ಮಹಾವೀರ ಜಯಂತಿ ಅಂಗವಾಗಿ ಬಿದರೂರು ಶ್ರೀ ವರ್ಧಮಾನ ಜೈನ ಬಸದಿ ಸಮಿತಿಯಿಂದ ವರ್ಧಮಾನ ಸ್ವಾಮಿಯ ಪಲ್ಲಕ್ಕಿ ಉತ್ಸವ ನೆರವೇರಿತು. ಶಾಂತರಾಜ್, ವೀರರಾಜಯ್ಯ ಜೈನ್ ಇತರರಿದ್ದರು. 
ಶಿವಮೊಗ್ಗ

ಮಹಾವೀರರ ತತ್ವ ಪಾಲನೆಯಿಂದ ಮೋಕ್ಷ ಪ್ರಾಪ್ತಿ | Mahaveera jayanti

ಕಾರ್ಗಲ್: ಜೈನರಾಗಿ ಜನ್ಮತಳೆದ ಪ್ರತಿಯೊಬ್ಬರ ಅಂತಿಮ ಗುರಿ ಮೋಕ್ಷ ಗಳಿಸುವುದಾಗಿದೆ ಎಂದು ಸೋಂದ ಸ್ವಾದಿ ದಿಗಂಬರ ಜೈನ ಸಂಸ್ಥಾನದ ಶ್ರೀ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ಹೇಳಿದರು.
ಮಹಾವೀರ ಜಯಂತಿ ಅಂಗವಾಗಿ ಬಿದರೂರು ಶ್ರೀ ವರ್ಧಮಾನ ದಿಗಂಬರ ಜೈನ ಬಸದಿಯಲ್ಲಿ ಏರ್ಪಡಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಜೈನ ಧರ್ಮದಲ್ಲಿ ಜನಿಸಿದ ಮಾತ್ರಕ್ಕೆ ಮೋಕ್ಷ ಲಭಿಸುವುದಿಲ್ಲ. ಧರ್ಮದ ತತ್ವ ಸಿದ್ಧಾಂತಗಳನ್ನು ಪಾಲಿಸಿದಾಗ ಮೋಕ್ಷ ಸಾಧಿಸಲು ಸಾಧ್ಯ ಎಂದು ತಿಳಿಸಿದರು.
ಸಂಸಾರವೆಂಬ ಜೀವನದಲ್ಲಿ ಯಾರ‌್ಯಾರು  ಕಷ್ಟ ಅನುಭವಿಸುತ್ತಿದ್ದಾರೋ ಅಂಥವರಿಗೆ ಸುಖದ ನೆಲೆ ಒದಗಿಸುವುದೇ ಜೈನ ಧರ್ಮದ ಉದ್ದೇಶ. ಇಂತಹ ಅಹಿಂಸಾ ಧರ್ಮದಲ್ಲಿ ಜನಿಸಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು. 
ಶ್ರೀಗಳ ಸಾನ್ನಿಧ್ಯದಲ್ಲಿ ದಿನವಿಡೀ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗೆ ಧ್ವಜಾರೋಹಣ, ಶ್ರೀ ವರ್ಧಮಾನ ಸ್ವಾಮಿಗೆ ಕಲಶಾಭಿಷೇಕ, ಪಂಚಾಮೃತ ಅಭಿಷೇಕ, ಮಹಾಶಾಂತಿ ಮಂತ್ರ, ಸ್ವಾಮಿಯ ನಾಮಕರಣ ತೊಟ್ಟಿಲೋತ್ಸವ ನೆರವೇರಿದವು. ಸಂಜೆ ಶ್ರೀ ಸ್ವಾಮಿಯ ಪಲ್ಲಕ್ಕಿ ಉತ್ಸವ ಅದ್ದೂರಿಯಾಗಿ ನೆರವೇರಿತು. ಮರಬಿಡಿ ಸೀಮೆಯ ಜೈನ ಸಮಾಜದವರು ಭಾಗವಹಿಸಿದ್ದರು.
ಬಿದರೂರು ಜೈನ ಬಸದಿ ಸಮಿತಿ ಅಧ್ಯಕ್ಷ ಶಾಂತರಾಜ್, ವಡನಬೈಲ್ ಶ್ರೀ ಬಳೆ ಪದ್ಮಾವತಿ ದೇವಸ್ಥಾನದ ಧರ್ಮದರ್ಶಿ ಎಚ್.ಎಂ.ವೀರರಾಜಯ್ಯ ಜೈನ್, ಜೈನ ಸಮಾಜದ ತಾಲೂಕು ಅಧ್ಯಕ್ಷ ಎಂ.ಪಿ.ಲೋಕರಾಜ್ ಜೈನ್, ಬಿದರೂರು ಜೈನ ಬಸದಿ ಪ್ರತಿಷ್ಠಾಚಾರ್ಯ ಮೋಹನ್‌ಕುಮಾರ್ ಜೈನ್ ಇತರರಿದ್ದರು.