಿರ್ಮಿಸಲು ನನಗೆ ರಾಮಭಕ್ತ ಹನುಮಂತ ಶಕ್ತಿ ತುಂಬಿದ್ದಾನೆ. ಭಕ್ತರ ಸಂಭ್ರಮ, ಹಿರಿಯರ ಆಶೀರ್ವಾದ ನನಗೆ ಸಾಕು. ಎಲ್ಲರಿಗೂ ಅಯೋಧ್ಯೆ ರಾಮಮಂದಿರ ಮಾದರಿ ದರ್ಶನ ಮಾಡಿಸಬೇಕೆನ್ನುವುದು ಹಾಗೂ ಮಕ್ಕಳಿಗೂ ಪ್ರೇರೇಪಣೆ ನೀಡಬೇಕೆನ್ನುವ ಗುರಿ ನನ್ನದು.
ರಾಮಭಕ್ತರಿಗೆ ಅಯೋಧ್ಯೆಗೆ ಹೋಗಿ ಶ್ರೀರಾಮ ಮಂದಿರ ನೋಡಬೇಕು ಎನ್ನುವ ಆಸೆ ಇರುತ್ತದೆ. ಆದರೆ ಕೆಲವರಿಗೆ ಆರ್ಥಿಕ ಸಮಸ್ಯೆಯಿಂದ ದೂರದೂರಿಗೆ ತೆರಳಿ ಬಾಲ ರಾಮನ ದರ್ಶನ ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಅದೇ ಮಾದರಿ ಶ್ರೀರಾಮ ಸುವರ್ಣ ದೇವಾಲಯದ ಮಾದರಿ ನಿರ್ಮಿಸಿ ನಾಡಿನೆಲ್ಲೆಡೆ ಪ್ರದರ್ಶನಕ್ಕಿಟ್ಟರೆ ಭಕ್ತರು ನೋಡಿ ಸಂಭ್ರಮಿಸುತ್ತಾರೆ. ಎಲ್ಲರೂ ಅಯೋಧ್ಯೆ ಮಾದರಿ ಮಂದಿರ ನೋಡಲಿ ಎನ್ನುವ ಉದ್ದೇಶದಿಂದ ದೇವಾಲಯ ನಿರ್ಮಿಸಲಾಗಿದೆ ಎನ್ನುತ್ತಾರೆ ಕಲಾವಿದ ವಿನಯ್ ರಾಮ್.
ಒಂಬತ್ತು ದಿನ ದರ್ಶನ: ಬಂಗಾರದಲ್ಲಿ ನಿರ್ಮಾಣ ಮಾಡಿದಂತೆ ಕಾಣುವ ಶ್ರೀರಾಮ ಸುವರ್ಣ ಮಂದಿರ ರಾತ್ರಿ ವೇಳೆಯಲ್ಲಿ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ. 12 ಅಡಿ ಎತ್ತರ ಇರುವ ಮಂದಿರ 30 ಅಡಿ ಅಗಲವಿದೆ. 3 ಮಹಡಿ ಹೊಂದಿದ್ದು, ನೆಲಮಹಡಿಯಲ್ಲಿ ಬಾಲ ರಾಮನ ಪ್ರತಿಷ್ಠಾಪಿಸಿದ್ದರೆ 1ನೇ ಮಹಡಿಯಲ್ಲಿ ಶ್ರೀರಾಮನ ಪರಿವಾರ(ಪಟ್ಟಾಭಿರಾಮ)ವನ್ನು ಪ್ರತಿಷ್ಠಾಪಿಸಲಾಗಿದೆ. 3ನೇ ಹಂತದಲ್ಲಿ ಗೋಪುರ ನಿರ್ಮಾಣ ಮಾಡಲಾಗಿದೆ. ರಾಜ್ಯದೆಲ್ಲೆಡೆ ವಿವಿಧ ಭಾಗಗಳಲ್ಲಿ ಸಾರ್ವಜನಿಕರ ಉಚಿತ ದರ್ಶನಕ್ಕೆ ಇಡಲಾಗಿದೆ. ಭದ್ರಾವತಿಯಲ್ಲಿ ಜು.9ರಿಂದ ಪ್ರದರ್ಶನಕ್ಕೆ ಇಡಲಾಗಿದೆ. ಇದು 108ನೇ ಪ್ರದರ್ಶನವಾಗಿದ್ದು, 9 ದಿನ ಭಕ್ತರ ದರ್ಶನಕ್ಕೆ ಸಿಗಲಿದೆ.
ಪರಿಸರಸ್ನೇಹಿ ವಸ್ತುಗಳ ಬಳಕೆ: ಅಯೋಧ್ಯೆ ಶ್ರೀರಾಮ ಸುವರ್ಣ ಮಂದಿರವನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸಲು ಸುಲಭವಾಗುವ ನಿಟ್ಟಿನಲ್ಲಿ ಪರಿಸರ ಸ್ನೇಹಿ ವಸ್ತುಗಳನ್ನು ಮಾತ್ರ ಬಳಸಿ ನಿರ್ಮಿಸಲಾಗಿದೆ. ಥರ್ಮಾಕೋಲ್, ಫೋಮ್ ಬೋರ್ಡ್, ಹಗುರವಾದ ಮರದ ತುಂಡುಗಳು ಹಾಗೂ ಟೆಂಪರ್ ಕಲರ್ ವಾಟರ್ ಪೈಂಟ್ ಬಳಸಿದ್ದಾರೆ. ರಾಮಭಕ್ತ ಶ್ರೀ ಹನುಮಂತನ ಅನುಗ್ರಹದೊಂದಿಗೆ ನಿರ್ಮಾಣ ಮಾಡಿರುವ ರಾಮಮಂದಿರವನ್ನು ಮೂರೂವರೆ ವರ್ಷದಿಂದ ನಾಡಿನೆಲ್ಲೆಡೆ ವಿವಿಧ ಭಾಗಗಳಲ್ಲಿ ಪ್ರದರ್ಶನಕ್ಕಿಟ್ಟು ಅಲ್ಲಿನ ಭಕ್ತರ ಮನಸ್ಸು ಗೆಲ್ಲುತ್ತಿರುವ ವಿನಯ್ ರಾಮ್ ದೇಶವ್ಯಾಪಿ ಸಂಚರಿಸಿ 308 ಪ್ರದರ್ಶನ ನೀಡುವ ಗುರಿ ಹೊಂದಿದ್ದಾರೆ. ಸಾಮೂಹಿಕ ಜಪ, ಮಕ್ಕಳಿಗೆ ರಸಪ್ರಶ್ನೆ, ವೇಷಭೂಷಣ ಸ್ಪರ್ಧೆಗಳು ಸಹ ನಡೆಯುತ್ತಿವೆ.