ಶಿವಮೊಗ್ಗದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ತಡೆದರು.
- ನೀಟ್ ಪರೀಕ್ಷೆ ನಡೆಸುವಲ್ಲಿ ಕೇಂದ್ರ ವೈಫಲ್ಯ
- ಪೊಲೀಸ್ ಚೌಕಿಯಲ್ಲಿ ಯುವ ಕಾಂಗ್ರೆಸ್ ಪ್ರತಿಭಟನೆ
- ನೂರಾರು ಕಾರ್ಯಕರ್ತರನ್ನು ಬಂಧಿಸಿ ಕರೆದೊಯ್ದ ಪೊಲೀಸರು
ಶಿವಮೊಗ್ಗ: ನೀಟ್ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ(question paper leaked) ಖಂಡಿಸಿ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ವಿನೋಬನಗರದಲ್ಲಿರುವ ಸಂಸದ ಬಿ.ವೈ.ರಾಘವೇಂದ್ರ ಅವರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ನೂರಾರು ಕಾರ್ಯಕರ್ತರನ್ನು ಬಂಧಿಸಿ ಕರೆದೊಯ್ದು ಅನಂತರ ಬಿಡುಗಡೆ ಮಾಡಿದರು.
ರಾಜಸ್ಥಾನ್ ಮತ್ತು ಉತ್ತರಾಖಂಡ್‌ನಲ್ಲಿ ನಡೆದ ನೀಟ್-ಯುಜಿ ಪರೀಕ್ಷೆ(NEET exam) ಕುರಿತು ಕೇಳಿಬಂದಿರುವ ಪ್ರಶ್ನೆಪತ್ರಿಕೆ ಸೋರಿಕೆ ವದಂತಿಗೆ ಪುಷ್ಟಿ ಕೊಡುವಂತೆ ಮೇ 3ರಂದು ನಡೆದ ಪರೀಕ್ಷೆಯ ಅಕ್ರಮ ಆರೋಪ ಸಾಬೀತಾಗಿದೆ. ಪಾರದರ್ಶಕತೆ(Transparency) ಕಾಪಾಡಲು ವಿಫಲವಾದ ಕೇಂದ್ರ ಸರ್ಕಾರ ಪರೀಕ್ಷೆಯನ್ನೇ ರದ್ದು ಮಾಡಿರುವುದು ಆಡಳಿತ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ನೀಟ್ ವ್ಯವಸ್ಥೆ(NEET system)ಯನ್ನು ದೇಶಾದ್ಯಂತ ವೈದ್ಯಕೀಯ ಶಿಕ್ಷಣ ಪ್ರವೇಶದಲ್ಲಿ ಪಾರದರ್ಶಕತೆ, ಸಮಾನ ಅವಕಾಶ ಹಾಗೂ ಮೆರಿಟ್ ಆಧಾರಿತ ಪ್ರವೇಶ ಕಲ್ಪಿಸುವ ಉದ್ದೇಶದಿಂದ 2012ರಲ್ಲಿ ಯುಪಿಎ ಸರ್ಕಾರ(UPA Govt) ವ್ಯವಸ್ಥೆ ಜಾರಿಗೆ ತಂದಿತ್ತು. ಆದರೆ ಇಂದು ಅದೇ ವ್ಯವಸ್ಥೆ ಪ್ರಶ್ನೆಪತ್ರಿಕೆ ಸೋರಿಕೆ ಆರೋಪ, ಕೋಚಿಂಗ್ ಮಾಫಿಯಾ(Coaching mafia), ಪರೀಕ್ಷಾ ಅಕ್ರಮ ಮತ್ತು ಹಣದ ಪ್ರಭಾವದಿಂದ ಮೂಲ ಉದ್ದೇಶ ಕಳೆದುಕೊಳ್ಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
2024ರಲ್ಲೂ ನೀಟ್ ಯುಜಿ(Neet Ug) ಕುರಿತು ಪ್ರಶ್ನೆಪತ್ರಿಕೆ ವಿವಾದ ದೇಶಾದ್ಯಂತ ಕೇಳಿಬಂದಿತ್ತು. ರಾಷ್ಟ್ರಮಟ್ಟದ ಪರೀಕ್ಷೆಯ ಭದ್ರತೆ ಮತ್ತು ವಿಶ್ವಾಸಾರ್ಹತೆ ಕಾಪಾಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಇಂತಹ ಸರ್ಕಾರವನ್ನು ವಜಾಗೊಳಿಸುವಂತೆ ರಾಷ್ಟ್ರಪತಿಗೆ ಮನವಿ ಮಾಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಜವಳಿ ನಿಗಮದ ಅಧ್ಯಕ್ಷ ಚೇತನ್ ಗೌಡ, ಪಾಲಿಕೆ ಮಾಜಿ ಸದಸ್ಯೆ ಯಮುನಾ ರಂಗೇಗೌಡ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರ್ಷಿತ್ ಗೌಡ, ನಗರಾಧ್ಯಕ್ಷ ಚರಣ್, ಗ್ರಾಮಾಂತರ ಅಧ್ಯಕ್ಷ ಪ್ರವೀಣ್, ಮಧುಸೂದನ್ ಇತರರಿದ್ದರು.
ಮನೆಗೆ ಪೊಲೀಸ್ ಭದ್ರತೆ
ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಪೊಲೀಸ್ ಚೌಕಿ ಸರ್ಕಲ್‌ನಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪಾದಯಾತ್ರೆ ಮೂಲಕ ತೆರೆಳಿ ವಿನೋಬನಗರದಲ್ಲಿರುವ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ಅವರ ಮನೆಗೆ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು. ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ನೂಕುನುಗ್ಗಲು ಉಂಟಾಯಿತು. ನಂತರ ಪೊಲೀಸರು ಕಾರ್ಯಕರ್ತರನ್ನು ಬಂಧಿಸಿ ಕರೆದೊಯ್ದರು.