ಸೊರಬದ ಹೊಸಕೊಪ್ಪ ಗ್ರಾಮದಲ್ಲಿ ಆಯೋಜಿಸಿದ್ದ ನಮ್ಮ ನಡೆ-ಹಳ್ಳಿಗಳ ಕಡೆ ಶ್ರಾವಣ ಕಾರ್ಯಕ್ರಮವನ್ನು ಶಾಂತಪುರ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಶ್ರೀ ಕುಮಾರಕೆಂಪಿನ ಸಿದ್ಧವೃಷಭೇಂದ್ರ ಸ್ವಾಮೀಜಿ, ಗಂಗಾಧರ ದೇವರು, ನಾಗರಾಜ ಗೌಡ ಇತರರಿದ್ದರು. 
ಶಿವಮೊಗ್ಗ

ಶರಣರ ದರ್ಶನದಿಂದ ಪುಣ್ಯಪ್ರಾಪ್ತಿ

ಸೊರಬ: ಭಾರತ ಅಧ್ಯಾತ್ಮ ಮತ್ತು ಭಕ್ತಿ ಪರಂಪರೆಯಿಂದ ನಡೆದುಬಂದ ದೇಶ. ಶ್ರಾವಣ ಮಾಸ ಅತ್ಯಂತ ಪವಿತ್ರವಾಗಿದ್ದು, ಶರಣರ ದರ್ಶನ ಮಾಡುವುದರಿಂದ ಪುಣ್ಯಪ್ರಾಪ್ತಿಯಾಗುತ್ತದೆ ಎಂದು ಜಡೆ ಸಂಸ್ಥಾನ ಮಠದ ಶ್ರೀ ಕುಮಾರಕೆಂಪಿನ ಸಿದ್ಧವೃಷಭೇಂದ್ರ ಸ್ವಾಮೀಜಿ ಹೇಳಿದರು.
ತಾಲೂಕಿನ ಹೊಸಕೊಪ್ಪ ಗ್ರಾಮದಲ್ಲಿ ಶ್ರಾವಣ ಮಾಸ ಅಂಗವಾಗಿ ನಮ್ಮ ನಡೆ-ಹಳ್ಳಿಗಳ ಕಡೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಮನುಷ್ಯನ ಬದುಕು ಅರ್ಥಪೂರ್ಣವಾಗಲು ಪುರಾಣ ಪ್ರವಚನಗಳಲ್ಲಿ ಭಾಗವಹಿಸಬೇಕು. ಶಿವ ಶರಣರ ಸದ್ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಶಾಂತಪುರ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಶ್ರಾವಣ ಸಂಜೆ ಕಾರ್ಯಕ್ರಮ ಮಕ್ಕಳಲ್ಲಿ ಸಂಸ್ಕಾರ ಮತ್ತು ಧಾರ್ಮಿಕ ಬೆಳೆಸಲು ನೆರವಾಗಲಿದೆ ಎಂದರು.
ಸೆ.10ರವರಗೆ ಶ್ರಾವಣ ಮಾಸ ಅಂಗವಾಗಿ ನಮ್ಮ ನಡೆ-ಹಳ್ಳಿಗಳ ಕಡೆ ಎಂಬ ಶ್ರಾವಣ ಸಂಜೆ ಕಾರ್ಯಕ್ರಮ ಪ್ರತಿ ದಿನ ನಡೆಯಲಿದೆ. ಕಾರ್ಯಕ್ರಮದಲ್ಲಿ ಗಂಗಾಧರ ದೇವರು, ನಾಗರಾಜ ಗೌಡ, ನಿಂಗಪ್ಪ ಗೌಡ, ಶಿವಮೂರ್ತಿ ಗೌಡ, ಮೃತ್ಯುಂಜಯ ಗೌಡ, ರಾಜ ಗೌಡ,  ಗದಿಗಪ್ಪ, ಭಜನಾ ಮಂಡಳಿ ಸದಸ್ಯರು ಹಾಜರಿದ್ದರು.